ಶಿವ ರಾಜ್ ಕುಮಾರ್ ಅವರಿಗೆ ರಾಜಕೀಯದ ಬಿಸಿ ತಟ್ಟುತ್ತಿದೆ. ನಟ ಶಿವರಾಜ್ ಕುಮಾರ್ ಸಿನಿಮಾಗಳ ಪ್ರದರ್ಶನದ ವಿರುದ್ಧ ಬಿಜೆಪಿ ದೂರು ನೀಡಿದೆ. ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ನಟ ಶಿವಣ್ಣ ನಟಿಸಿರುವ ಸಿನಿಮಾ, ಜಾಹೀರಾತುಗಳಿಗೆ ನಿರ್ಬಂಧ ಹೇರುವಂತೆ ಮನವಿ ಮಾಡಿದೆ.
ಶಿವರಾಜಕುಮಾರ್ ಅವರ ಜನಪ್ರಿಯತೆ & ಚಲನಚಿತ್ರಗಳು ಮತದಾರರ ಮೇಲೆ ಪ್ರಭಾವ ಬೀರಲಿದೆ. ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಜ್ ಕುಮಾರ್ ನಟನೆಯ ಚಿತ್ರ ಪ್ರಸಾರಕ್ಕೆ ತಡೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಹಿಂದುಳಿದ ವರ್ಗಗಳ ಮೋರ್ಚಾದಿಂದ ದೂರು ದಾಖಲಾಗಿದ್ದು, ಗೀತಾ ಶಿವರಾಜಕುಮಾರ್ ಅಭ್ಯರ್ಥಿ ಆಗಿರುವುದೇ ಇದಕ್ಕೆಲ್ಲ ಕಾರಣ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಈಗಾಗಲೇ ಪ್ರಚಾರ ಆರಂಭಿಸಿದ್ದು, ತಂದೆ ಎಸ್. ಬಂಗಾರಪ್ಪನವರೇ ನನಗೆ ಆದರ್ಶ ಎಂದಿದ್ದಾರೆ. ಸಾಮಾನ್ಯವಾಗಿ ಕಲಾವಿದರೇ ಅಭ್ಯರ್ಥಿಗಳಾಗಿದ್ದಾಗ ಈ ರೀತಿಯ ನಿರ್ಬಂಧಗಳು ಜಾರಿಯಾಗುತ್ತವೆ. ಈ ಹಿಂದೆಲ್ಲ ಈ ರೀತಿಯ ಬ್ಯಾನ್ ಆಗಿದೆ. ಆದರೆ, ಶಿವಣ್ಣ ಅವರು ಅಭ್ಯರ್ಥಿಯಲ್ಲ. ಕಾಂಗ್ರೆಸ್ ಸದಸ್ಯರೂ ಅಲ್ಲ. ಹೀಗಾಗಿ ಅಯೋಗ ಸೂಚನೆ ನೀಡುವ ಸಾಧ್ಯತೆ ಕಡಿಮೆ ಎನ್ನುವುದು ಕಾನೂನು ತಜ್ಞರ ವಾದ. ಪತ್ನಿ ಅಭ್ಯರ್ಥಿಯಾಗಿರುವುದಕ್ಕೆ ಪತಿಯ ವಿರುದ್ಧ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಆದರೆ, ಶಿವಣ್ಣ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ಧಾರೆ. ಹೀಗಾಗಿ ಕ್ರಮ ಕೈಗೊಂಡರೂ ಆಶ್ಚರ್ಯವಿಲ್ಲ ಎನ್ನುವುದು ಮತ್ತೊಂದು ವಾದ.
ಒಟ್ಟಿನಲ್ಲಿ ಟಿವಿ, ಆನ್ʻಲೈನ್, ರೇಡಿಯೋಗಳಲ್ಲಿ ಶಿವಣ್ಣ ನಟಿಸಿರುವ ಸಿನಿಮಾ, ಹಾಡು, ಜಾಹೀರಾತುಗಳ ಪ್ರಸಾರಕ್ಕೆ ಅಡ್ಡಿಯಂತೂ ಎದುರಾಗಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, 2ನೇ ಹಂತದಲ್ಲಿ ಮೇ 7ರಂದು ಇನ್ನುಳಿದ 14 ಕ್ಷೇತ್ರಗಳಲ್ಲಿ ಮತನಾದ ನಡೆಯಲಿದೆ. ಗೀತಾ ಶಿವರಾಜ್‌ಕುಮಾರ್ ಸ್ಪರ್ಧಿಸುತ್ತಿರುವ ಶಿವಮೊಗ್ಗದಲ್ಲಿ ಮೇ 7ರಂದು ಮತದಾನ ನಡೆಯಲಿದೆ.
ಚುನಾವಣಾ ಆಯೋಗ ಈಗಾಗಲೇ ಮತದಾನದ ದಿನಾಂಕವನ್ನು ಘೋಷಣೆ ಮಾಡಿರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಶಿವಣ್ಣ ಪತ್ನಿಯ ಪರ ಆಕ್ಟಿವ್ ಆಗಿ ಪ್ರಚಾರ ಮಾಡುತ್ತಿದ್ದು, ಹೀಗಾಗಿ ಅವರ ಜಾಹೀರಾತಿಗಳನ್ನು ನಿಷೇಧ ಮಾಡಬೇಕು ಎಂದು ಬಿಜೆಪಿ ಓಬಿಸಿ ಮೋರ್ಚಾ ದೂರನ್ನು ಸಲ್ಲಿಸಿದೆ. ಹೀಗಾಗಿ ಶಿವಣ್ಣ ನಟಿಸಿದ ಜಾಹೀರಾತುಗಳಿಗೆ ತಡೆ ಬೀಳುವ ಸಾಧ್ಯತೆಯಿದೆ. ಶಿವಮೊಗ್ಗದಲ್ಲಿ ಶಿವರಾಜ್‌ಕುಮಾರ್ ಸ್ಟಾರ್ ಅಟ್ರ್ಯಾಕ್ಷನ್ ಆಗಿದ್ದಾರೆ. ಪತ್ನಿ ಪರ ಅವಕಾಶ ಸಿಕ್ಕಾಗಲೆಲ್ಲಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಾಗಿ ಶಿವಣ್ಣ ಈಗಾಗಲೇ ಹೇಳಿದ್ದಾರೆ. ಸಿನಿಮಾ ಹಾಗೂ ಪ್ರಚಾರ ಎರಡನ್ನೂ ಬ್ಯಾಲೆನ್ಸ್ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಸದ್ಯ ಪತ್ನಿ ಗೀತಾ ಪರ ಅಖಾಡಕ್ಕೆ ಇಳಿದಿರುವ ಶಿವಣ್ಣಗೆ ಚಿಕ್ಕದೊಂದು ಸಂಕಷ್ಟ ಎದುರಾಗಿದೆ. 2014ರಲ್ಲಿ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಎದುರು ಪರಾಭಾವಗೊಂಡಿದ್ದರು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೀತಾ ಶಿವರಾಜ್‌ಕುಮಾರ್ ಹೀನಾಯವಾಗಿ ಸೋತಿದ್ದರು. ಆದ್ರೀಗ ಕಾಂಗ್ರೆಸ್ ಪಕ್ಷದಿಂದ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಈ ಬಾರಿ ಯಡಿಯೂರಪ್ಪ ಪುತ್ರ ರಾಘವೇಂದ್ರಗೆ ಭಾರೀ ಪೈಪೋಟಿ ನೀಡಬಹುದೆಂದು ನಿರೀಕ್ಷೆ ಮಾಡಲಾಗಿದೆ.



