ದುನಿಯಾ ವಿಜಯ್, ಸಲಗ ವಿಜಯ್ ಆಗಿದ್ದಾಗಿದೆ. ನಡು ನಡುವೆ ʻಜಂಗ್ಲಿʼ ʻದನಕಾಯೋನುʼ ಆಗಿಯೂ ಗೆದ್ದಿರುವ ವಿಜಯ್, ʻಜಯಮ್ಮನ ಮಗʼ ಜಾನಿ ಆಗಿಯು ಸಕ್ಸಸ್ ಕಂಡಿದ್ದಾರೆ. ಇತ್ತೀಚೆಗಷ್ಟೇ ಭೀಮನಾಗಿದ್ದ ವಿಜಯ್, ಈಗ ಲ್ಯಾಂಡ್ ಲಾರ್ಡ್ ಆಗಿದ್ದಾರೆ. ತಮ್ಮ 50 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿಜಯ್ ಅವರನ್ನು ಲ್ಯಾಂಡ್ ಲಾರ್ಡ್ ಮಾಡಿರುವುದು ಕಾಟೇರ ಖ್ಯಾತಿಯ ಜಡೇಶ್ ಕೆ ಹಂಪಿ. ದುನಿಯಾ ವಿಜಯ್ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಎರಡೂ ಕೈಯಲ್ಲಿ ಕೊಡಲಿ ಹಿಡಿದು ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ ವಿಜಯ್.
ನಾನು ನೋಡಿರುವ, ನನಗೆ ಪರಿಚಯವಿರೋ ಕಥೆಯನ್ನ ಪ್ರಾಮಾಣಿಕವಾಗಿ ಹೇಳಬಹುದು ಅಂತ ನಾನು ನಂಬಿರೋದ್ರಿಂದ ಹಳ್ಳಿಯ ಸೊಗಡಿನ, ಮಣ್ಣಿನ ಬದುಕು-ಬವಣೆಯ ಕಥೆಯನ್ನ ನಿಮ್ಮ ಮುಂದೆ ತರುತ್ತಿದ್ದೇನೆ.. ನಿಮ್ಮ ಸಹಕಾರ ನಮ್ಮ ಮೇಲಿರಲಿ ಎಂದು ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ ಜಡೇಶ್.
ಕೆ ಎಸ್ ಸೂರಜ್ ಗೌಡ ಹಾಗೂ ಕೆ ವಿ ಸತ್ಯಪ್ರಕಾಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಹುಟ್ಟುಹಬ್ಬದ ದಿನ ವಿಜಯ್, ಮನೆಯಲ್ಲಿರೋದಿಲ್ಲ. ಕಾಯಕವೇ ಕೈಲಾಸ ಎಂದು ನಂಬಿರುವ ವಿಜಯ್, ಹುಟ್ಟುಹಬ್ಬದ ದಿನ ಚಿತ್ರೀಕರಣದಲ್ಲಿರುತ್ತಾರೆ. ತಂದೆ ತಾಯಿ ಅಗಲಿದ ಮೇಲೆ ತಮ್ಮ ತಂದೆ-ತಾಯಿಯ ಸಮಾಧಿ ಬಳಿ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದ ವಿಜಯ್, ಜಡೇಶ್ ಕೆ ಹಂಪಿ ನಿರ್ದೇಶನದ ಲ್ಯಾಂಡ್ ಲಾರ್ಡ್ ಚಿತ್ರದ ಚಿತ್ರೀಕರಣದಲ್ಲೇ ಇರುತ್ತಾರೆ. ಅಂದ ಹಾಗೆ ವಿಜಯ್ ಅವರಿಗೆ ಇದು 50ನೇ ಹುಟ್ಟುಹಬ್ಬ.
ದುನಿಯಾ ವಿಜಯ್ ಸಿನಿಮಾ ಲೈಫ್ 2004 ರಲ್ಲಿಯೇ ಶುರು ಆಗಿದೆ. ಕಿಚ್ಚ ಸುದೀಪ್ ಅಭಿನಯದ ರಂಗ ಎಸ್‌ಎಸ್‌ಎಲ್‌ಸಿ, ಜೋಗಿ ಮೊನಾಲಿಸಾ, ರಿಷಿ, ರಾಕ್ಷಸ ಹೀಗೆ ದುನಿಯಾ ವಿಜಯ್ ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಲೇ ಗೆದ್ದವರು. ಹೀರೋ ಆದವರು. ನಂತರ ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಗೆದ್ದಿರುವ ವಿಜಯ್ ಅವರ ಬದುಕು ಬದಲಿಸಿದ್ದು ದುನಿಯಾ. 2007 ರಲ್ಲಿ ಬಂದ ದುನಿಯಾ ಚಿತ್ರ ವಿಜಯ್ ಬದುಕು ಬದಲಿಸಿತು. ಇಂಡಸ್ಟ್ರಿಯಲ್ಲಿ ಹೊಸ ಅಲೆ ಎಬ್ಬಿಸಿತ್ತು. ಅಲ್ಲಿವರೆಗೂ ಈ ಜಾನರ್ ಚಿತ್ರ ಬಂದಿರಲಿಲ್ಲ. ಕಂಪ್ಲೀಟ್ ಹೊಸ ರೀತಿಯ ಚಿತ್ರವೇ ಇದಾಗಿತ್ತು. ಡೈರೆಕ್ಟರ್ ಸೂರಿ, ವಿಜಯ್ ಹಣೆಬರಹವನ್ನೇ ಬದಲಿಸಿದ್ದರು.
ನಿರ್ಮಾಪಕರಾಗಿ ಗೆದ್ದ ವಿಜಯ್, ನಿರ್ದೇಶಕರಾಗಿ ಸಲಗ, ಭೀಮ ಮಾಡಿ ಅಲ್ಲಿಯೂ ಗೆದ್ದರು. ಕಳೆದ ವರ್ಷ ಸತತ ಸೋಲುಗಳನ್ನೆ ಕಂಡಿದ್ದ ಇಂಡಸ್ಟ್ರಿಯಲ್ಲಿ ಭೀಮ ಗೆಲುವಿನ ಉಲ್ಲಾಸ ತುಂಬಿತ್ತು. ಜನ ಥಿಯೇಟರ್‌ಗೆ ಬರೋದಿಲ್ಲ ಅನ್ನೋ ಟೈಮ್ ಅಲ್ಲಿ ಈ ಚಿತ್ರ ಅದನ್ನ ಸುಳ್ಳು ಮಾಡಿತ್ತು. ದುನಿಯಾ ವಿಜಯ್ ಕನ್ನಡ ಇಂಡಸ್ಟ್ರಿಗೆ ನಿಜಕ್ಕೂ ಭೀಮ ಬಲದಂತೆ ಕಾಣಿಸಿಕೊಂಡಿದ್ದರು. ಕನ್ನಡದ ಈ ಭೀಮನಿಗೆ ಈ ದಿನ ಜನ್ಮ ದಿನ, ಇಂದು 50ನೇ ಜನ್ಮ ದಿನ ಸೆಲೆಬ್ರೇಟ್ ಮಾಡ್ತಿದ್ದಾರೆ. ಆದರೆ ಚಿತ್ರೀಕರಣದಲ್ಲಿ ಚಿತ್ರೀಕರಣ ಮಾಡುವ ಮೂಲಕ.



