ವಿಜಯೇಂದ್ರ ವಿರುದ್ಧ ಸಭೆಗಳಿಗೆ ಫುಲ್ ಸ್ಟಾಪ್ ಬಿದ್ದಿಲ್ಲ. ಆರ್ ಎಸ್ ಎಸ್ ಮಧ್ಯಪ್ರವೇಶದ ನಂತರವೂ, ಬಿಜೆಪಿಯಲ್ಲಿ ವಿಜಯೇಂದ್ರ ವಿರುದ್ಧ ಇರುವ ನಾಯಕರ ಸಭೆಗಳಿಗಳಿಗೆ ಬ್ರೇಕ್ ಬಿದ್ದಿಲ್ಲ. ಬದಲಿಗೆ ಅದು ಇನ್ನೂ ಒಂದು ಹಂತ ಮುಂದಕ್ಕೆ ಹೋಗಿದೆ. ವಿಜಯೇಂದ್ರ ವಿರುದ್ಧ ಒಕ್ಕೂಟದ ಮುಂದಿನ ಗುರಿ ಈಶ್ವರಪ್ಪ ಅವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳೋದು. ಅದಕ್ಕಾಗಿ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಅತೃಪ್ತರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಅರವಿಂದ ಲಿಂಬಾವಳಿ, ಹೊಳಲ್ಕೆರೆ ಚಂದ್ರಪ್ಪ, ಜಿ.ಎಂ.ಸಿದ್ದೇಶ್ವರ್, ಪ್ರತಾಪ್‌ಸಿಂಹ, ಅಣ್ಣಾ ಸಾಹೇಬ್ ಜೊಲ್ಲೆ ಭಾಗಿಯಾಗಿದ್ದಾರೆ. ಇನ್ನು ಕೆಲವು ನಾಯಕರು ಸಭೆಗೆ ಬಾರದೇ ಇದ್ದರೂ, ಸಭೆಗೆ ಬೆಂಬಲ ನೀಡಿದ್ದಾರೆ.
ಈಶ್ವರಪ್ಪ ಹೇಳಿಕೆಯೇ ವಿಜಯೇಂದ್ರ ವಿರೋಧಿ ಕೂಟಕ್ಕೆ ಶಕ್ತಿ : ಇತ್ತೀಚೆಗೆ ಈಶ್ವರಪ್ಪ ಮತ್ತು ಯತ್ನಾಳ್ ಆರ್ ಸಿ ಬಿ ಹೆಸರಿನ ಸಂಘಟನೆ ಕಟ್ಟುವ, ಲಿಂಗಾಯತ ಮತ್ತು ಕುರುಬರನ್ನು ಒಂದೇ ವೇದಿಕೆಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಹೆಸರಲ್ಲಿ ಸಂಘಟನೆ ಕಟ್ಟುತ್ತಿದ್ದಾರೆ. ಈ ಹಿಂದೆ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಸಂಘಟನೆ ಕಟ್ಟುವ ಘೋಷಣೆ ಮಾಡಿ, ಪಕ್ಷದ ಹೈಕಮಾಂಡ್ ಕೊಟ್ಟ ಭರವಸೆಗಳ ಮೇಲೆ ಸುಮ್ಮನಾಗಿದ್ದರು. ಇದೀಗ ಯತ್ನಾಳ್ ಮತ್ತು ಈಶ್ವರಪ್ಪ ಒಟ್ಟಾಗಿದ್ದಾರೆ.
ಈಶ್ವರಪ್ಪ ಅಷ್ಟಕ್ಕೇ ಸುಮ್ಮನಾಗಿಲ್ಲ. ವಿಜಯೇಂದ್ರ ಅವರ ನಾಯಕತ್ವವನ್ನು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಗುಡುಗಿಯೂ ಇದ್ದಾರೆ. ಹೀಗಾಗಿಯೇ ಈಶ್ವರಪ್ಪ ವಿಜಯೇಂದ್ರ ಅವರ ವಿರುದ್ಧ ಗುಡುಗುತ್ತಿದ್ದಂತೆಯೇ ಅವರ ಮನೆಗೆ ಹೋಗಿ ಬಂದಿರುವುದು ಯತ್ನಾಳ್, ಪ್ರತಾಪ್ ಸಿಂಹ ಇತ್ಯಾದಿ ನಾಯಕರು.
ವಿಜಯೇಂದ್ರ ಏನ್ ಹೇಳ್ತಾರೆ..?
ಕೆ.ಎಸ್.ಈಶ್ವರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಮೋದಿ ಕೈ ಬಲಪಡಿಸುವುದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ. ಮಗನ ಸ್ವಾರ್ಥಕ್ಕಾಗಿ ಸ್ಪರ್ಧಿಸಿದ್ದರೆ ಹೊರತು ಪಕ್ಷಕ್ಕಾಗಿ ಅಲ್ಲ. ಈಶ್ವರಪ್ಪ ಬಗ್ಗೆ ಮಾತನಾಡುವುದು ಬೇಡ ಎಂದುಕೊಂಡಿದ್ದೆ. ಇತ್ತೀಚೆಗೆ ಅವರ ಮಾತುಗಳನ್ನು ಗಮನಿಸಿದ್ದೇನೆ. ಬಿಜೆಪಿ ಬಗ್ಗೆ ಬಹಳ ಕಾಳಜಿಯಿಂದ ಮಾತನಾಡಿ ದ್ದಾರೆ. ವಿಜಯೇಂದ್ರ ನಾಯಕತ್ವ ಒಪ್ಪುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತನ ರೀತಿ ಮಾತನಾಡಿದ್ದಾರೆ. ಪಕ್ಷ ವಿರೋಧಿ ಚಟು ವಟಿಕೆಯಲ್ಲಿ ಭಾಗಿಯಾಗಿದ್ದಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ ವಿಜಯೇಂದ್ರ.
ಇನ್ನು ಈಶ್ವರಪ್ಪ ಮನೆಗೆ ಪಕ್ಷದ ಕೆಲವು ನಾಯಕರು ಹೋಗಿರುವ ಬಗ್ಗೆ ಮಾಹಿತಿ ಇಲ್ಲ ಎಂದೂ ಹೇಳಿದ್ದಾರೆ. ಯಾರು ಯಾರು ಹೋಗಿದ್ದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರು ಯಾರು ಹೋಗಿದ್ದರೋ.. ಅವರನ್ನೇ ಕೇಳಬೇಕು. ಈಶ್ವರಪ್ಪಗ ಬಿಜೆಪಿ ಬಗ್ಗೆ ಎಷ್ಟು ಕಾಳಜಿ ಇದ ಎಂಬುದು ನಮಗೆ ಗೊತ್ತಿದೆ ಎಂದಿರುವ ವಿಜಯೇಂದ್ರ, ಈಶ್ವರಪ್ಪ ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ರಾಷ್ಟ್ರ ಮಟ್ಟದ ನಾಯಕರು ಚರ್ಚಿಸಬೇಕು. ರಾಜ್ಯ ನಾಯಕರ ಅಭಿಪ್ರಾಯ ಕೇಳಿದಾಗಿ ಅಭಿಪ್ರಾಯ ಕೊಡುತ್ತೇವೆ. ಆ ಸಂದರ್ಭ ಇನ್ನೂ ಬಂದಿಲ್ಲ ಎಂದಿದ್ದಾರೆ.
ಈಶ್ವರಪ್ಪ ಬಿಜೆಪಿಗೆ ಬಂದರೆ ಸ್ವಾಗತ : ಯತ್ನಾಳ್
ಈಶ್ವರಪ್ಪ ಅವರನ್ನು ಬಿಜೆಪಿಗೆ ಮರಳಿ ತೆಗೆದುಕೊಳ್ಳುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ, ಅವರನ್ನು ತೆಗೆದುಕೊಳ್ಳಬೇಕೆಂದು ಹೈಕಮಾಂಡ್ ನಿರ್ಧರಿಸಿದರೆ ನಾವು ಸ್ವಾಗತಿಸುತ್ತೇವೆ. ಈಶ್ವರಪ್ಪ ಅವರ ನಡೆ ಹಿಂದುತ್ವದ ಕಡೆ, ಈಶ್ವರಪ್ಪ ಅವರ ನಡೆ ಬಿಜೆಪಿ ಕಡೆ ಎಂದಿರುವ ಯತ್ನಾಳ್ ಬಿಜೆಪಿ ಪಕ್ಷ ಕಚೇರಿಯಿಂದ ಹಿಡಿದು ಎಲ್ಲವನ್ನೂ ಸ್ವಚ್ಛಗೊಳಿಸುತ್ತೇವೆ. ಎಲ್ಲ ಕಡೆಯೂ ಬಿಜೆಪಿಯಲ್ಲಿ ಸ್ವಚ್ಛವಾಗಬೇಕು. ಇಡೀ ಕರ್ನಾಟಕದಲ್ಲಿ ಬಹಳ ಕಡೆ ಸ್ವಚ್ಛ ಆಗಬೇಕಿದೆ, ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೂ ಸ್ವಚ್ಛವಾಗಬೇಕಿದೆ. ಗಂಗಾ ನದಿ ನೀರನ್ನು ತರಲು ಕಳಿಸಿದ್ದೇವೆ ಎಂದು ಉತ್ತರ ಕೊಟ್ಟಿದ್ದಾರೆ.



