ಕೆಲವೇ ತಿಂಗಳು.. ತಿಂಗಳೇಕೆ.. ಕೆಲವೇ ದಿನಗಳ ಹಿಂದೆ.. ಕೆಟ್ಟ ಮುಖ ಹಾಕಿಕೊಂಡು ಕುಳಿತಿದ್ದ ಕನ್ನಡ ಚಿತ್ರರಂಗದಲ್ಲೀಗ ಸಂಭ್ರಮ.. ಸಡಗರ.. ಹಲವು ತಿಂಗಳುಗಳ ಬಳಿಕ ಕನ್ನಡ ಚಿತ್ರರಂಗ ನಗು ನಗುತ್ತಾ ಸಂಭ್ರಮಿಸುತ್ತಿದೆ. ಕನ್ನಡ ಸಿನಿಮಾಗಳ ಸತತ ಸೋಲು, ಥಿಯೇಟರುಗಳು ಮುಚ್ಚಿದ್ದು, ಛತ್ರಗಳಾಗಿ ಬದಲಾಗಿದ್ದು, ಮಲ್ಟಿಪ್ಲೆಕ್ಸುಗಳಲ್ಲೂ ತಲ್ಲಣ, ಪ್ರೇಕ್ಷಕರೇ ಬಾರದೆ.. ಸಂಭ್ರಮಕ್ಕೆ ಸಮಾಧಿ ಕಟ್ಟಲಾಗಿತ್ತು. ಜೊತೆಗೆ ಸ್ಟಾರ್ ನಟ ದರ್ಶನ್ ಅಗತ್ಯವಿಲ್ಲದೆ ಮಾಡಿಕೊಂಡಿರುವ ಅನಾಹತದಿಂದಾಗಿ ಜೈಲು ಸೇರಿದ್ದು, ಸಿನಿಮಾ ನಿರ್ಮಾಪಕರಾಗಿದ್ದವರು, ನಿರ್ದೇಶಕರಾಗಿದ್ದವರ ಹಠಾತ್ ಆತ್ಮಹತ್ಯೆ ಪ್ರಕರಣಗಳು, ಹಲವು ನಟರ ಸಿನಿಮಾಗಳು ಸೆಟ್ಟೇರಿ ಸ್ಟಾಪ್ ಆಗಿದ್ದು.. ಹೀಗೆ ಸೂತಕದ ಕಳೆಯೇ ತುಂಬಿತ್ತು. ಆದರೆ.. ಸಂಭ್ರಮ ಮತ್ತೆ ಮರುಕಳಿಸಿದೆ.
ಮೊದಲಿಗೆ ದುನಿಯಾ ವಿಜಯ್ ಅವರ ಭೀಮ ಗೆದ್ದು ಥಿಯೇಟರುಗಳಲ್ಲಿ ಜನ ತುಂಬಿಕೊಂಡಿದ್ದಾರೆ. ಬೆನ್ನಲ್ಲೇ ಬಂದ ಕೃಷ್ಣಂ ಪ್ರಣಯ ಸಖಿ ಹಾಗೂ ಗೌರಿ ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. ಭೀಮ ಆಲ್ಮೋಸ್ಟ್ ಗೆದ್ದ ಹಾಗಿದೆ. ಕೃಷ್ಣಂ ಪ್ರಣಯ ಸಖಿ ಹಾಗೂ ಗೌರಿ ಚಿತ್ರಗಳು ಗೆಲುವಿನ ಷರಾ ಬರೆಯುವುದಕ್ಕೆ ಇನ್ನೂ ಒಂದಿಷ್ಟು ದಿನ ಬೇಕು.
ಈ ನಡುವೆಯೇ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ರಿಷಬ್ ಶೆಟ್ಟಿ ಬೆಸ್ಟ್ ಆಕ್ಟರ್ ಆಗಿದ್ಧಾರೆ. ಕೆಜಿಎಫ್ 2, ಕಾಂತಾರ 2 ಸೇರಿ ಹೊಂಬಾಳೆಯವರೇ 4 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಒಟ್ಟಾರೆ ಕನ್ನಡಕ್ಕೆ 7 ಪ್ರಶಸ್ತಿಗಳು ಬಂದಿವೆ. ಮುಂದಿನ ದಿನಗಳಲ್ಲಿ ಶಿವಣ್ಣ ಅವರ ಭೈರತಿ ರಣಗಲ್, ಉಪೇಂದ್ರರ ಯುಐ, ಧ್ರುವ ಸರ್ಜಾ ಅವರ ಮಾರ್ಟಿನ್, ಕೆಡಿ ಚಿತ್ರಗಳು ರಿಲೀಸ್ ಆಗಲಿವೆ. ಅರ್ಥಾತ್ ಮತ್ತೊಮ್ಮೆ ಕನ್ನಡ ಚಿತ್ರಮಂದಿರಗಳು ಕಳೆಗಟ್ಟಲಿವೆ.
ಇದಕ್ಕೂ ಇತ್ತೀಚೆಗೆ ಡಾ.ರಾಜ್ ಕುಮಾರ್ ಭವನದಲ್ಲಿ ನಡೆದ ಹೋಮ, ಸರ್ಪಶಾಂತಿಗೂ ಸಂಬಂಧ ಕಲ್ಪಿಸುವ ಕೆಲಸವೂ ನಡೆಯುತ್ತಿದೆ. ಯಾರು ಏನೇ ಹೇಳಲಿ.. ಒಳ್ಳೆಯದರ ಕ್ರೆಡಿಟ್ʻನ್ನು ಯಾರು ಬೇಕಾದರೂ ತೆಗೆದುಕೊಳ್ಳಲಿ.. ಒಳ್ಳೆಯದಾಗಬೇಕಷ್ಟೆ.
ಭೀಮ : ದುನಿಯಾ ವಿಜಯ್ ‘ಭೀಮ’ ಸಿನಿಮಾ ಕಲೆಕ್ಷನ್ ಐದನೇ ದಿನಕ್ಕೆ ಹೋಲಿಸಿದರೆ, 6ನೇ ದಿನ ಕೊಂಚ ಮಟ್ಟಿಗೆ ಡ್ರಾಪ್ ಆಗಿದೆ. ಆಗಸ್ಟ್ 14 ವರ್ಕಿಂಗ್ ಡೇ ಆಗಿದ್ದರಿಂದ ಈ ಡ್ರಾಪ್ ಅನ್ನು ನಿರೀಕ್ಷೆ ಮಾಡಲಾಗಿತ್ತು. 5ನೇ ದಿನ 1.3 ಕೋಟಿ ರೂಪಾಯಿ ಕಲೆಕ್ಷನ್ ಕಂಡಿದ್ದರೆ, 6ನೇ ದಿನ ಈ ಸಿನಿಮಾ ಗಳಿಸಿದ್ದು 90 ಲಕ್ಷ ರೂಪಾಯಿಂದ 1 ಕೋಟಿ ರೂಪಾಯಿ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ. ‘ಭೀಮ’ಗೆ ಸಿನಿಮಾದ ಓಪನಿಂಗ್ ಸಖತ್ ಆಗಿಯೇ ಸಿಕ್ಕಿತ್ತು. ಮೊದಲ ಮೂರು ದಿನ ಸರಾಸರಿ 4 ಕೋಟಿ ರೂಪಾಯಿ ಲೆಕ್ಕದಲ್ಲಿ ಕಲೆಕ್ಷನ್ ಆಗಿದೆ. ಮೊದಲ ದಿನ 4.1 ಕೋಟಿ ರೂಪಾಯಿ, ಎರಡನೇ ದಿನ 3.90 ಕೋಟಿ ರೂಪಾಯಿ, ಮೂರನೇ ದಿನ 4.3 ಕೋಟಿ ರೂಪಾಯಿ, ನಾಲ್ಕನೇ ದಿನ 1.5 ಕೋಟಿ ರೂಪಾಯಿ, ಐದನೇ ದಿನ 1.3 ಕೋಟಿ ರೂಪಾಯಿ ಹಾಗೂ ಆರನೇ ದಿನ 1 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಒಟ್ಟು ಆರು ದಿನಗಳಲ್ಲಿ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎನ್ನಲಾಗಿದೆ.
ಕೃಷ್ಣಂ ಪ್ರಣಯ ಸಖಿ : ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ, ಶ್ರೀೕನಿವಾಸ್ ರಾಜು ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಹಾಡುಗಳ ಮೂಲಕ ಗಮನ ಸೆಳೆದಿದ್ದ ಇದೀಗ ವಿಭಿನ್ನ ಕಥೆ ಹಾಗೂ ಚಿತ್ರಕಥೆಯ ಮೂಲಕ ಕೂಡ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಲೀಸ್ ಆದ ಮೊದಲ ದಿನ 1.25 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಶನಿವಾರ, ರವಿವಾರ ಕೂಡ ಹೆಚ್ಚಿನ ಕಲೆಕ್ಷನ್ ಮಾಡಬಹುದು. ಏಕೆಂದರೆ ಫ್ಯಾಮಿಲಿ ಡ್ರಾಮಾ ಸಿನಿಮಾ. ಲಾಂಗ್ ವೀಕೆಂಡ್ ಇರೋದರಿಂದ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಕರು ಚಿತ್ರಮಂದಿರದತ್ತ ಮುಖ ಮಾಡುವ ನಿರೀಕ್ಷೆಯಿದೆ. ಬುಕ್ ಮೈ ಶೋ ಆಪ್‌ನಲ್ಲಿ ಸದ್ಯ 9.2 ರೇಟಿಂಗ್, ಐಎಂಡಿಬಿಯಲ್ಲಿ 8.7 ರೇಟಿಂಗ್ ಸಿಕ್ಕಿದೆ.



