ವಯಸ್ಸು ಮಿತಿ ಮೀರುತ್ತಿದೆ. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವುದಕ್ಕೂ ಆಗಲ್ಲ ಎನ್ನುತ್ತಿರುವವರಿಗೆ ಇದು ಗುಡ್ ನ್ಯೂಸ್ ಎನ್ನಬಹುದು. ಮುಂದಿನ ಒಂದು ವರ್ಷದಲ್ಲಿ ಕರೆಯಲಾಗುವ ಎಲ್ಲಾ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಯೋಮಿತಿಯನ್ನು ಮೂರು ವರ್ಷಗಳವರೆಗೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ನಿರ್ಣಯವನ್ನೂ ಅಂಗೀಕರಿಸಸಲಾಗಿದೆ. ಈ ಆಫರ್ ಮುಂದಿನ ಒಂದು ವರ್ಷದವರೆಗೆ ಚಾಲ್ತಿಯಲ್ಲಿರಲಿದ್ದು, ಸರ್ಕಾರದ ಗ್ರೂಪ್ ಬಿ, ಸಿ ಹುದ್ದೆಗಳಿಗೆ ಅನ್ವಯವಾಗಲಿದೆ. ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೂ ಇದು ಅನ್ವಯವಾಗಲಿದೆ.
ರಾಜ್ಯ ಸಿವಿಲ್ ಸೇವೆಗಳಲ್ಲಿನ ನಾನಾ ಇಲಾಖೆಗಳ ಗ್ರೂಪ್ ‘ಬಿ’ ಹಾಗೂ ‘ಸಿ’ ಹುದ್ದೆಗಳಿಗೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ. ಇದು ಒಂದು ಸಲದ ಕ್ರಮವಾಗಿ ಅಷ್ಟೇ ಚಾಲ್ತಿಯಲ್ಲಿ ಇರುತ್ತದೆ.
ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ರಾಜ್ಯ ಸಿವಿಲ್ ಸೇವೆಗಳಲ್ಲಿನ ನಾನಾ ಇಲಾಖೆಗಳ ಗ್ರೂಪ್ ‘ಬಿ’, ‘ಸಿ’ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.
ಹಾಗೆಯೇ ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್ ‘ಸಿ’ ಹುದ್ದೆಗೆ ಮುಂದಿನ ಒಂದು ವರ್ಷದಲ್ಲಿಹೊರಡಿಸಲಿರುವ ಅಧಿಸೂಚನೆಯಲ್ಲಿಈಗಿರುವ ನಿಯಮಗಳ ಮೇಲೆ ಎಲ್ಲಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಿಸಲು ಸಂಪುಟ ಸಭೆ ಸಮ್ಮತಿ ನೀಡಿದೆ.
ಪ್ರಸ್ತುತ ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 35 ವರ್ಷ ಇದೆ.
ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗಗಳಿಗೆ ಗರಿಷ್ಠ ವಯೋಮಿತಿ 38 ವರ್ಷ ಇದೆ.
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಪ್ರವರ್ಗ-01ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ ಇದೆ.
ಅವರೆಲ್ಲರಿಗೂ ಈ ವರ್ಷ ವಯೋಮಿತಿ ದಾಟಿದ್ದರೂ, ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಅಂದ್ರೆ, ಸಾಮಾನ್ಯ ವರ್ಗದವರು 38 ವರ್ಷವಾಗಿದ್ದರೂ..
2ಎ, 2ಬಿ, 3ಎ, 3ಬಿ ವರ್ಗದವರು 41 ವರ್ಷವಾಗಿದ್ದರೂ..
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಪ್ರವರ್ಗ-01ರ ಅಭ್ಯರ್ಥಿಗಳು 43 ವರ್ಷವಾಗಿದ್ದರೂ, ಸರ್ಕಾರಿ ಹುದ್ದೆಗೆ ಈ ವರ್ಷ ಅರ್ಜಿ ಸಲ್ಲಿಸಬಹುದು. ಆದರೆ, ಮುಂದಿನ ವರ್ಷ ಈ ಸೌಲಭ್ಯ, ಅವಕಾಶ ಇರುವುದಿಲ್ಲ. ಮತ್ತು ಈ ಎಲ್ಲ ವಿನಾಯಿತಿ ಗ್ರೂಪ್-ಸಿ ಮತ್ತು ಗ್ರೂಪ್-ಬಿ ವರ್ಗದ ಉದ್ಯೋಗಗಳಿಗೆ ಮಾತ್ರ ಅನ್ವಯವಾಗಲಿದೆ.
ಕೋವಿಡ್ ನಂತರ ಹಲವು ಸರ್ಕಾರಿ ಹುದ್ದೆಗಳ ನೇಮಕ ವಿಳಂಬಗೊಂಡು, ಸಾವಿರಾರು ಜನ ಸರ್ಕಾರಿ ನೌಕರಿಯಿಂದ ವಂಚಿತರಾಗಿದ್ದರು. ಅರ್ಜಿ ಸಲ್ಲಿಕೆಗೂ ಅವಕಾಶ ಇರಲಿಲ್ಲ. ಇದು ವಿಶೇಷವಾಗಿ ಕೋವಿಡ್ ಸಮಯದಲ್ಲಿ ಅವಕಾಶ ಕಳೆದುಕೊಂಡವರಿಗೆ ನೀಡಿರುವ ವಿಶೇಷ ಸೌಲಭ್ಯ ಎನ್ನಲಾಗಿದೆ.
ಈ ಎಲ್ಲ ಸೌಲಭ್ಯಗಳು ಜನರಿಗೆ ಸಿಗುವುದು ಗೆಜೆಟ್ ಪ್ರಕಟವಾದ ಮೇಲೆ. ಅಂದರೆ ರಾಜ್ಯ ಸರ್ಕಾರದ ಗೆಜೆಟಿಯರ್ ಪ್ರಕಟವಾದ ನಂತರ ಹಾಗೂ ಈ ವರ್ಷದ ಗೆಜೆಟಿಯರ್‌ನಲ್ಲಿ ಘೋಷಣೆಯಾಗುವ ಅಥವಾ ಕರೆಯಲಾಗುವು ಬಿ ಮತ್ತು ಸಿ ಗ್ರೂಪ್ ಹುದ್ದೆಗಳಿಗೆ ಮಾತ್ರ ಈ ನಿರ್ಣಯ ಅನ್ವಯವಾಗಲಿದೆ. ಇನ್ನು ಪ್ರಮುಖ ವಿಷಯ ಏನೆಂದರೆ, ಒಂದು ದಿನ ಹೆಚ್ಚೂ ಕಡಿಮೆಯಾಗಿದ್ದರೂ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ.



