ಒಬ್ಬ ಸ್ಟಾರ್ ನಟನನ್ನು ಇಷ್ಟು ಸುಲಭವಾಗಿ, ನಡು ರೋಡಿನಲ್ಲೇ ಅರೆಸ್ಟ್ ಮಾಡ್ತಾರಾ..? ಅರೆಸ್ಟ್ ಮಾಡಿದರೂ.. ಕೈಗೆ ಬೇಡಿ ಹಾಕಿ ಮೆರವಣಿಗೆ ಮಾಡ್ತಾರಾ..? ಇಷ್ಟಕ್ಕೂ ದುನಿಯಾ ವಿಜಯ್ ಅವರು ಮಾಡಿರೋ ತಪ್ಪಾದರೂ ಏನು..? ಕೆಲವು ವರ್ಷಗಳ ಹಿಂದೆ ಮುಟ್ಟಿದ್ದನ್ನೆಲ್ಲ ಕಾಂಟ್ರವರ್ಸಿ ಮಾಡಿಕೊಳ್ಳುತ್ತಿದ್ದ ವಿಜಯ್, ಇತ್ತೀಚೆಗೆ ಕೆಲವು ವರ್ಷಗಳಿಂದ ಕಾಂಟ್ರವರ್ಸಿಗಳಿಂದ ದೂರವೇ ಇದ್ದಾರಲ್ಲ.. ಏನಾಯ್ತು..?
ದುನಿಯಾ ವಿಜಯ್ ಅರೆಸ್ಟ್ ಆಗಿದ್ದಾರೆ. ಮೈತುಂಬಾ ರಕ್ತ ಸುರಿಸಿಕೊಂಡಿರುವ ವಿಜಯ್ ಅವರನ್ನು ಪೊಲೀಸರು ಬೀದಿಯಲ್ಲೇ ಬಂಧಿಸಿದ್ದಾರೆ. ವಿಜಯ್ ಕೈಗೆ ಬೇಡಿ ತೋಡಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ವಿನೋವಾ ರಸ್ತೆಯಲ್ಲಿ ವಿಜಯ್ ಕಂಡು ಬಹುತೇಕರು ಗಾಬರಿಗೊಂಡಿದ್ದಾರೆ. . ವಿಜಯ್ ಮೈ ತುಂಬಾ ರಕ್ತ ಹರಿಯುತ್ತಿರುವಾಗಲೇ ಪೊಲೀಸರು ವಿಜಯ್ ಕೈಗೆ ಬೇಡಿ ತೊಡಿಸಿದ್ದಾರೆ.
ಡೋಂಟ್ ವರಿ.. ಇದು ಭೀಮ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ದೃಶ್ಯವಷ್ಟೇ. ನಡು ರಸ್ತೆಯಲ್ಲಿ ವಿಜಯ್ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗುವ ದೃಶ್ಯ ನೋಡಿ, ಅದು ಚಿತ್ರೀಕರಣದ ವಿಡಿಯೋ ಎಂದು ಗೊತ್ತಾಗದೇ ಇರುವವರು ಮಾತ್ರ ಗಾಬರಿಯಾಗಿದ್ಧಾರೆ. ಭೀಮನ ಕ್ಲೈಮಾಕ್ಸ್ ಸೀನ್ ಏನಿರುತ್ತೆ ಅನ್ನೋದು ಈ ಮೂಲಕ ಪ್ರೇಕ್ಷಕರಿಗೆ ಗೊತ್ತಾಗಿದೆ.
ಭೀಮ. ದುನಿಯಾ ವಿಜಯ್ ನಟಿಸಿ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ. ವಿಜಯ್ ಎದುರು ಅಶ್ವಿನಿ ಹೀರೋಯಿನ್. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಪಕರಾಗಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಇದೆ.
ಅಂದಹಾಗೆ ಭೀಮ ಚಿತ್ರದಲ್ಲಿ ಡ್ರಗ್ಸ್ ಲೋಕದ ವಿಚಿತ್ರ ಕಥೆ ಹೇಳುತ್ತಿದ್ಧಾರೆ ವಿಜಯ್. ಈಗಾಗಲೇ ಚಿತ್ರದ ಲವ್ ಯೂ ಹಾಗೂ ಸೈಕ್ ಚಿತ್ರಗಳು ಟ್ರೆಂಡಿಂಗ್ʻನಲ್ಲಿವೆ. ಈಗ ವಿಜಯ್ ಅರೆಸ್ಟ್ ವಿಷಯವೂ ಸುದ್ದಿಯಾಗಿದೆ. ಒಟ್ಟಿನಲ್ಲಿ ವಿಜಯ್ ಅವರ ಚಿತ್ರಕ್ಕೆ ಬೇಡವೆಂದರೂ ಪ್ರಚಾರ ಸಿಗುತ್ತಿದೆ.



