ಡಾ. ರಾಜ್‌ಕುಮಾರ್ ಮೊಮ್ಮಕ್ಕಳಾದ ವಿನಯ್ ರಾಜ್ ಕುಮಾರ್ ಮತ್ತು ಯುವ ರಾಜ್ ಕುಮಾರ್ ಚಿತ್ರರಂಗದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಈ ವರ್ಷ ಇಬ್ಬರು ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈ ಮಧ್ಯೆ ವಿಶೇಷ ಬೆಳವಣಿಗೆಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಅದೇನಪ್ಪ ಅಂದ್ರೆ ಯುವ ಮತ್ತು ವಿನಯ್ ಅವರ ಮುಂದಿನ ಸಿನಿಮಾಗಳಿಗೆ ‘ದುನಿಯಾ’ ವಿಜಯ್ ಅವರ ಪುತ್ರಿಯರು ನಾಯಕಿಯರಾಗಿ ಆಯ್ಕೆ ಆಗಿದ್ದಾರೆ.
ʻದುನಿಯಾʼ. ದಶಕದ ಹಿಂದೆ ಬಂದ ಸಿನಿಮಾ ನಿರ್ದೇಶಕ ಸೂರಿ, ನಾಯಕ ನಟ ವಿಜಯ್ ಅವರನ್ನು ಚಿತ್ರರಂಗಕ್ಕೆ ಸ್ಟಾರ್ʻಗಳನ್ನಾಗಿಸಿತ್ತು. ಇದೀಗ ದುನಿಯಾ ವಿಜಯ್, ಸಲಗ ವಿಜಯ್ ಆಗಿ ಬದಲಾಗಿದ್ದಾರೆ. ಅವರೂ ನಿರ್ದೇಶಕರಾಗಿದ್ದಾರೆ. ವಿಜಯ್ ಅವರ ಇಬ್ಬರು ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಎರಡನೇ ಮಗಳು ಮೊನಿಷಾ ವಿನಯ್ ರಾಜ್ ಕುಮಾರ್ ಅವರೊಂದಿಗೆ ನಾಯಕಿಯಾಗಿ ಬರುತ್ತಿದ್ದಾರೆ. ಸಿಟಿ ಲೈಟ್ಸ್ ಚಿತ್ರಕ್ಕೆ ವಿಜಯ್ ಅವರೇ ಡೈರೆಕ್ಟರ್.
ಇದೀಗ ಅವರ ಇನ್ನೊಬ್ಬ ಮಗಳು ರಿತನ್ಯಾ ಕೂಡಾ ಯುವ ರಾಜ್ ಕುಮಾರ್ ಅವರಿಗೆ ಹೀರೋಯಿನ್ ಆಗ್ತಿದ್ದಾರೆ. ಎಕ್ಕ ಸಿನಿಮಾದಲ್ಲಿ ನಟಿಸುತ್ತಿರುವ ಯುವ ಅವರ 3ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆ ಸಿನಿಮಾಗೆ ದುನಿಯಾ ಸೂರಿ ಡೈರೆಕ್ಟರ್. ರಿತನ್ಯಾ ಹೀರೋಯಿನ್.
2015ರಲ್ಲಿ ರಿಲೀಸ್ ಆಗಿದ್ದ ‘ಕೆಂಡಸಂಪಿಗೆ’ ಚಿತ್ರದ ಪ್ರೀಕ್ವೆಲ್ ‘ಕಾಗೆ ಬಂಗಾರ’ ಸಿನಿಮಾ ತೆರೆ ಕಾಣುವುದಾಗಿ ಘೋಷಿಸಲಾಗಿತ್ತು. ಇದೀಗ ಆ ‘ಕಾಗೆ ಬಂಗಾರ’ ಸೆಟ್ಟೇರುತ್ತಿದೆ. ಯುವ ರಾಜ್‌ಕುಮಾರ್ ಹೀರೋ ಆದರೆ, ನಾಯಕಿಯಾಗಿ ದುನಿಯಾ ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ. ಜಯಣ್ಣ ಕಂಬೈನ್ಸ್, ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರ ಏಪ್ರಿಲ್ ತಿಂಗಳಲ್ಲಿ ಸೆಟ್ಟೇರಲಿದೆ. ಮೈಸೂರು, ವಿರಾಜಪೇಟೆ, ಮಂಗಳೂರು ಸುತ್ತಮುತ್ತ ಶೂಟಿಂಗ್ ಮಾಡುವ ಯೋಜನೆ ಇದೆ. ನಗರ ಪ್ರದೇಶದ ಪ್ರೇಮಕಥೆ, ದುಡ್ಡು, ಜೀವನ ಮತ್ತು ಮನುಷ್ಯ ಸಂಬಂಧಗಳ ಸುತ್ತ ಇದರ ಕಥೆ ಸಾಗಲಿದೆಯಂತೆ.
ಈಗಾಗಲೇ ‘ದುನಿಯಾ’ ವಿಜಯ್ ಅವರ ‘ಲ್ಯಾಂಡ್‌ಲಾರ್ಡ್’ ಚಿತ್ರದ ಮೂಲಕ ರಿತನ್ಯಾ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ವಿಜಯ್ ಅವರ ಮಗಳಾಗಿ ನಟಿಸುತ್ತಿದ್ದಾರೆ ರಿತನ್ಯಾ. ವಿಜಯ್ ಅವರನ್ನು ಸ್ಟಾರ್ ಹೀರೋ ಆಗಿಸಿದ ಸೂರಿ, ಈಗ ವಿಜಯ್ ಅವರ ಮಗಳನ್ನು ಹೀರೋಯಿನ್ ಮಾಡುತ್ತಿದ್ದಾರೆ.
ಈಚೆಗಷ್ಟೇ ಸೆಟ್ಟೇರಿದ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್‌ಗೆ ಜೋಡಿಯಾಗಿ ‘ದುನಿಯಾ’ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ನಾಯಕಿಯಾಗಿದ್ದಾರೆ. ವಿಶೇಷವೆಂದರೆ, ಇದು ಮೋನಿಶಾ ನಟನೆಯ ಮೊದಲ ಸಿನಿಮಾಗೆ ಡೈರೆಕ್ಷನ್ ಮಾಡುತ್ತಿರುವುದು ಸ್ವತಃ ‘ದುನಿಯಾ’ ವಿಜಯ್. ಈಗಾಗಲೇ ಫಸ್ಟ್ ಲುಕ್‌ನಿಂದಲೇ ಗಮನಸೆಳೆದಿರುವ ಈ ಸಿನಿಮಾ ಪಕ್ಕಾ ಹಿಟ್ ಅನ್ನೋ ಮಾತು ‘ದುನಿಯಾ’ ವಿಜಯ್ ಫ್ಯಾನ್ಸ್ ಕಡೆಯಿಂದ ಕೇಳಿಬರುತ್ತಿದೆ.
ಇನ್ನು ದುನಿಯಾ ವಿಜಯ್ ಅವರು ಶಿವಣ್ಣ ಅವರನ್ನು ಹಿರಿಯ ನಟ ಎಂಬ ಸ್ಥಾನಕ್ಕಿಂತಲೂ ಮೇಲೆ ಇಟ್ಟಿದ್ದಾರೆ. ಇತ್ತೀಚೆಗೆ ವಿಜಯ್ ಅವರ ಭೀಮ ಚಿತ್ರದ ಪ್ರಚಾರದ ವೇಳೆ ಹೂವಿನ ಸುರಿಮಳೆ ಸುರಿಸಿ ಸನ್ಮಾನಿಸಿದ್ದ ವಿಜಯ್ ಅವರು ದೊಡ್ಮನೆಯನ್ನು ನೋಡುವ ರೀತಿ, ಕೊಡುವ ಗೌರವ ಬೇರೆಯದೇ ರೀತಿಯದ್ದು. ಇದೀಗ ವಿಜಯ್ ಅವರ ಮಕ್ಕಳು ಇಬ್ಬರೂ ದೊಡ್ಮನೆಯ ಹೀರೋಗಳ ಜೊತೆ ನಾಯಕಿಯರಾಗುತ್ತಿದ್ದಾರೆ.



