ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅಧಿಕಾರ ಹಸ್ತಾಂತರ ಗಲಾಟೆ ಮುಗಿಯುತ್ತಲೇ ಇಲ್ಲ. ಹೀಗಿರುವಾಗಲೇ ಯತೀಂದ್ರ ಸಿದ್ದರಾಮಯ್ಯ ಸಡನ್ ಟಾರ್ಗೆಟ್ ಆಗಿದ್ದಾರೆ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಒಪ್ಪಿಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಯತೀಂದ್ರ ಹೇಳಿಕೆ, ಡಿಕೆ ಬಣದವರನ್ನು ಕೆರಳಿಸಿದ್ದರೆ, ಸಿದ್ದು ಬಣದವರಿಗೆ ಆಹ್ಲಾದಕರ ಅನುಭವ ನೀಡಿದೆ. ಆದರೆ, ರಾಜಕೀಯ ತಜ್ಞರ ಪ್ರಕಾರ ಇದೂ ಒಂದು ತಂತ್ರ. ತಂತ್ರಗಾರಿಕೆ.
ಯತೀಂದ್ರ ನೀಡಿರುವಂತಹ ಹೇಳಿಕೆಗಳು ಈಗ ಅವಶ್ಯಕತೆ ಇಲ್ಲ ಎಂದಿದ್ದಾರೆ ಮಾಗಡಿ ಬಾಲಕೃಷ್ಣ. ಬೇಳೂರು ಗೋಪಾಲ ಕೃಷ್ಣ ಅವರಂತೂ ಅಧಿವೇಶನ ಮುಗಿಯುವವರೆಗೂ ಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದು, ಆ ಮೇಲೆ ನಿಮ್ಮ ಚಟ ತೀರಿಸಿಕೊಳ್ಳಿ ಎಂಬ ಪದ ಬಳಸಿದ್ದಾರೆ. ಸಿಎಂ ಮತ್ತು ಡಿಸಿಎಂ ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿರುವಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವ್ಯಾರೂ ಅನಗತ್ಯ ಹೇಳಿಕೆ ನೀಡಿ ಗೊಂದಲಕ್ಕೆ ಎಡೆಮಾಡಿಕೊಡಬಾರದು ಎಂದಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್. ಡಿಕೆ ಶಿವಕುಮಾರ್ ಅವರು ಎಂದಿನಂತೆ ಬುದ್ದನ ಸ್ಮೈಲ್ ಕೊಟ್ಟು ಬಹಳ ಸಂತೋಷ, ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.
ಇಷ್ಟೆಲ್ಲ ಆಗುತ್ತಿರುವಾಗ ಸಿದ್ದು ಬಣದಲ್ಲಿರುವ ಬಿಕೆ ಹರಿಪ್ರಸಾದ್, ಕೆಎನ್ ರಾಜಣ್ಣ, ಜಮೀರ್ ಅಹ್ಮದ್.. ಇತರರು ಸಿಎಂ ಕುರ್ಚಿ ಖಾಲಿ ಇಲ್ಲ ಎನ್ನುತ್ತಲೇ, ದಲಿತರಿಗೇಕೆ ಅವಕಾಶ ಕೊಡಬಾರದು ಎನ್ನುತ್ತಿದ್ದಾರೆ. ಹರಿಪ್ರಸಾದ್ ಅವರಂತೂ ಯತೀಂದ್ರ ಅವರೇ ಈ ಹಿಂದೆ ಪ್ರಸ್ತಾಪಿಸಿದ್ದ ಸತೀಶ್ ಜಾರಕಿಹೊಳಿ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ. ಹೀಗೆ ನಡೆಯುತ್ತಿರುವಾಗಲೇ ತಂತ್ರಗಾರಿಕೆ ಪ್ರಸ್ತಾಪ ಆಗ್ತಾ ಇದೆ.
ಇವರೆಲ್ಲರೂ ಅವರಿಗೇ ಗೊತ್ತಿಲ್ಲದಂತೆ ಸಿದ್ದರಾಮಯ್ಯ ಹೆಣೆದ ಬಲೆಗೆ ಬಿದ್ದಿದ್ದಾರೆ. ಏನೆಂದರೆ ಈಗ ಯತೀಂದ್ರ ಹೇಳ್ತಿರೋದು ಏನೆಂದರೆ ಅವರೀಗ ತಮ್ಮದೇ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರೀಗ ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ. ಮತ್ತೆ ಯಾವುದರ ಬಗ್ಗೆಯೂ ಚರ್ಚೆ ಮಾಡುವುದಿಲ್ಲ. ನನಗೆ ಗೊತ್ತಿರುವ ಹಾಗೆ ಸಿಎಲ್‌ಪಿ ಸಭೆಯಲ್ಲಿ ಈ ವಿಚಾರ ಚರ್ಚೆ ಆಗುವುದಿಲ್ಲ. ಒಂದು ವೇಳೆ ಪ್ರಸ್ತಾಪ ಮಾಡಿದರೆ ಆಗಲಿ ಬಿಡಿ. ಶಾಸಕಾಂಗ ಸಭೆಯಲ್ಲೇ ಚರ್ಚೆಯಾಗಲಿ ಎನ್ನುತ್ತಿದ್ದಾರೆ. ತಂತ್ರಗಾರಿಕೆ ಎಂದರೆ ಇದೇ.
ಅಂದರೆ ಯತೀಂದ್ರ ಅವರ ಹೇಳಿಕೆ ಬಗ್ಗೆ ಸಿಎಲ್‌ಪಿ ಸಭೆಯಲ್ಲಿ ಚರ್ಚೆಯಾದರೆ ಹಂಸ ಕ್ಷೀರ ನ್ಯಾಯ ಆಗುತ್ತದೆ. ಆಗ ಸಿದ್ದರಾಮಯ್ಯ ಪರ ಯಾರು, ಎಷ್ಟು ಜನ ಶಾಸಕರಿದ್ದಾರೆ ಎಂಬ ಒಂದು ಅಂದಾಜಿನ ಲೆಕ್ಕ ಸಿಕ್ಕಿ ಬಿಡುತ್ತದೆ. ಎಲ್ಲವೂ ಆಗಿ, ಹಾಲಿ ಸಿಎಂ ಆಗಿರುವ ಸಿದ್ದರಾಮಯ್ಯ ವಿರುದ್ಧ ಸದ್ಯಕ್ಕಂತೂ ಯಾರೂ ಮಾತನಾಡಲ್ಲ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಶಾಸಕಾಂಗ ಸಭೆಯಲ್ಲಿ, ಶಾಸಕರ ವಲಯದಲ್ಲಿ ಸಿದ್ದರಾಮಯ್ಯ ಪ್ರಬಲರಾಗಿದ್ದಾರೆ ಎಂಬ ಸಂದೇಶವನ್ನಂತೂ ಕೊಡಬಹುದು. ಅಂದರೆ ಒಂದು ಹೇಳಿಕೆ ವಿವಾದವನ್ನು ಸೃಷ್ಟಿಸುತ್ತಲೇ ರಕ್ಷಣೆಯನ್ನೂ ಮಾಡುತ್ತದೆ.
ಇದನ್ನು ಕೆಲವರು ಚಕ್ರವ್ಯೂಹದಲ್ಲಿ ಬರುವ ಅಭಿಮನ್ಯುವನ್ನು ಸಂಹಾರ ಮಾಡಿದ್ದ ಜಯದ್ರತನನ್ನು ಕೃತಕ ಸೂರ್ಯಾಸ್ತ ಮಾಡಿದ ಕಥೆಗೆ ಹೋಲಿಸ್ತಾರೆ. ಅಂದರೆ ಜಯದ್ರತನನ್ನು ಸೂರ್ಯಾಸ್ತದ ಒಳಗೆ ಸಂಹಾರ ಮಾಡುತ್ತೇನೆ. ಇಲ್ಲದೇ ಹೋದರೆ ಅಗ್ನಿ ಪ್ರವೇಶ ಮಾಡ್ತೇನೆ ಎಂದು ಅರ್ಜುನ ಪ್ರತಿಜ್ಞೆ ಮಾಡಿರ್ತಾನೆ. ಆಗ ದುರ್ಯೋಧನ, ಜಯದ್ರತನನ್ನು ಅರ್ಜುನನ ಕಣ್ಣಿಗೆ ಕಾಣದಂತೆ ರಕ್ಷಿಸುತ್ತಾನೆ. ಇನ್ನೇನು ಅರ್ಜುನನ ಅಗ್ನಿ ಪ್ರವೇಶ ಸನ್ನಿಹಿತ ಎಂದುಕೊಳ್ಳುವಾಗ ಸೂರ್ಯಾಸ್ತವಾಗುತ್ತದೆ. ಜಯದ್ರತ ರಕ್ಷಣಾ ಕೋಟೆಯಿಂದ ಹೊರಬರುತ್ತಾನೆ. ಆಗ ಸೂರ್ಯನಿಗೆ ಮರೆ ಮಾಡಿದ್ದ ಸುದರ್ಶನ ಚಕ್ರವನ್ನು ಹೊರತೆಗೆಯುವ ಶ್ರೀಕೃಷ್ಣ, ಇನ್ನೂ ಸೂರ್ಯ ಮುಳುಗಿಲ್ಲ, ಸಂಹಾರ ಮಾಡು ಎನ್ನುತ್ತಾನೆ. ಇದು ಮಹಾಭಾರತದ ಕಥೆ. ಅಂದರೆ ಸೋತಂತೆ ಮಾಡಿ, ಗೆಲ್ಲುವ ಆಟ. ತಂತ್ರ. ಸಿದ್ದರಾಮಯ್ಯ ಬಳಸಿರೋದೂ ಇದೇ ಸೂತ್ರ. ತಂತ್ರ.



