ನಟ ಡಾ.ರಾಜ್ ಅವರ ಕುಟುಂಬಕ್ಕೂ ಕಣ್ಣಪ್ಪನಿಗೂ ವಿಶೇಷ ಸಂಬಂಧವಂತೂ ಇದೆ. ಡಾ.ರಾಜ್ ಚಿತ್ರರಂಗಕ್ಕೆ ಬಂದಿದ್ದೇ ಬೇಡರ ಕಣ್ಣಪ್ಪ ಚಿತ್ರದಿಂದ. ಆ ಕಣ್ಣಪ್ಪನನ್ನು ಕನ್ನಡಿಗರು ಎಂದಿಗೂ ಮರೆಯಲ್ಲ.
ಅದಾದ ಮೇಲೆ ಶಿವಣ್ಣ ಕೂಡಾ ಶಿವ ಮೆಚ್ಚಿದ ಕಣ್ಣಪ್ಪನಾಗಿ ನಟಿಸಿದ್ದರು. ಅಪ್ಪ ನಟಿಸಿದ್ದ ಅದೇ ಪಾತ್ರದಲ್ಲಿ ಮಗ ನಟಿಸಿದ್ದು.
ಅಣ್ಣ ಕಣ್ಣಪ್ಪನಾದಾಗ ತಮ್ಮ ಪುನೀತ್ ಕೂಡಾ ಬಾಲಕ ಕಣ್ಣಪ್ಪನಾಗಿದ್ದರು.
ಇದೀಗ ಮತ್ತೊಮ್ಮೆ ಶಿವಣ್ಣ ಕಣ್ಣಪ್ಪನ ಜೊತೆಯಾಗುತ್ತಿದ್ದಾರೆ. ಅದೂ ತೆಲುಗಿನಲ್ಲಿ.
ತೆಲುಗಿನಲ್ಲಿ ಮೋಹನ್ ಬಾಬು ತಮ್ಮ ಮಗ ಮಂಚು ವಿಷ್ಣು ಲೀಡ್ ರೋಲ್‌ನಲ್ಲಿ ‘ಕಣ್ಣಪ್ಪ’ ಚಿತ್ರ ಮಾಡ್ತಿರೋದು ಗೊತ್ತೇಯಿದೆ. ಈಗಾಗಲೇ ಈ ಚಿತ್ರದಲ್ಲಿ ಬಾಹುಬಲಿ ಪ್ರಭಾಸ್, ಮೋಹನ್ ಲಾಲ್ ನಟಿಸೋದು ಪಕ್ಕಾ ಆಗಿದೆ. ನಯನತಾರ ಕೂಡ ನಟಿಸುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಇದೀಗ ಶಿವಣ್ಣ ಕೂಡ ಚಿತ್ರದ ಭಾಗವಾಗುತ್ತಿರುವುದನ್ನು ಮಂಚು ವಿಷ್ಣು ಖಚಿತಪಡಿಸಿದ್ದಾರೆ.
ಭಾರತದ ನೆಲದ ಈ ಕಥೆಯ ಚಿತ್ರೀಕರಣ ನಡೆಯೋದು ಮಾತ್ರ ನ್ಯೂಜಿಲೆಂಡ್ನಲ್ಲಿ. ಅದಕ್ಕೆ ಕಾರಣ ಕಾಡಿನಲ್ಲಿನ ಹಾಗೂ ಪ್ರಾಣಿಗಳ ಚಿತ್ರೀಕರಣಕ್ಕೆ ಇರುವ ಸಮಸ್ಯೆಗಳು ಎನ್ನಲಾಗಿದೆ. ಈಗಾಗಲೇ 7 ಟ್ರಕ್ಕುಗಳಲ್ಲಿ ಸೆಟ್ ಪ್ರಾಪರ್ಟಿ ಎಲ್ಲವನ್ನೂ ನ್ಯೂಜಿಲ್ಯಾಂಡ್ಗೆ ತಲುಪಿಸಲಾಗಿದೆ.



