ಎಕ್ಕ. ಈ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾ. ಸಿನಿಮಾ ಗೆದ್ದಿದೆ. ಯುವರಾಜ್ ಕುಮಾರ್ ಗೆದ್ದಿದ್ದಾರೆ. ಬಾಕ್ಸಾಫೀಸ್ ಕಲೆಕ್ಷನ್ 10 ಕೋಟಿ ದಾಟಿದೆ ಎನ್ನುವುದು ಒಂದು ಮೂಲವಾಧರೆ.. ಇನ್ನೊಂದು ಮೂಲದ ಪ್ರಕಾರ ಅದು 14 ಕೋಟಿಯನ್ನೂ ದಾಟಿದೆ. ಈ ವರ್ಷ 10 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಕ್ಕ.
ಸಿನಿಮಾ ಗೆದ್ದಿದೆ ಅನ್ನೋದನ್ನು ಹೇಳೋದು ಹೇಗೆ..? ಸಿಂಪಲ್.. ಚಿತ್ರದ ಡೈಲಾಗ್ಸ್.. ಸೀನ್ ವೈರಲ್ ಆಗುತ್ತದಲ್ಲಾ.. ಅದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಸುಮ್ಮನೆ ಒಂದಿಷ್ಟು ಸ್ಯಾಂಪಲ್ ನೋಡಿ..
ವಿಲನ್ ಮತ್ತೊಬ್ಬ ವಿಲನ್ ಗೆ ಹೇಳೋ ಮಾತು.
ʻʻಮಚ್ಚಾ… ಎಲ್ಲಾ ಆಟಗಳಿಗಿಂತ ದೊಡ್ಡ ಆಟ ಯಾವ್ದು ಗೊತ್ತಾ?.. ಉಸಿರಾಟ..ಕಣೋʼʼ
ಇನ್ನೊಂದು ಸೀನ್. ರೌಡಿಗಳ ಪರೇಡ್ ಆದ ನಂತರ ರಾಜಕಾರಣಿಯೊಬ್ಬ ಹೇಳೋದು..
ಸರ್ ಇವತ್ತು ರೌಡಿಗಳ ಜೊತೆಗಿನ ಮೀಟಿಂಗ್ ಹೇಗಾಯ್ತು ಅಂತ ಯಾರೋ ಕೇಳ್ದಾಗ ರಾಜಕಾರಣಿ ಹೇಳೋದು ʻಮಂಗಗಳನ್ನು ಮೆಡಿಟೇಶನ್ನಿಗೆʼ ಕೂರಿಸಿದಂತಿತ್ತು.
ಮತ್ತೊಂದು ದೃಶ್ಯದಲ್ಲಿ ಪೊಲೀಸ್ ಅನ್ನವನ್ನು ನಾಯಕನ ಕೈಗೆ ಕೊಡದೆ, ನೆಲದ ಮೇಲೆ ಎಸೆದುಬಿಟ್ಟಾಗ… ʼ ಅನ್ನಕ್ಕೆ ಎಲೆ ಇಲ್ಲದೇ ಇದ್ರೂ ಬೆಲೆ ಇದೆ” ಅನ್ನೋ ಯುವನ ಡೈಲಾಘ್.
ಹೂವು ಮಾರೋ ಹುಡುಗ ಯುವನಿಗೆ ʻʻನಾನೂ ನಿಮ್ಮ ಜೊತೆ ಬರ್ಲಾ ಅಂದಾಗ.. ಹೆಂಗೋ ದೇವಸ್ಥಾನದ ಹತ್ರ ಹೂವು ಮಾರ್ಕೊಂಡಿದ್ದೀಯ, ನಮ್ಜೊತೆ ಬಂದ್ರೆ ಹೂವು ಹಾಕಿಸ್ಕೊಂಡು ದೇವರ ಹತ್ರಾನೆ ಹೋಗಿ ಬಿಡ್ತೀಯ.. ಅನ್ನೋ ಯುವನ ಡೈಲಾಘ್.. ವ್ಹಾವ್ ಅನ್ನಿಸುತ್ತೆ.
ಇದು ಯುವರಾಜ್ ಕುಮಾರ್ ಅಭಿನಯದ 2ನೇ ಸಿನಿಮಾವೂ ಹೌದು. ಹೀಗಾಗಿಯೇ ಚಿತ್ರತಂಡ ಅದ್ಧೂರಿ ಸೆಲಬ್ರೇಷನ್ ಮಾಡಿದೆ. ನಿರ್ಮಾಪಕಿ ಅಶ್ವಿನಿ ಪುನೀತ್, ಜಯಣ್ಣ ಮತ್ತು ಭೋಗೇಂದ್ರ, ಕಾರ್ತಿಕ್ ಗೌಡ, ಯೋಗಿ ಬಿ ರಾಜ್ ಎಲ್ಲರೂ ಸೇರಿ ಚಿತ್ರತಂಡದೊಂದಿಗೆ ಹಬ್ಬ ಮಾಡಿದ್ದಾರೆ. ನಿರ್ದೇಶಕ ರೋಹಿತ್ ಪದಕಿ, ಯುವ, ಸಂಜನಾ, ಸಂಪದಾ, ಅರುಣ್ ರಾಜ್, ವಿಕ್ರಮ್ ಹತ್ವಾರ್, ಮಾಸ್ತಿ.. ಎಲ್ಲರೂ ಸೇರಿ ಸಂಭ್ರಮಿಸಿದ್ದಾರೆ.
ತಮಗೆ ಸಿಕ್ಕ ʻಬ್ಯಾಂಗಲ್ ಬಂಗಾರಿʼ ಹೆಸರಿನ ಬಗ್ಗೆ ಸಂಜನಾ ಖುಷಿಯಾಗಿದ್ದಾರೆ. ಸಿನಿಮಾ ನೋಡಿದವರಿಗೆ ನಮಗೂ ಬಂಗಾರಿಯಂತಹ ಹುಡುಗಿ ಸಿಗಲಿ ಎಂದು ಕನವರಿಸುವಷ್ಟು ಚೆನ್ನಾಗಿ ನಟಿಸಿದ್ದಾರೆ. ಸಂಪದಾ ಕೂಡಾ.. ಬಾರ್ ಡ್ಯಾನ್ಸರ್ ಪಾತ್ರಕ್ಕೆ ಜೋಷ್ ತುಂಬಿದ್ದಾರೆ.
ಅಂದಹಾಗೆ ಮುಂದಿನ 8 ತಿಂಗಳಲ್ಲಿ ಮತ್ತೆ ಬರ್ತೀನಿ ಎಂದು ಘೋಷಿಸಿದ್ದಾರೆ ಯುವ. ಆದರೆ..ಯಾವ ಸಿನಿಮಾ.. ಗೊತ್ತಿಲ್ಲ. ಎಕ್ಕ ಚಿತ್ರದಲ್ಲಿರುವುದು ನನ್ನ ಕಥೆಯಲ್ಲ, ಅದು ತಾತನ ಕಥೆ ಎಂದಿರುವ ಯುವ, ಮುತ್ತುರಾಜ್ ಅಂದು ಚಿತ್ರರಂಗಕ್ಕೆ ಬಂದಾಗ ಒಂದು ಒಳ್ಳೆಯ ಟೀಂ ಸಿಕ್ಕಿತ್ತು. ಒಳ್ಳೆಯವರು, ಒಳ್ಳೆಯ ಉದ್ದೇಶದಿಂದ ಬೆಳೆದು ಮುತ್ತುರಾಜ್ ಡಾ.ರಾಜ್ ಆದರು. ನನಗೂ ಹಾಗೆಯೇ.. ಒಳ್ಳೆಯ ಟೀಂ, ಒಳ್ಳೆಯ ಉದ್ದೇಶ ಇದ್ದ ತಂಡದ ಜೊತೆ ಬಂದೆ. ಒಳ್ಳೆಯ ಸಿನಿಮಾ ಆಯಿತು. ಇದು ಇಡೀ ಚಿತ್ರತಂಡಕ್ಕೆ ಸಿಗಬೇಕಾದ ಗೆಲುವು ಎಂದು ಹೇಳಿಕೊಂಡರು ಯುವ. ಮಗನಿಗೆ ಒಳ್ಳೆಯ ಸಿನಿಮಾ ಕೊಟ್ಟಿದ್ದಕ್ಕೆ ಅಶ್ವಿನಿಗೆ ವಿಶೇಷ ಧನ್ಯವಾದ ಅರ್ಪಿಸಿದರು ರಾಘವೇಂದ್ರ ರಾಜ್ ಕುಮಾರ್. ಒಟ್ಟಿನಲ್ಲಿ 7ನೇ ತಿಂಗಳಲ್ಲಿ ಎಕ್ಕ ಚಿತ್ರರಂಗಕ್ಕೆ ಜಾಕ್ ಪಾಟ್ ಕೊಟ್ಟಿದೆ.



