ರಾಜ್ಯದಲ್ಲಿ ಸಿಎಂ ಚೇಂಜ್ ಯಾವಾಗ ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಟೀಂ ಮತ್ತು ಡಿಕೆ ಶಿವಕುಮಾರ್ ಟೀಂ ಎಂದು ಎರಡು ಭಾಗವಾಗಿ ಹೋಗಿದೆ. ಬಹಿರಂಗವಾಗಿ ಹೇಳೋಕೆ ಆಗುತ್ತಿಲ್ಲ, ಅಷ್ಟೇ. ಆದರೆ.. ಆ ಬಿಸಿ ಈಗ ಸಿದ್ದರಾಮಯ್ಯ ಅವರಿಗೆ ಬಹಿರಂಗವಾಗಿ ತಟ್ಟುವುದಕ್ಕೆ ಶುರುವಾಗಿದೆ. ಅದಕ್ಕೆ ಸಾಕ್ಷಿಯಾಗಿದ್ದು ಫ್ರೀಡಂ ಪಾರ್ಕ್ ನಲ್ಲಿ ನಡೆದ ಲೋಕಭವನ ಅರ್ಥಾತ್ ರಾಜಭವನ ಚಲೋ ವೇದಿಕೆಯಲ್ಲಿ. ಅದಕ್ಕೆ ಕಾರಣಗಳೂ ಇವೆ.
ಪ್ರತಿಭಟನೆಯಲ್ಲಿ ಕೂಲಿ ಕಾರ್ಮಿಕರ ಸಂಕೇತವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರೂ ತಲೆಗೆ ಟವೆಲ್ ಸುತ್ತಿಕೊಂಡು ಕೂತಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಟವೆಲ್ ಕಟ್ಟಿಕೊಂಡೇ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ತಾವೇ ಸ್ವತಃ ಟವೆಲ್ ಸುತ್ತಿದರು. ಇಷ್ಟಾದರೂ ಸಿದ್ದರಾಮಯ್ಯ ವೇದಿಕೆಗೆ ಬಂದು ಮಾತನಾಡಲು ನಿಂತಾಗ.. ಡಿಕೆ ಡಿಕೆ ಸಿಎಂ ಎಂಬ ಘೋಷಣೆ ಮೊಳಗಿದೆ.
ಸಚಿವರು ಮಾತನಾಡುವಾಗಲೂ ಪದೇ ಪದೇ ಜೋರಾಗಿ ಘೋಷಣೆ ಹಾಕುತ್ತಿದ್ದ ಯೂಥ್ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಮಾತನಾಡಲು ವೇದಿಕೆ ಹತ್ತಿದಾಗ ಘೋಷಣೆಯನ್ನು ಇನ್ನೂ ತೀವ್ರಗೊಳಿಸಿದರು. ಸ್ವತಃ ಸಿದ್ದರಾಮಯ್ಯ ಗರಂ ಆದರು. ಎಂದಿನಂತೆ ಗದರಿ ಸುಮ್ಮನಿರಿಸುವ ಪ್ರಯತ್ನವನ್ನೂ ಮಾಡಿದರು. ಪ್ರಯತ್ನ ವಿಫಲವಾಯಿತು. ಹೀಗಾಗಿ ಸಿದ್ದರಾಮಯ್ಯನವರ ಭಾಷಣ ಕೆಲವೇ ನಿಮಿಷಗಳಲ್ಲಿ ಮುಗಿಯಿತು.
ಇದು ಹೊಸದಲ್ಲ. ಮೊದ ಮೊದಲು ಹಾಗೆ ಕೂಗಿದವರಿಗೆ ಬೇಡ ಎಂಬ ಸಂದೇಶ ರವಾನಿಸುತ್ತಿದ್ದ ಡಿಕೆ ಶಿವಕುಮಾರ್, ಈಗ ಸೈಲೆಂಟ್ ಆಗಿದ್ದಾರೆ. ಪರೋಕ್ಷವಾಗಿ ಇಂಥದ್ದೆಲ್ಲ ಬೇಕು ಎಂದು ಅವರಿಗೆ ಅನಿಸೋಕೆ ಶುರುವಾಗಿದೆ. ಸಹಜವಾಗಿಯೇ ಹಾಗೆ ಕೂಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಶಾಸಕರ ವಿಷಯದಲ್ಲೂ ಅಷ್ಟೇ. ಡಿಕೆ ಪರ ಮಾತನಾಡುತ್ತಿದ್ದ ಇಕ್ಬಾಲ್ ಹುಸೇನ್, ಶಿವಗಂಗಾ ಬಸವರಾಜ್, ನಂಜೇಗೌಡ ಮೊದಲಾದವರು ಡಿಕೆ ಮೇಲೆಯೇ ಸಿಟ್ಟಾಗಿದ್ದಾರಂತೆ. ನಮ್ಮ ಮೇಲೆ ಮಾತ್ರ ಆಕ್ಷನ್, ಶಿಸ್ತು ಕ್ರಮ ಅಂತೀರಿ. ಅವರ ವಿರುದ್ಧಾನೂ ಕ್ರಮ ಕೈಗೊಳ್ಳಿ ಎನ್ನುತ್ತಿದ್ದಾರೆ. ಇತ್ತ ತಮ್ಮ ಪರವೇ ಮಾತನಾಡುತ್ತಿರುವವರನ್ನು ಬಯ್ಯಬೇಕೋ.. ಮುದ್ದಿಸಬೇಕೋ.. ತಿಳಿಯದೆ ಗೊಂದಲಕ್ಕೀಡಾಗಿರುವ ಡಿಕೆ, ಮೌನಕ್ಕೆ ಶರಣು ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಅವರಿಗೆ ಒಂದು ಬಾರ್ಡರ್ ಇದೆ. ಆ ಗಡಿಯನ್ನು ದಾಟುವಂತಿಲ್ಲ. ಹೀಗಾಗಿ ಮೌನವಾಗುವುದನ್ನು ಬಿಟ್ಟು ಬೇರೆ ದಾರಿ ಅವರಿಗೂ ಇಲ್ಲ.



