ಸಿದ್ಧರಾಮಯ್ಯ ಈಗಾಗಲೇ ಬಿಹಾರ ಎಲೆಕ್ಷನ್ ಮುಗಿಯುತ್ತಿದ್ದಂತೆ ದೆಹಲಿಗೆ ಹೋಗೋದು ಫಿಕ್ಸ್ ಆಗಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಸಿದ್ಧರಾಮಯ್ಯ ಅವರಿಗೆ ರಾಹುಲ್ ಗಾಂಧಿ ಪರ್ಮಿಷನ್ ಕೊಡಬೇಕು. ಇನ್ನು ಸಿದ್ದು ಹೋಗುವ ಒಂದು ದಿನ ಮೊದಲೇ ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ದೆಹಲಿಗೆ ಹೋಗ್ತಾರೆ. ನವೆಂಬರ್ 23, 25 ಅಥವಾ 27ರ ಮುಹೂರ್ತಗಳಲ್ಲಿ ಒಂದನ್ನು ಫಿಕ್ಸ್ ಮಾಡಿಕೊಳ್ಳೋ ತರಾತುರಿ ಅವರದ್ದು. ಆದರೆ.. ಈ ಇಬ್ಬರಿಗೂ ರಾಹುಲ್ ಗಾಂಧಿ ಸಿಕ್ಕುವುದಿಲ್ಲ. ದೆಹಲಿಯಿಂದ ಬರ್ತಾ ಇರೊ ರಿಪೋರ್ಟ್ ಬೇರೆಯೇ ಕಥೆ ಹೇಳ್ತಾ ಇದೆ.
ಬಿಹಾರ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ವಿದೇಶಕ್ಕೆ ತೆರಳಲಿದ್ಧಾರೆ. ಇದರಿಂದ ನ.15 ರಿಂದ ನ.20ರ ನಡುವೆ ನಡೆಯಲಿದೆ ಎನ್ನಲಾಗಿದ್ದ ʻನವೆಂಬರ್ ಕ್ರಾಂತಿʼ ಪೋಸ್ಟ್ ಪೋನ್ ಆಗಲಿದೆ ಎಂಬ ಮಾತು ಜೋರಾಗಿಯೇ ಇದೆ. ಇದರ ಮಧ್ಯೆ ನವೆಂಬರ್ 19 ಅಥವಾ 20ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ಆಗ ಯಾವ ನಿರ್ಧಾರ ಆಗಲಿದೆಯೋ ದೇವರೇ ಬಲ್ಲ.
ಸಚಿವ ಸಂಪುಟ ಪುನರ್‌ರಚನೆ ಸೇರಿ ವಿವಿಧ ವಿಷಯಗಳ ಕುರಿತು ನ.15ರ ಬಳಿಕ ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಸ್ಪಷ್ಟಪಡಿಸಿದ್ದರು. ಇದೇ ವೇಳೆ ಅಥವಾ ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್ ಅವರು ದೆಹಲಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ಹೀಗಾಗಿ ನ.15 ರಿಂದ ನ.20ರ ನಡುವೆ ಸಂಪುಟ ಪುನರ್‌ರಚನೆ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತಿತರ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ, ರಾಹುಲ್‌ಗಾಂಧಿ ಅವರು ನ.14 ರಂದು ಬಿಹಾರ ಚುನಾವಣೆ ಫಲಿತಾಂಶ ಬಳಿಕ ವಿದೇಶಕ್ಕೆ ತೆರಳಲಿದ್ದಾರೆ. ಹೀಗಾಗಿ ರಾಜ್ಯದ ನಾಯಕರ ಭೇಟಿಗೆ ಸಿಗುವುದಿಲ್ಲ.
ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಕುತೂಹಲ ಇದೆ. ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ಅಥವಾ ಸರ್ಕಾರ ರಚನೆಯ ಅವಕಾಶ ಸಿಕ್ಕರೆ ಖಂಡಿತಾ ರಾಹುಲ್ ಗಾಂಧಿ ದೇಶದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ತೇಜಸ್ವಿ ಯಾದವ್ ಅವರನ್ನು ಬಿಹಾರದ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರೂ.. ರಾಹುಲ್ ಗಾಂಧಿಗೆ ಒಂದಿಷ್ಟು ಜವಾಬ್ದಾರಿಗಳಿವೆ. ಅಕಸ್ಮಾತ್ ಸೋತರೆ.. NDA ಮರಳಿ ಗೆದ್ದರೆ.. ಆಗ ಪೂರ್ವನಿರ್ಧಾರದಂತೆ ವಿದೇಶಕ್ಕೆ ತೆರಳಲಿದ್ದಾರೆ ರಾಹುಲ್ ಗಾಂಧಿ. ವರ್ಷದಲ್ಲಿ 100ಕ್ಕೂ ಹೆಚ್ಚು ದಿನ ರಾಹುಲ್ ಗಾಂಧಿ ವಿದೇಶದಲ್ಲಿಯೇ ಇರುವುದು ಹೊಸದೇನಲ್ಲ. ಚುನಾವಣೆ ಸಮೀಪ ಬಂದಾಗ ಮಾತ್ರವೇ ಆಕ್ಟಿವ್ ಆಗುವ ರಾಜಕಾರಣಿಗಳಲ್ಲಿ ರಾಹುಲ್ ಗಾಂಧಿ ಕೂಡಾ ಒಬ್ಬರು.
ರಾಹುಲ್‌ಗಾಂಧಿ ದೇಶಕ್ಕೆ ವಾಪಸ್ ಬರುವವರೆಗೂ ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳಿಗೆ ಬ್ರೇಕ್ ಬೀಳಲಿದೆ. ಊಹಾಪೋಹದ ವರದಿಗಳೇ ರಾರಾಜಿಸಲಿವೆ. ರಾಹುಲ್‌ಗಾಂಧಿ ಅವರು ವಿದೇಶ ಪ್ರವಾಸಕ್ಕೆ ಹೋಗುವ ಮೊದಲೇ ಸೂಚನೆ ನೀಡಿ ಸಂಪುಟ ಪುನರ್ ರಚನೆ ಸೇರಿ ವಿವಿಧ ವಿಷಯಗಳ ಬಗ್ಗೆ ಎಐಸಿಸಿ ಅಧ್ಯಕ್ಷರು, ರಾಜ್ಯ ನಾಯಕರಿಗೆ ಸ್ಪಷ್ಟನೆ ನೀಡಲಿದ್ದಾರೆಯೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೀಗಾಗಿ ರಾಹುಲ್‌ಗಾಂಧಿ ಅವರ ವಿದೇಶ ಪ್ರವಾಸ ರಾಜ್ಯ ರಾಜಕೀಯ ಬೆಳವಣಿಗೆಗಳ ಮೇಲೆ ಬೀರಲಿರುವ ಪರಿಣಾಮದ ಬಗ್ಗೆ ತೀವ್ರ ಕುತೂಹಲ ಮೂಡಿದೆ.



