ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪೊಲೀಸರ ಮುಂದೆ ಸ್ವ-ಇಚ್ಛಾ ಹೇಳಿಕೆ ದಾಖಲಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆಯಲ್ಲಿ ತಮ್ಮ ಪಾತ್ರದ ಬಗ್ಗೆ ಇಂಚಿಂಚು ಮಾಹಿತಿಯನ್ನೂ ನೀಡಿದ್ದಾರೆ. ಇದೆಲ್ಲವೂ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್ ಕಾಪಿಯಲ್ಲಿದೆ. ಜೊತೆಗೆ ರಿಮ್ಯಾಂಡ್ ಕಾಪಿ ಮತ್ತು ಹೊರಗೆ ಬಂದಿರುವ ಮಾಹಿತಿಗಳ ಪ್ರಕಾರ.. ರೇಣುಕಾಸ್ವಾಮಿ ಸಾಯುವುದಕ್ಕೂ ಮುನ್ನ ನರಕವನ್ನೇ ಕಂಡಿದ್ದಾನೆ. ಅನುಭವಿಸಿದ್ದಾನೆ. ನರ ನರಗಳಲ್ಲೂ ನೋವಿನ ʻದರ್ಶನʼವಾಗಿದೆ. ಕೊಲೆ ಮಾಡುವುದಕ್ಕೆ ಮೊದಲು ನಡೆದ ಭೀಕರ ಹಲ್ಲೆಗಳ ವಿವರಗಳು ಒಂದೊಂದಾಗಿ ಹೊರಬರುತ್ತಿವೆ. ಫೋಟೋಗಳಂತೂ ಭಯಾನಕವಾಗಿದೆ.
ಅವುಗಳನ್ನು ನೋಡಿದಾಗ ಗೊತ್ತಾದ ಅಂಶಗಳೆಂದರೆ..
ರೇಣುಕಾಸ್ವಾಮಿಯ ಕಿವಿ ಕಟ್ ಆಗಿದೆ. ಕತ್ತರಿಸಿದ ಭಾಗ ಸಿಕ್ಕಿಲ್ಲ. ಯಾವುದೋ ನಾಯಿಯೋ.. ಮತ್ತೇನೋ ತಿಂದು ಹಾಕಿರಬೇಕು.
ಕೈಗೆ ಮತ್ತೆ ಮತ್ತೆ ಶಾಕ್ ಕೊಟ್ಟು ಹಿಂಸೆ ನೀಡಲಾಗಿದೆ. ಕೈಗಳ ಮೇಲಿರೋದು ಸಿಗರೇಟಿಂದ ಸುಟ್ಟ ಗಾಯಗಳಲ್ಲ. ಮೆಗ್ಗರ್ ಮೆಷಿನ್ ಎಫೆಕ್ಟ್.
ರೇಣುಕಾಸ್ವಾಮಿಯ ಬಾಯಿಗೆ ಒದ್ದು ಛಿದ್ರ-ಛಿದ್ರಗೊಳಿಸಲಾಗಿದೆ. ಹಾಗೆ ಛಿದ್ರಗೊಂಡ ಭಾಗವನ್ನು ನಾಯಿಗಳು ಕಿತ್ತು ತಿಂದಿವೆ.
ತೊಡೆಯ ಭಾಗಕ್ಕೆ ಒದ್ದ ರಭಸಕ್ಕೆ ವೃಷಣಗಳು ಈಚೆ ಬಂದಿವೆ. ವೃಷಣಗಳನ್ನು ಗುದ್ದಿದ ನಂತರ ದರ್ಶನ್ ಅವರ ಎಲ್ಲ ಸಹಚರರೂ ಅಲ್ಲಿಗೇ ಒದ್ದಿದ್ದಾರೆ. ರೇಣುಕಾ ಮರ್ಮಾಂಗಕ್ಕೆ ಹೊಡೆತ ಬಿದ್ದಿದ್ದು, ಮರ್ಮಾಂಗದಿಂದ ರಕ್ತ ಸೋರಿಕೆಯಾಗಿದೆ.
ಬೆನ್ನಿಗೆ ಯಾವ ಪರಿ ಹೊಡೆದಿದ್ದಾರೆಂದರೆ, ಬೆನ್ನಿನ ಭಾಗದಲ್ಲಿ ಬಾಸುಂಡೆಗಳು ಮೂಡಿವೆ. ರೇಣುಕಾಸ್ವಾಮಿಯನ್ನು ಹಿಡಿದು ಅಲ್ಲಿಯೇ ಇದ್ದ ಲಾರಿಗೆ ಗುದ್ದಿದ್ದಾರೆ. ಗುದ್ದಿದ ನಂತರ ತಲೆಯಲ್ಲಿ ರಕ್ತ ಸುರಿಯೋಕೆ ಶುರುವಾಗಿದೆ. ಹೆದರಿದ ದರ್ಶನ್ ಗ್ಯಾಂಗ್ʻನವರು ತಕ್ಷಣ ಒಂದಿಷ್ಟು ಹರಿಶಿಣ ಮೆತ್ತಿ ರಕ್ತಸ್ರಾವ ತಪ್ಪಿಸಿದ್ದಾರೆ.
ಹೊಟ್ಟೆಗೆ ಮರದ ಪೀಸ್ನಿಂದ ಹಲ್ಲೆಯಾಗಿದ್ದು, ಹೊಟ್ಟೆ ಭಾಗದಲ್ಲೂ ರಕ್ತ ಸೋರಿಕೆಯಾಗಿದೆ.
ಕೈ ಮತ್ತು ಕಾಲುಗಳಲ್ಲಿ ರಕ್ತ ಸೋರಿಲ್ಲ. ಆದರೆ ಹೊಡೆತ ಬಿದ್ದಿದೆ. ತಲೆಗೂ ಹೊಡೆತ ಬಿದ್ದಿದೆ, ಆದ್ರೆ ರಕ್ತ ಸೋರಿಲ್ಲ. ತಲೆಗೆ ಗುದ್ದಿದಾಗ ರಕ್ತಸ್ರಾವವಾಗಿ, ಅತ್ತ ವೃಷಣಗಳೂ ಹೊರಬಂದಿದ್ದ ಕಾರಣ ಅಶಕ್ತರಾಗಿದ್ದ ರೇಣುಕಾಸ್ವಾಮಿಯ ಉಸಿರಾಟ ಹಂತ ಹಂತವಾಗಿ ಕಡಿಮೆಯಾಗಿದೆ.
ಯಾವಾಗ ರೇಣುಕಾಸ್ವಾಮಿ ಸಾವಿನ ಅಂಚಿಗೆ ತಲುಪಿದನೋ.. ಆಗ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರೂ ಕೊಲೆಯ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎನ್ನುವುದು ಪೊಲೀಸರ ಬಳಿ ಸಿಕ್ಕಿರುವ ಮಾಹಿತಿ.
ಹಲ್ಲೆಗೂ ಮೊದಲು.. ಜೂ.8ರಂದು ಶನಿವಾರ ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತರುವಾಗ ದಾರಿಯುದ್ದಕ್ಕೂ ರೇಣುಕಾಸ್ವಾಮಿ ಮೇಲೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಆತನ ಸಹಚರರಾದ ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್ ಹಾಗೂ ರವಿಶಂಕರ್ ತಲೆ ಮೇಲೆ ಹೊಡೆದುಕೊಂಡೇ ಕರೆತಂದಿದ್ದರು. ಈ ಹಲ್ಲೆಯಿಂದಲೇ ಆತ ಸ್ವಲ್ಪ ಮಟ್ಟಿಗೆ ಹೈರಾಣಾಗಿದ್ದ. ತಮ್ಮ ಅತ್ತಿಗೆಗೆ (ಪವಿತ್ರಾಗೌಡ) ಅಶ್ಲೀಲ ಮೆಸೇಜ್ ಕಳುಹಿಸುತ್ತೀಯಾ ಏನೋಲೇ ಎಂದು ನಿಂದಿಸಿ ರೇಣುಕಾಸ್ವಾಮಿ ಮೇಲೆ ಚಿತ್ರದುರ್ಗದ ದರ್ಶನ್ ಸಹಚರರು ಹಲ್ಲೆ ಮಾಡಿದ್ದರು ಎಂದು ಮೂಲಗಳು ಹೇಳಿವೆ.
ದರ್ಶನ್ ಸ್ವ ಇಚ್ಚಾ ಹೇಳಿಕೆ : ಕೊಲೆಯಲ್ಲಿ ತಾವು ಭಾಗಿ ಆದ ವಿಷಯದಿಂದ ಹಿಡಿದು, ಹಲ್ಲೆ ಮಾಡಿದ್ದು, ಹಲ್ಲೆ ಮಾಡಿದ ರೀತಿ, ಪ್ರಕರಣದಲ್ಲಿ ತಮ್ಮ ಹೆಸರು ಮುನ್ನೆಲೆಗೆ ಬರದಂತೆ ತಡೆಯಲು ಮಾಡಿದ್ದ ಪ್ರಯತ್ನವನ್ನೆಲ್ಲ ವಿವರವಾಗಿ ಹೇಳಿದ್ದಾರೆ. ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಪ್ರದೋಶ್ಗೆ 30 ಲಕ್ಷ ರೂಪಾಯಿ ಹಣ ನೀಡಿದ್ದು, ಆ ನಂತರ ಪ್ರಭಾವಿಗಳನ್ನು ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು ಎಲ್ಲವನ್ನೂ ಹೇಳಿದ್ದಾರೆ. ಈ ಮಾಹಿತಿ ಪೊಲೀಸರು ನ್ಯಾಯಾಲಯಕ್ಕೆ ನೀಡಿರುವ ರಿಮ್ಯಾಂಡ್ ಕಾಪಿಯಲ್ಲಿ ಅಧಿಕೃತವಾಗಿಯೇ ದಾಖಲಾಗಿದೆ.
ಪ್ರಕರಣದಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದವರ ಸಂಖ್ಯೆ ಹೆಚ್ಚಿದೆ. ಅದರಲ್ಲಿ ದರ್ಶನ್ ಸಹ ಒಬ್ಬರಾಗಿದ್ದು, ಸ್ವ-ಇಚ್ಛೆ ಹೇಳಿಕೆ ದಾಖಲಿಸಿದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಆಗಬಹುದೆಂಬ ನಿರೀಕ್ಷೆಯಿಂದ ಹಾಗೂ ಪೊಲೀಸ್ ಕಸ್ಟಡಿಯನ್ನು ಆದಷ್ಟು ಬೇಗ ಅಂತ್ಯಗೊಳಿಸುವ ದೃಷ್ಟಿಯಿಂದ ದರ್ಶನ್ ಹೀಗೆ ಮಾಡಿರಬಹುದು ಎನ್ನುವುದು ಕೆಲವರ ವಾದ. ದರ್ಶನ್ರ ಸ್ವ-ಇಚ್ಛಾ ಹೇಳಿಕೆಯಿಂದ ಪ್ರಕರಣ ಇನ್ನಷ್ಟು ಸುಲಭವಾಗಿದೆ. ಆದರೆ, ಆ ಹೇಳಿಕೆಯ ಅನುಸಾರ ಪೊಲೀಸರು ಸಾಕ್ಷ್ಯಗಳನ್ನು ಒಟ್ಟುಗೂಡಿಸಬೇಕು.



