ಕೃಷ್ಣರಾಜಸಾಗರ ಅಣೆಕಟ್ಟು ಇತಿಹಾಸದಲ್ಲಿಯೇ 41 ವರ್ಷಗಳ ನಂತರ ಜೂನ್ ತಿಂಗಳಲ್ಲಿ ಭರ್ತಿಯಾಗುತ್ತಿದೆ. ಆದರೆ ಇದರ ಲಾಭ ಮಾತ್ರ ರೈತರಿಗೆ ಸಿಗುತ್ತಿಲ್ಲ. ಕೆಆರ್‌ಎಸ್ ಅಣೆಕಟ್ಟೆ ಅವಧಿಗೂ ಮುನ್ನವೇ ಭರ್ತಿಯಾಗುತ್ತಿದೆ. ಆದರೆ ನಾಲೆಗಳಿಗೆ ನೀರು ಬಿಡುವ ಪ್ರಮಾಣದಲ್ಲಿ ಈಗಲೂ ಬೇಸಗೆಯ ನೀತಿಯನ್ನೇ ಅನುಸರಿಸಲಾಗ್ತಿದೆ. ಕೆಆರ್‌ಎಸ್ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಡ್ಯಾಂಗೆ ಅಧಿಕ ಒಳಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಅಧಿಕಾರಿಗಳು ಜಲಾಶಯದಿಂದ ನದಿಗೆ ನೀರು ಹರಿಸುತ್ತಿದ್ದಾರೆ. ಆದರೆ, ಅಣೆಕಟ್ಟೆಯ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಕೆರೆ ಕಟ್ಟೆಗಳು ಈಗಲೂ ಒಣಗುವಂತಾಗಿದೆ.
ನಾಲೆಗೆ ನೀರು ಹರಿಸುವಂತೆ ರೈತ ಸಂಘ ಸೇರಿದಂತೆ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆಗ ವಿಶ್ವೇಶ್ವರಯ್ಯ ನಾಲೆಗೆ ಅಲ್ಪ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು. ಆದರೆ ಆ ನೀರು ಕೆಲವು ನಾಲೆಯ ಮೇಲ್ಭಾಗದ ಜಮೀನಿನ ರೈತರಿಗೆ ಮಾತ್ರ ಅನುಕೂಲವಾಗುತ್ತಿದೆ. ಕೆಳಭಾಗದ ವಿತರಣೆ ನಾಲೆಗಳಿಗೆ ಹರಿದು ಹೋಗುವಷ್ಟೂ ನೀರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಗಳು ಕೂಡಲೇ ವಿಸಿ ಹಾಗೂ ಸಿಡಿಎಸ್ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ತುಳಿಯಲಾಗುವುದು ಎಂದು ರೈತ ಸಮುದಾಯ ಎಚ್ಚರಿಸಿದೆ. ಆದರೆ.. ಅಧಿಕಾರಿಗಳಿಗೆ ಕೇಳುತ್ತಿಲ್ಲ. ನಾಯಕರಿಗೆ ಮಟ್ಟುತ್ತಿಲ್ಲ.
ಕಾವೇರಿಗೆ ನೀರು ಬರಬೇಕಿರುವುದು ಮಡಿಕೇರಿ, ಕೇರಳದ ವಯನಾಡುಗಳಲ್ಲಿ. ಅಲ್ಲಿ ಮಳೆಯಾಗಿದ್ದರೂ.. ಮಂಡ್ಯದ ರೈತರಿಗೆ ನೀರು ಬೇಕೆಂದರೆ.. ಕನ್ನಂಬಾಡಿಯಿಂದಲೇ ನೀರು ಬರಬೇಕು. ಜಿಲ್ಲೆಯಲ್ಲಿ ಬಹಳಷ್ಟು ಕಡೆ ಕೆರೆ-ಕಟ್ಟೆಗಳು ಬರಿದಾಗಿವೆ. ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿವೆ. ಬೇಸಿಗೆಯಲ್ಲಿ ಪ್ರತಿವರ್ಷ ಕುಡಿಯುವ ನೀರಿಗೂ ತೊಂದರೆ ಜತೆಗೆ ಕೃಷಿ ಚಟುವಟಿಕೆಗಳಿಗೂ ನೀರಿಲ್ಲದೆ ರೈತರು ಪರದಾಡುವ ಪರಿಸ್ಥಿತಿ ಇದೆ. ಆದರೆ, ಸರಕಾರ ಮಾತ್ರ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸುವ ಮೂಲಕ ದ್ರೋಹವೆಸಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಬಹುತೇಕ ರೈತರು ಕಾವೇರಿ ನೀರನ್ನೇ ನಂಬಿದ್ದಾರೆ. ಬೇಸಿಗೆ ಬೆಳೆಯ ಕಟಾವು ಮುಗಿಸಿರುವ ರೈತರು ಮುಂದಿನ ಬೆಳೆಗೆ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಕೆರೆಕಟ್ಟೆಗಳನ್ನು ತುಂಬಿಸಬೇಕು. ಇದರಿಂದ ಅಂತರ್ಜಲ ಮಟ್ಟ ವೃದ್ಧಿ ಆಗಲಿದೆ. ಕೊಳವೆ ಬಾವಿಗಳಲ್ಲೂ ನೀರು ಬರಲಿದೆ. ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ.. ಅದೆಲ್ಲವೂ ಆಗಬೇಕು ಎಂದರೆ.. ಈಗ ನೀರು ಬಿಡಬೇಕು. ನೀರು ಬಿಡುತ್ತಿಲ್ಲ.
ನೀರಾವರಿ ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶದ ಸಿಡಿಎಸ್ ಹಾಗೂ ವಿಸಿ ನಾಲೆಗಳಿಗೆ ನೀರು ಹರಿಸದೆ ನದಿಗೆ ಹೊರ ಹರಿವು ಹೆಚ್ಚಿಸಿರುವುದು ಸರಿಯಲ್ಲ. ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಎನ್ನುವುದು ರೈತರ ಒತ್ತಾಯ. ಆದರೆ.. ಅಧಿಕಾರಿಗಳ ವಾದವೇನು ಗೊತ್ತೇ.. ನಾಲೆಗೆ ನೀರು ಬೇಡವೆಂದು ರೈತರೇ ಹೇಳುತ್ತಿದ್ದಾರೆ. ಹಾಗಾಗಿ ಸ್ವಲ್ಪ ನೀರು ಹರಿಸುತ್ತಿದ್ದೇವೆ ಎನ್ನುತ್ತಾರೆ ಕಾವೇರಿ ನಿಗಮದ ಎಇಇ ಶಿವಪ್ರಸಾದ್.
ನೀರು ಬಿಡುತ್ತೇವೆ ಎಂದರೂ ಬೇಡ ಎನ್ನುವುದಕ್ಕೆ ರೈತರೇನು ಮೂರ್ಖರೇ ಎಂದರೆ.. ವಿಷಯ ಅದಲ್ಲ. ಕಟಾವು ವೇಳೆ ನೀರು ನಿಲ್ಲಿಸುವಂತೆ ಮಾಡಿದ್ದ ಮನವಿಯನ್ನೇ ಈಗಲೂ ಅಧಿಕಾರಿಗಳು ಪಾಲಿಸ್ತಿದ್ದಾರೆ. ಆದರೆ.. ನೀರು ಬೇಕು ಎಂಬ ಪ್ರತಿಭಟನೆಯನ್ನು ಮಾತ್ರ ಸೈಡಿಗಿಟ್ಟಿದ್ದಾರೆ.



