ರಾಜ್ಯದಲ್ಲೀಗ ಸಣ್ಣ ಸಣ್ಣ ವ್ಯಾಪಾರಿಗಳು ನಡುಗುವಂತೆ ಮಾಡಲಾಗಿದೆ. ಲಕ್ಷ ಲಕ್ಷ ಜಿಎಸ್‌ಟಿ ಕಟ್ಟಬೇಕು ಎಂಬ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್, ವ್ಯಾಪಾರಸ್ಥರನ್ನು ಭಯಭೀತಗೊಳಿಸಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಯಂ ಮೂಲಕ ಗ್ರಾಹಕರಿಂದ ಹಣ ಪಡೆದು ವ್ಯಾಪಾರ ಮಾಡಿದ್ದ ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಸರಿಯಾಗಿ ಗುನ್ನ ಇಟ್ಟಿದ್ದು, ಲಕ್ಷಾಂತರ ರೂಪಾಯಿ ತೆರಿಗೆ ಪಾವತಿ ನೋಟಿಸ್ ಕೊಟ್ಟಿದೆ. ತಕ್ಷಣ ಭಯಬಿದ್ದವರು ಗೂಗಲ್ ಪೇ, ಫೋನ್ ಪೇ ಸೇರಿದಂತೆ ಅಂಗಡಿಯಲ್ಲಿ ಇಟ್ಟುಕೊಂಡಿದ್ದ ಕ್ಯೂ ಆರ್ ಕೋಡ್ ಕಾರ್ಡ್‌ಗಳನ್ನು ಕಿತ್ತು ಹಾಕುತ್ತಿದ್ದಾರೆ. ಕ್ಯೂಆರ್ ಕೋಡ್ ಕಾರ್ಡ್ ಕಿತ್ತು ಹಾಕಿದರೆ.. ತಪ್ಪಿಸಿಕೊಂಡಂತೇನಾ.. ನೋ ವೇ.
ಜಿಎಸ್‌ಟಿ ಕಟ್ಟಬೇಕು ಎಂದು ನೋಟಿಸ್ ಕೊಟ್ಟಿರುವ ಇಲಾಖೆಯವರು, ನೋಟಿಸ್ ತಲುಪಿದ ಮೇಲೆ ಥಟ್ ಅಂತ ಸ್ಟಾಪ್ ಆದ ವಹವಾಟುಗಳನ್ನು ಅಬ್ಸರ್ವ್ ಮಾಡಲಿದ್ದಾರೆ. ಅದರಲ್ಲೂ ಹತ್ತಿರತ್ತಿರ ಕೋಟಿ… ಅಥವಾ ಕೋಟಿಗೂ ಹೆಚ್ಚು ಟರ್ನ್ ಓವರ್ ಇದ್ದವರ ಅಕೌಂಟ್ ಫಾಲೋ ಮಾಡಲಿದ್ದಾರೆ. ಕೆಲವು ತಿಂಗಳ ಕಾಲ ಅಂತಹವರನ್ನು ಗುರುತಿಸಿ, ನಂತರ ನೋಟಿಸ್ ಕೊಡುತ್ತಾರೆ. ವ್ಯಾಪಾರ, ವ್ಯವಹಾರ ನಡೆಯುತ್ತಿದೆ.. ಆದರೆ.. ಕ್ಯಾಷ್ ಮಾತ್ರ ಎನ್ನುವವರಿಗೆ ಕಾಲ್ಪನಿಕ ಲೆಕ್ಕದಲ್ಲಿ ನೋಟಿಸ್ ಬರಲಿದೆ. ಅದು ಈಗ ಬಂದಿರುವ ನೋಟಿಸಿಗಿಂತ ಹೆಚ್ಚು ಕಟ್ಟಬೇಕಾದರೂ ಆಶ್ಚರ್ಯ ಇಲ್ಲ.
ನೋಟಿಸ್ ಬಂದಷ್ಟೇ ದಂಡ ಕಟ್ಟಬೇಕಿಲ್ಲ..!
ಕರ್ನಾಟಕ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ಈ ಸಣ್ಣಪುಟ್ಟ ಬೇಕರಿ, ಕಾಂಡಿಮೆಂಟ್ಸ್, ಬೀಡಾ ಅಂಗಡಿಗಳಿಗೆ 37 ಲಕ್ಷ ರೂ, 32 ಲಕ್ಷ ರೂ.,54 ಲಕ್ಷ ರೂ., 19 ಲಕ್ಷ ರೂ., 15 ಲಕ್ಷ ರೂಪಾಯಿ ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಿ ಎಂದು ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡಿದಷ್ಟೇ ಟ್ಯಾಕ್ಸ್ ಕಟ್ಟಬೇಕಿಲ್ಲ. ಮಧ್ಯಂತರ ಮಾರ್ಗ ಇದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ಕಂಪೋಸಿಷನ್ ಟ್ಯಾಕ್ಸ್ ನೊಂದಣಿ ಮಾಡಿಕೊಂಡಿರುವವರಿಗೆ ಮಾತ್ರ. ಎಲ್ಲರಿಗೂ ಅಲ್ಲ..!
ಆದರೆ.. ಈಗ ನೋಟಿಸ್ ಪಡೆದಿರುವವರು ಜಿಎಸ್ಟಿ ನೋಂದಣಿ ಮಾಡಿಕೊಳ್ಳದೆ ಇರುವ ವ್ಯಾಪಾರಿಗಳಿಗೆ ರಾಜಿ ತೆರಿಗೆ ಪದ್ಧತಿ (ಕಾಂಪೋಸಿಷನ್ ಸ್ಕೀಂ) ಅನ್ವಯಿಸುವುದಿಲ್ಲ. ಹೀಗಾಗಿ, ಈಗ ನೋಟಿಸ್ ಸ್ವೀಕರಿಸಿರುವ ವ್ಯಾಪಾರಿಗಳು ರಾಜಿ ತೆರಿಗೆ ಪದ್ಧತಿಯಡಿ ಬರುವುದಿಲ್ಲ
ಗ್ರಾಹಕರಿಗೆ ಒಂದಿಷ್ಟು ರಿಲ್ಯಾಕ್ಸೇಷನ್ ಇದೆ.. ಅದರ ಪ್ರಕಾರ..
1. ನೋಟಿಸ್‌ನಲ್ಲಿ ಉಲ್ಲೇಖಿಸಿರುವಷ್ಟು GST ದಂಡ ಪಾವತಿ ಕಡ್ಡಾಯವಲ್ಲ
2. ನೋಟಿಸ್‌ಗೆ ವ್ಯಾಪಾರಿ ಕೊಡುವ ಉತ್ತರ ಅವಲಂಬಿಸಿ ದಂಡ ನಿಗದಿ
3.ಆಗ ತೆರಿಗೆ, ದಂಡ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬಹುದು
4.GSTಯೇ ಇಲ್ಲದ ಹಣ್ಣು, ತರಕಾರಿ, ಹಾಲು ಮುಂತಾದ ಉತ್ಪನ್ನ ಇವೆ
5.ವರ್ತಕರು ತಮ್ಮದು ಯಾವ ವ್ಯಾಪಾರ ಎಂದು ತಿಳಿಸಿದರೆ ತೆರಿಗೆ ಕಮ್ಮಿ
6.ನೋಟಿಸ್‌ಗೆ ಉತ್ತರಿಸಲು 7 ದಿನ ಅಥವಾ ಇನ್ನೂಹೆಚ್ಚಿನ ಕಾಲಾವಕಾಶ
2025ರ ಜನವರಿ ತಿಂಗಳಲ್ಲಿ ಪೋನ್‌ಪೇ ಹಾಗೂ ಪೇಟಿಎಂನಿಂದ ವರ್ತಕರ ವಹಿವಾಟುಗಳ ಕುರಿತು ಡೇಟಾ ಸಿಕ್ಕಿದೆ. ಇದೇ ಆಧಾರದ ಮೇಲೆ ಜಿಎಸ್ಟಿ ಮಿತಿ ಮೀರಿ ವಹಿವಾಟು ನಡೆಸಿದವರನ್ನು ಗುರುತಿಸಲಾಗುತ್ತಿದೆ. ಮೊದಲ ಹಂತದಲ್ಲಿ ಕೋಟ್ಯಂತರ ರು. ಹಣ ಸ್ವೀಕರಿಸಿದ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಬೇಕರಿ, ಕಾಂಡಿಮೆಂಟ್, ಹಣ್ಣು-ತರಕಾರಿ, ಹೂವು, ಡೈರಿ, ಮಾಂಸದ ಅಂಗಡಿ, ಸಣ್ಣ ಗಾತ್ರದ ಬಟ್ಟೆ ವ್ಯಾಪಾರಿಗಳು ಇದ್ದಾರೆ. ಜಿಎಸ್ಟಿ ವಂಚನೆ ಕುರಿತು ಬೇರೆ ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸಂಸ್ಥೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ



