ಪ್ರಜ್ವಲ್ ರೇವಣ್ಣ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ʻನಿಂದ ಸ್ಪರ್ಧೆ ಮಾಡಿ ಗೆದ್ದರು. ದೇವೇಗೌಡರ ಕ್ಷೇತ್ರವಾಗಿದ್ದ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರು ದಾಖಲೆ ಮತಗಳ ಅಂತರದಿಂದ ಗೆದ್ದಿದ್ದರು. ಪ್ರಜ್ವಲ್ ರೇವಣ್ಣ ಅವರ ಆ ಗೆಲುವಿಗೆ ನಾನೇ ಕಾರಣ ಎಂದಿರುವ ಸಿದ್ದರಾಮಯ್ಯ, ಈ ಬಾರಿ ಸೋಲಿಸೋದೂ ಕೂಡಾ ನಾನೇ ಎಂದು ಗುಡುಗಿದ್ಧಾರೆ.
2019ರಲ್ಲಿ ಪ್ರಜ್ವಲ್ ರೇವಣ್ಣ ಜೆಡಿಎಸ್ʻನಿಂದ ಸ್ಪರ್ಧಿಸಿ 676,606 ಮತಗಳನ್ನು ಪಡೆದಿದ್ದರು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದವರು ಈಗ ಜೆಡಿಎಸ್ʻನಲ್ಲಿಯೇ ಇರುವ ಎ.ಮಂಜು (ವಾಲೆ ಮಂಜು). ಅವರೋಗ ಜೆಡಿಎಸ್ʻನಲ್ಲಿಯೇ ಶಾಸಕರಾಗಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ.ಮಂಜು 5,35382 ಮತಗಳನ್ನು ಪಡೆದಿದ್ದರು. ಪ್ರಜ್ವಲ್ ಗೆಲುವಿನ ಅಂತರ 1 ಲಕ್ಷದ 41 ಸಾವಿರದ 224 ಮತಗಳು.
ಅಂದಹಾಗೆ 2014ರಲ್ಲಿ ಅದೇ ಎ.ಮಂಜು ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವೇಗೌಡರ ವಿರುದ್ಧ ಸರ್ಧಿಸಿದ್ದರು. ಆಗ 4 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದರು. ಆಗ ಬಿಜೆಪಿ ಒಂದು ಲಕ್ಷದ 65 ಸಾವಿರ ವೋಟು ಪಡೆದಿತ್ತು. ಆದರೆ.. 5 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದ ದೇವೇಗೌಡರು, ಒಂದು ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು.
ಈಗ ಅದೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಇದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಅವರೇ ಪ್ರಜ್ವಲ್ ಅವರ ಗೆಲುವಿಗೆ ಪಣ ತೊಟ್ಟಿದ್ದಾರೆ. ಅಂತಹ ಪ್ರಜ್ವಲ್ ರೇವಣ್ಣ ಅವರಿಗೆ ಸಿದ್ದರಾಮಯ್ಯ ಕೊಟ್ಟಿರುವ ವಾರ್ನಿಂಗ್ ಇದು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಹೀಗಾಗಿ, ನಾನು ಹಾಸನಕ್ಕೆ ಹೋಗಿ ಪ್ರಚಾರ ಮಾಡಿದ್ದರಿಂದಲೇ ಪ್ರಜ್ವಲ್ ಗೆದ್ದಿದ್ದು. ಆದರೆ, ಈ ಬಾರಿ ನಮ್ಮ ಕಾರ್ಯಕರ್ತರು ಹಾಗೂ ನಾಯಕರು ಪ್ರಜ್ವಲ್ ಸೋಲಿಸಬೇಕೆಂದು ಪಣ ತೊಟ್ಟಿದ್ದಾರೆ. ಈ ಬಾರಿಯೂ ನಾನು ಹಾಸನಕ್ಕೆ ಹೋಗುತ್ತೇನೆ. ಆದರೆ, ನಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿ ನಾನೇ ಪ್ರಜ್ವಲ್‌ನನ್ನು ಸೋಲಿಸುತ್ತೇನೆ. ಈ ಬಾರಿ ಹಾಸನದಲ್ಲಿ ಪ್ರಜ್ವಲ್ ಸೋಲುತ್ತಾನೆ ಎಂದಿದ್ದಾರೆ ಸಿದ್ದರಾಮಯ್ಯ.
ಇದೇ ವೇಳೆ.. ಮಂಡ್ಯದ ಸ್ಪರ್ಧೆ ದೇವರ ಇಚ್ಚೆ ಎಂದ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಕಳೆದ ಬಾರಿ ಮಂಡ್ಯದಲ್ಲಿ ಮಗನನ್ನ ನಿಲ್ಲಿಸುವಾಗ ಯಾರ ಇಚ್ಛೆಯಿತ್ತು. ಈಗ ದೇವರು ಎಂದರೆ ಆಗ ಯಾರಿದ್ದರು. ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗಲೇ ಅವರ ಮಗ ಅಲ್ಲಿ ಸೋತ್ತಿದ್ದಾನೆ. ಈ ಬಾರಿ ಜೆಡಿಎಸ್ ನವರು ಮೂರಕ್ಕೆ ಮೂರು ಕ್ಷೇತ್ರದಲ್ಲೂ ಸೋಲುತ್ತಾರೆ. ಕಳೆದ ಬಾರಿ ಮೈಸೂರಿನಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ಗೆ ಹಾಕಿದ್ದು ಯಾವ ಚೂರಿ? ಮೈತ್ರಿ ಧರ್ಮ ಎಂದರೆ ಎಲ್ಲಾ ಕ್ಷೇತ್ರಕ್ಕೂ ಒಂದೇ. ಮೈಸೂರಿನಲ್ಲಿ ಚೂರಿ ಹಾಕಿ ಈಗ ಮಂಡ್ಯದಲ್ಲಿ ನಮಗೆ ಚೂರಿ ಹಾಕಿದರು ಎಂದರೇ? ಅದರಲ್ಲಿ ಯಾವ ನ್ಯಾಯ ಇದೆ ಹೇಳಿ ಎಂದು ಪ್ರಶ್ನೆ ಮಾಡಿದ್ಧಾರೆ.



