ಪುನೀತ್ ಅವರು ನಿಧನರಾಗುವುದಕ್ಕಿಂತ ಮುಂಚೆ ಶಿವಣ್ಣನ ಜೊತೆ ಎರಡು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದರು. ಭಜರಂಗಿ 2 ರಿಲೀಸ್ ಆದ ದಿನವೇ ಅಪ್ಪು ಅಗಲಿದ್ದರು. ಅದಕ್ಕೂ ಮುನ್ನ ಸಲಗ ಚಿತ್ರದ ʻಟಿಣಿಂಗ ಮಿಣಿಂಗ ಟಿಷ್ಯಾ..ʼ ಹಾಡನ್ನು ಬಹಳ ಇಷ್ಟಪಟ್ಟಿದ್ದರು. ಸಲಗ ಚಿತ್ರವನ್ನು ಅದ್ಧೂರಿಯಾಗಿ ಪ್ರಮೋಟ್ ಮಾಡಿಕೊಟ್ಟಿದ್ದರು ಅಪ್ಪು. ಅದಾದ ಮೇಲೆ ನಡೆದ ಸಲಹ ಸಕ್ಸಸ್ ಈವೆಂಟ್ʻನಲ್ಲಿ ಕೂಡಾ ಶಿವಣ್ಣ ಜೊತೆ ಹಾಡಿ ಕುಣಿದಿದ್ದರು ಅಪ್ಪು. ಸಲಹ ಹಿಟ್ ಆಗಿತ್ತು. ಈಗ ಭೀಮ ಚಿತ್ರ ರಿಲೀಸ್ ಆಗ್ತಿದೆ.
‘ದುನಿಯಾ’ ವಿಜಯ್ ಅವರ ಹೊಸ ಸಿನಿಮಾ ‘ಭೀಮ’ ರಿಲೀಸ್‌ಗೆ ರೆಡಿ ಆಗಿದೆ. ಆಗಸ್ಟ್ 9ರಂದು ‘ಭೀಮ’ ಸಿನಿಮಾವು ತೆರೆಗೆ ಬರುತ್ತಿದೆ. ಟ್ರೇಲರ್ ಮಾಸ್ ಆಗಿದೆ. ಭೀಮ ಟ್ರೇಲರ್ ಲಾಂಚ್ ಮಾಡಿದ ಶಿವಣ್ಣ ದಂಪತಿ ಚಿತ್ರತಂಡಕ್ಕೆ ಶುಭ ಕೋರಿದ್ಧಾರೆ. ತಮ್ಮ ಮತ್ತು ವಿಜಯ್ ನಡುವಿನ ಒಡನಾಟ ನೆನಪಿಸಿಕೊಂಡಿರುವ ಶಿವಣ್ಣ “ವಿಜಯ್ ಜೊತೆಗೆ ನನ್ನ ಒಡನಾಟ 20-25 ವರ್ಷ ಹಳೆಯದು. ನಾನು ನಟಿಸಿದ್ದ ‘ರಾಕ್ಷಸ’ ಸಿನಿಮಾದಲ್ಲಿ ವಿಜಯ್ ನಟಿಸಿದ್ದರು. ನಂತರ ‘ಜೋಗಿ’ ಸಿನಿಮಾದಲ್ಲಿ ನಟಿಸಿದ್ದರು. ಅದು ಸಣ್ಣ ಪಾತ್ರ ಬೇಡ ಎಂದಿದ್ದೆ. ಆದರೂ ಬಂದು ನಟಿಸಿ ಹೋಗಿದ್ದರು. ‘ದುನಿಯಾ’ ಸಿನಿಮಾದಿಂದ ಹೀರೋ ಆದರು” ಎಂದು ನೆನಪಿಸಿಕೊಂಡಿದ್ದಾರೆ.
ದುನಿಯಾ ಮುಹೂರ್ತಕ್ಕೆ ನನಗೆ ಆಮಂತ್ರಣ ಇತ್ತು. ಆದರೆ ಆಗಿನ್ನೂ ಅಪ್ಪಾಜಿ ತೀರಿಕೊಂಡಿದ್ದ ನೋವಿನಲ್ಲಿದ್ದೆ. ಅದನ್ನು ಚಿತ್ರತಂಡದವರಿಗೂ ಹೇಳಿದ್ದೆ. ಸಿನಿಮಾ ರಿಲೀಸ್ ಆದ ಮೇಲೆ ಹೋಗಿ ನೋಡಿದ್ದೆ. ಆ ಚಿತ್ರಕ್ಕೆ ವಿಜಯ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ನನಗೆ 25 ವರ್ಷಗಳ ನಂತರ ಸಿಕ್ಕ ಪ್ರಶಸ್ತಿ, ವಿಜಯ್ ಅವರಿಗೆ ಮೊದಲ ಚಿತ್ರದಲ್ಲಿಯೇ ಸಿಕ್ಕಿತ್ತು ಎಂದು ನೆನಪಿಸಿಕೊಂಡ ಶಿವಣ್ಣ ಅಪ್ಪುನನ್ನೂ ನೆನಪು ಮಾಡಿಕೊಂಡರು.
‘ಸಲಗ’ ಸಿನಿಮಾದ ಇವೆಂಟ್‌ಗೆ ನಾನು ಮತ್ತು ಅಪ್ಪು ಇಬ್ಬರೂ ಬಂದಿದ್ದೆವು. ಈಗ ಅವನು ನಮ್ಮ ಮಧ್ಯೆ ಇಲ್ಲ. ಆದರೆ ಈಗಲೂ ಅವನು ಬಂದಿದ್ದಾನೆ. ನನ್ನ ಜೊತೆಗೆ ಅವನೂ ಇದ್ದಾನೆ. ಅಪ್ಪು ಎಲ್ಲೇ ಇದ್ದರೂ ಅವನ ಆಶೀರ್ವಾದ ಈ ತಂಡದ ಮೇಲೆ ಇರಲಿದೆ. ಅಪ್ಪು ಇಲ್ಲ ಎಂದುಕೊಳ್ಳುವುದು ಬೇಡ. ಇಲ್ಲೇ ಎಲ್ಲೋ ಹೋಗಿದ್ದಾನೆ, ವಾಪಸ್ ಬರ್ತಾನೆ ಎಂದುಕೊಳ್ಳೋಣ. ವಿಜಯ್ ಕೂಡ ನನ್ನ ಬ್ರದರ್ ಇದ್ದಂತೆ. ಭೀಮ ಸಿನಿಮಾಗೆ ಯಶಸ್ಸು ಸಿಗಲಿ ಎಂದು ಶಿವಣ್ಣ ಹಾರೈಸಿದ್ದಾರೆ.
ವಿಶೇಷ ಅಂದ್ರೆ ಭೀಮ ಚಿತ್ರ ರಿಲೀಸ್ ಆಗೋದ್ರೊಂದಿಗೆ ಮುಚ್ಚಲ್ಪಟ್ಟಿದ್ದ 15 ಚಿತ್ರಮಂದಿರಗಳು ರೀ ಓಪನ್ ಆಗುತ್ತಿವೆ. ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮುಚ್ಚುತ್ತಿವೆ, ಸ್ಟಾರ್ ಸಿನಿಮಾ ಯಾವುದೂ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ‘ಭೀಮ’ ಸಿನಿಮಾ ಹೊಸ ಭರವಸೆ ಮೂಡಿಸಿದೆ. ಮುಚ್ಚಿ ಹೋಗಿರುವ 18 ಚಿತ್ರಮಂದಿರಗಳು ಈ ಚಿತ್ರದ ಮೂಲಕ ಮತ್ತೆ ಓಪನ್ ಆಗಲಿದೆ. ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಹೇಗಿದೆ ಭೀಮ ಟ್ರೇಲರ್..?
ಡ್ರಗ್ ವ್ಯಸನವನ್ನೇ ಪ್ರಧಾನ ಕಥೆಯನ್ನಾಗಿ ಮಾಡಿಕೊಂಡು, ರೌಡಿಸಂ ಮೂಲಕ ರಕ್ತದೋಕುಳಿ ಹರಿಸುವ ಕೆಲಸವೂ ಈ ಚಿತ್ರದಲ್ಲಿ ಕಾಣಿಸುತ್ತದೆ. ಎಂದಿನಂತೆ, ನಟ ದುನಿಯಾ ವಿಜಯ್ ಆಕ್ಷನ್ ಮೂಲಕವೇ ಭೀಮ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಡ್ರಗ್ಸ್ ಮಾತ್ರವಲ್ಲದೆ, ವ್ಹೀಲಿಂಗ್ ಕ್ರೇಜ್ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ. ಮಾಸ್ತಿಯವರ ಸಂಭಾಷಣೆ ಕಿಚ್ಚು ಹಚ್ಚುತ್ತದೆ. ಮೇಕಿಂಗ್ ಗಮನ ಸೆಳೆಯುತ್ತಿದೆ. ದುನಿಯಾ ವಿಜಯ್ ಅವರ ಎದುರು ಅಶ್ವಿನಿ ನಾಯಕಿಯಾಗಿ ನಟಿಸಿದ್ದಾರೆ. ಆಕ್ಷನ್ ಮೈನವಿರೇಳಿಸುವಂತಿದೆ.



