ಎಕ್ಕ ಚಿತ್ರದ ಮೇಲೆ ಭರ್ಜರಿ ನಿರೀಕ್ಷೆ ಇದೆ. ಯುವ ರಾಜ್ ಕುಮಾರ್ ಅವರಿಗೆ ಇದು 2ನೇ ಸಿನಿಮಾ. ಮೊದಲ ಸಿನಿಮಾದಲ್ಲಿ ಆಗದ ಮ್ಯಾಜಿಕ್, ಈ ಸಿನಿಮಾದಲ್ಲಿ ಆಗಿದೆ. ʻಯುವʼ ರಿಲೀಸ್ ಹೊತ್ತಿಗೆ ಅಭಿಮಾನಿಗಳಲ್ಲಿ ಒಂದು ಕ್ರೇಜ್ ಇತ್ತೇ ಹೊರತು, ಸಿನಿಮಾದಲ್ಲಿ ಕೊರತೆ ಎದ್ದು ಕಾಣ್ತಾ ಇತ್ತು. ಚಿತ್ರದ ಟ್ರೇಲರ್, ಹಾಡು ಯಾವುದೂ ದೊಡ್ಡ ಹಿಟ್ ಆಗಿರಲಿಲ್ಲ. ಅಭಿಮಾನಿಗಳಿಗೆ ಮಾತ್ರ ಇಷ್ಟವಾಗಿತ್ತು. ಈ ಬಾರಿ ಹಾಗಾಗಲಿಲ್ಲ. ಹೀಗಾಗಿಯೇ ಎಕ್ಕ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಗ್ತಾ ಇದೆ. ಯುವ ರಾಜ್ ಕುಮಾರ್ ಅಭಿನಯದ ಎಕ್ಕ ಸಿನಿಮಾಗೆ ದೊಡ್ಡ ಓಪನಿಂಗ್ ಸಿಕ್ಕಿದೆ. ಚಿತ್ರದ ಹಾಡುಗಳು.. ಅದರಲ್ಲೂ ವಿಶೇಷವಾಗಿ ಬ್ಯಾಂಗಲ್ ಬಂಗಾರಿ ಹಾಡು.. ಚಿತ್ರಕ್ಕೊಂದು ಹೈಪ್ ಸೃಷ್ಟಿಸಿಕೊಟ್ಟಿದೆ. ಜೊತೆಗೆ ಚಿತ್ರದ ಟ್ರೇಲರ್. ಇದೆಲ್ಲದರಿಂದಾಗಿ ಎಕ್ಕ ಸಿನಿಮಾ ಓಪನಿಂಗ್ ಸಕ್ಸಸ್ ಆಗಿದೆ.
ಎಂದಿನಂತೆ ಬಳ್ಳಾರಿ, ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಅಬ್ಬರದ ಆರಂಭ ಸಿಕ್ಕಿದ್ದು, ಅರ್ಲಿ ಮಾರ್ನಿಂಗ್ ಶೋಗಳಾಗಿವೆ. ಇತ್ತೀಚೆಗೆ ಮಿಡ್ ನೈಟ್ ಶೋ ಬಂದ್ ಆದ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಗೇ ಶೋ ಶುರು ಮಾಡಲಾಗಿದೆ. ಎಕ್ಕ ಸಿನಿಮಾಗೆ ಒನ್ಸ್ ಎಗೇನ್ ದೊಡ್ಮನೆ ಹುಡುಗನ ಚಿತ್ರ ಎಂಬುದೇ ಕುತೂಹಲಕ್ಕೆ ಕಾರಣ. ಜೊತೆಗೆ ಈ ಚಿತ್ರಕ್ಕೆ ನಿರ್ಮಾಪಕಿಯಾಗಿ ಅಶ್ವಿನಿ ಪುನೀತ್ ಇರುವುದೂ ಒಂದು ಕಾರಣ. ಅಶ್ವಿನಿ ಅವರ ಜೊತೆಗೆ ಜಯಣ್ಣ ಫಿಲಮ್ಸ್, ಕಾರ್ತಿಕ್ ಗೌಡರ ಕೆಆರ್‌ಜಿ ಸ್ಟುಡಿಯೋಸ್ ಕೂಡಾ ಕೈಜೋಡಿಸಿದೆ. ಹೀಗಾಗಿ ಅದ್ಧೂರಿತನಕ್ಕೆ ಕೊರತೆ ಇಲ್ಲ.
ನಾಯಕಿಯಾಗಿ ಬ್ಯಾಂಗಲ್ ಬಂಗಾರಿ ಸಂಜನಾ ಆನಂದ್, ಸಂಪದಾ ಹುಲಿವಾನ, ಶೃತಿಯವರಿದ್ದಾರೆ. ರೋಹಿತ್ ಪದಕಿ ಅವ ನಿರ್ದೇಶನ ಇದೆ. ರೋಹಿತ್ ಪದಕಿ ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಮಾಡಿದ್ದವರು. ಅದು ಕ್ಲಾಸ್ ಸಿನಿಮಾ. ಇದು ಮಾಸ್ ಸಿನಿಮಾ.
ಸಿನಿಮಾದಲ್ಲಿ ಜಾಕಿ, ವಂಶಿ ಚಿತ್ರದ ಶೇಡ್ ಇದ್ದರೂ.. ಅವುಗಳಿಗೂ ಇದಕ್ಕೂ ಸಂಬಂಧ ಇಲ್ಲ. ನಿರ್ಮಾಪಕರಲ್ಲಿ ಒಬ್ಬರಾದ ಕಾರ್ತಿಕ್ ಗೌಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು ʻʻ ಜಾಕಿ ಚಿತ್ರಕ್ಕೂ ಎಕ್ಕ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಜಾಕಿ ಚಿತ್ರದಲ್ಲಿ ಅಪ್ಪು ಸರ್ ಹಾಕಿದ್ದ ಒಂದು ಗೆಟಪ್ ಫಾಲೋ ಮಾಡಿದ್ದೇವೆ. ಮೇಲುಕೋಟೆಯಲ್ಲಿ ಜಾಕಿ ಸಿನಿಮಾ ಶೂಟಿಂಗ್ ಮಾಡಿದ್ದ ಮನೆಯಲ್ಲೇ ಎಕ್ಕ ಸಿನಿಮಾ ಚಿತ್ರೀಕರಣವೂ ಆಗಿದೆ. ಆ ಎರಡು ಸೀನ್ಸ್ ಒಂದೇ ರಿತಿ ಇದೆ ಅಂತಾ ಅನಿಸುತ್ತದೆ ಎನ್ನುವುದು ನಿಜ. ಆದ್ರೆ ಕಥೆ ಅಥವಾ ಸಿನಿಮಾಗೆ ಯಾವುದೇ ಸಂಬಂಧವಿಲ್ಲʼʼ ಎಂದಿದ್ದಾರೆ.
ಕರ್ನಾಟಕದಲ್ಲಿ ‘ಎಕ್ಕ’ ಚಿತ್ರ 350+ ಚಿತ್ರಮಂದಿಗಳಲ್ಲಿ ರಿಲೀಸ್ ಆಗಿದ್ದರೆ, ಅಮೆರಿಕದಲ್ಲಿ 150 ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಪ್ಲಾನ್ ಆಗಿದೆ. ಬೆಂಗಳೂರು, ಮೈಸೂರು, ಕೋಲಾರದಲ್ಲಿ ಮೊದಲ ದಿನದ ಎಲ್ಲ ಶೋಗಳು ಹೌಸ್ ಫುಲ್ ಆಗಿವೆ. ಬುಕ್ ಮೈ ಶೋನಲ್ಲಿ ಬುಕ್ಕಿಂಗ್ ಸ್ಟಾರ್ಟ್ ಆಗುತ್ತಿದ್ದಂತೆಯೇ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲೂ ಸಿನಿಮಾ ರಿಲೀಸ್ ಆಗಿದೆ. ಆದರೆ.. ದೊಡ್ಡ ಮಟ್ಟದ ಸಂಖ್ಯೆಯ ಸ್ಕ್ರೀನ್ ಲಭ್ಯವಾಗಿಲ್ಲ.
ಅಲ್ಲದೆ ಚಿತ್ರದ ಮೇಕಿಂಗ್ ಕೂಡಾ ಅದ್ಧೂರಿಯಾಗಿಯೇ ಇದೆ. ಸಿಂಪಲ್ ಆಗಿ ಹೇಳ್ಬೇಕಂದ್ರೆ.. ಒಂದು ವೈಬ್ ಕ್ರಿಯೇಟ್ ಆಗಿದೆ. ಚಿತ್ರದ ಟ್ರೇಲರಿನಲ್ಲಿ ಬಂದ ಡೈಲಾಗು, ಹಾಡುಗಳು, ಸಾಹಿತ್ಯ.. ಈಗ ಅಭಿಮಾನಿ ಅಲ್ಲದವರ ಮನಸ್ಸನ್ನೂ ಗೆದ್ದಿವೆ. ಸಿನಿಮಾ.. ಥಿಯೇಟರಿಗೆ ಬಂದು ನೋಡಿದ ಪ್ರೇಕ್ಷಕರಿಗೂ ಇಷ್ಟವಾದರೆ.. ಸಿನಿಮಾ ಗೆದ್ದಂತೆ.



