ವರದಪ್ಪ. ಡಾ.ರಾಜ್ ಕುಮಾರ್ ಅವರನ್ನು ಗೌರಿ ಶಂಕರ ಎಂದು ಪರಿಗಣಿಸಿದರೆ, ಆ ಗೌರಿ ಶಂಕರದ ಆಧಾರ ಸ್ತಂಭವಾಗಿರುವ ಹಿಮಾಲಯ ತಪ್ಪಲಿನ ಮೇರು ಶಿಖರ ವರದಪ್ಪ ಎನ್ನಬಹುದು. ವರದಪ್ಪ ಕೂಡಾ ತಂದೆ, ಅಣ್ಣನ ಜೊತೆಯಲ್ಲೇ ನಾಟಕಕ್ಕೆ ಬಂದವರು. ರಂಗಭೂಮಿಯಲ್ಲಿ ವಿಶೇಷವಾಗಿ ಹಾಸ್ಯ ಪಾತ್ರಗಳಲಿ ನಟಿಸುತ್ತಿದ್ದ ವರದಪ್ಪ, ಆರಂಭದಲ್ಲಿ ಒಂದೆರಡು ಚಿತ್ರಗಳಲ್ಲಿ ನಟನೆಯನ್ನೂ ಮಾಡಿದ್ದಾರೆ.
ಬಾಲನಟರಾಗಿ ಮಕರಂದನಾಗಿ ಕೃಷ್ಣಲೀಲಾ ಎಂಬ ಚಿತ್ರದಲ್ಲಿ ನಟಿಸಿದ್ದವರು ವರದಪ್ಪ. ಡಾ.ರಾಜ್ ಅಭಿನಯದ ಸರ್ವಜ್ಞ ಮೂರ್ತಿ, ಸತಿ ಶಕ್ತಿ, ಧರ್ಮ ವಿಜಯ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ಅಣ್ಣ ಚಿತ್ರರಂಗದಲ್ಲಿ ಬೆಳೆಯುತ್ತಿದ್ದದ್ದನ್ನು ನೋಡಿ, ಅಣ್ಣನ ಆಧಾರಸ್ತಂಭವಾಗಿ ನಿಂತುಬಿಟ್ಟರು ವರದಪ್ಪ. ಅಣ್ಣನ ಚಿತ್ರಗಳಿಗಷ್ಟೇ ಅಲ್ಲ, ಸ್ವತಃ ನಿರ್ಮಾಪಕರಾಗಿ ಕೆಲವು ಚಿತ್ರಗಳನ್ನೂ ನಿರ್ಮಾಣ ಮಾಡಿದ್ದಾರೆ. ವಿಷ್ಣುವರ್ಧನ್, ಲೋಕೇಶ್ ಅಭಿನಯದ ಭೂತಯ್ಯನ ಮಗ ಅಯ್ಯು, ಲೋಕೇಶ್ ಪ್ರಧಾನ ಪಾತ್ರದಲ್ಲಿದ್ದ ಭೂಲೋಕದಲ್ಲಿ ಯಮರಾಜ, ಉದಯ್ ಕುಮಾರ್ ನಾಯಕರಾಗಿದ್ದ ಹೇಮಾವತಿ ಮೊದಲಾದ ಚಿತ್ರಗಳನ್ನು ಪಾಲುದಾರಿಕೆಯಲ್ಲಿ ನಿರ್ಮಾಣ ಮಾಡಿದ್ದವರು ವರದಪ್ಪ.
ಹಾಗೆ ನೋಡಿದರೆ, ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಅವರ ಇಡೀ ಕುಟುಂಬ ಸಕ್ರಿಯವಾಗಿದೆ. ಡಾ.ರಾಜ್, ಪಾರ್ವತಮ್ಮ, ವರದಪ್ಪ, ಪುನೀತ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದವರು. ನಂತರ ಶಿವಣ್ಣ, ರಾಘವೇಂದ್ರ ರಾಜ್ ಕುಮಾರ್ ಅಷ್ಟೇ ಅಲ್ಲದೆ, ಶಿವಣ್ಣ ಪತ್ನಿ ಗೀತಾ ಮಗಳು ನಿವೇದಿತಾ ನಿರ್ಮಾಪಕಿಯಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡಾ ನಿರ್ಮಾಪಕಿ. ಇನ್ನು ರಾಘವೇಂದ್ರ ಅವರ ಮಕ್ಕಳಾದ ಯುವ ಮತ್ತು ವಿನಯ್ ಹೀರೋಗಳು.
ಇನ್ನು ಕುಟುಂಬ, ಬಳಗದ ವಿಷಯಕ್ಕೆ ಬಂದರೆ ಅದು ಇನ್ನಷ್ಟು ದೊಡ್ಡದಾಗಿದೆ. ರಾಮ್ ಕುಮಾರ್, ಅವರ ಮಕ್ಕಳಾದ ಧಿರೇನ್, ಧನ್ಯಾ, ನಿರ್ಮಾಪಕ ಚಿನ್ನೇಗೌಡ್ರು, ಅವರ ಮಕ್ಕಳಾದ ವಿಜಯ್ ರಾಘವೇಂದ್ರ, ಶ್ರೀಮುರಳಿ ಕೂಡಾ ನಟರೇ. ಇನ್ನು ಸ್ವಲ್ಪ ದೂರದ ಸಂಬಂಧಿಗಳ ಲೆಕ್ಕಕ್ಕೆ ಹೋದರೆ, ಪಟ್ಟಿ ಇನ್ನೂ ಬೆಳೆಯುತ್ತದೆ. ಇದೀಗ ವರದಪ್ಪನವರ ಮೊಮ್ಮಗ ಪೃಥ್ವಿ ರಾಜ್ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಪೃಥ್ವಿರಾಜ್ ಹೀರೋ ಆಗಿ ನಟಿಸಿರುವ ‘ಮಿಂಚು ಹುಳು’ ಅ.4ರಂದು ಬಿಡುಗಡೆ ಆಗಲಿದೆ. ಮಹೇಶ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಜಗೋಪಾಲ್ ದೊಡ್ಡಹುಲ್ಲೂರು ನಿರ್ಮಾಣ ಮಾಡಿದ್ದಾರೆ. ನಿರ್ಮಾಣದಲ್ಲಿ ವಿಜಯ್ ಕುಮಾರ್, ಅಬ್ದುಲ್ ರಫೀಕ್ ಉಲ್ಲಾ ಕೂಡ ಸಾಥ್ ನೀಡಿದ್ದಾರೆ. ಅಣ್ಣಾವ್ರ ಆತ್ಮೀಯರಾದ ದೊಡ್ಡಹುಲ್ಲೂರು ರುಕ್ಕೋಜಿ ರಾವ್ ಅವರು ತಮ್ಮೂರಿನ ನಿರ್ಮಾಪಕರಿಗೆ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ಆಯಿತು. ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ, ಲಕ್ಷ್ಮಿ, ಪೂರ್ಣಿಮಾ ರಾಮ್ ಕುಮಾರ್, ಹಂಸಲೇಖ, ಪಿ. ಶೇಷಾದ್ರಿ, ಜಯಮಾಲಾ, ಲಹರಿ ವೇಲು, ಪ್ರೊ. ರಾಜಪ್ಪ ದಳವಾಯಿ, ಶಾಸಕ ಶರತ್ ಬಚ್ಚೇಗೌಡ ಮುಂತಾದ ಗಣ್ಯರು ಸಿನಿಮಾ ನೋಡಿ ಮೆಚ್ಚಿದ್ದಾರೆ.
ಸಿನಿಮಾ ಆಗುವುದಕ್ಕೆ ಪುನೀತ್ ರಾಜ್‌ಕುಮಾರ್ ಅವರು ಮುಖ್ಯ ಕಾರಣ ಎಂದಿರುವ ನಿರ್ದೇಶಕ ಮಹೇಶ್ ಕುಮಾರ್ ಇದು ಕಂಟೆಂಟ್ ಆಧರಿಸಿದ ಸಿನಿಮಾ ಎಂದಿದ್ದಾರೆ. ನನ್ನದು ಮುಖ್ಯ ಪಾತ್ರಕ್ಕೆ ಪೂರಕವಾಗಿ ನಿಲ್ಲುವ ಪಾತ್ರ ಎನ್ನುತ್ತಾರೆ ಪೃಥ್ವಿರಾಜ್.
ಜವಾಬ್ದಾರಿ ಇಲ್ಲದ ತಂದೆ ಮತ್ತು ಮಗನ ಕಥೆ ಮಿಂಚುಹುಳ ಚಿತ್ರದಲ್ಲಿದೆ. ಬಾಡಿಗೆ ಕಟ್ಟಲಾಗದೆ ಒಂದು ಪಾಳು ಮನೆಯಲ್ಲಿ ವಾಸ ಮಾಡುಔ ಕುಟುಂಬ, ಆ ಮನೆಗೆ ಕರೆಂಟ್ ಕನೆಕ್ಷನ್ ಪಡೆಯುವುದಕ್ಕೆ ಹರಸಾಹಸ ಮಾಡುತ್ತದೆ. ತಂದೆ ಏನೇನೋ ಮಾಡಿ ಹಣ ಹೊಂದಿಸುತ್ತಾನೆ. ಆದರೆ ಆ ಹಣ ಇಲಿ ಪಾಲಾಗುತ್ತದೆ. ಇತ್ತ ಮಗ ಮಿಂಚುಹುಳು ನೋಡಿ ಒಂದು ಐಡಿಯಾ ಮಾಡ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಕಥೆ. ಬಾಲ ನಟನಾಗಿ ಪ್ರೀತಮ್ ಕೊಪ್ಪದ ನಟಿಸಿದ್ದು, ಮುಖ್ಯ ಪಾತ್ರಕ್ಕೆ ಪೂರಕವಾಗಿ ನಿಲ್ಲುವ ಪಾತ್ರದಲ್ಲಿ ಪೃಥ್ವಿರಾಜ್ ಕಾಣಿಸಿಕೊಂಡಿದ್ದಾರೆ.
ಅಣ್ಣತಮ್ಮನ ಬಾಂಧವ್ಯ ಅಜರಾಮರ : ಅಣ್ಣ, ಅತ್ತಿಗೆಯ ಜೊತೆ ಬೆನ್ನೆಲುಬಾಗಿದ್ದ ವರದಪ್ಪನವರು ನಿಧನರಾಗಿದ್ದು ೨೦೦೬ನೇ ಇಸವಿ ಫೆಬ್ರವರಿ ೮ನೇ ತಾರೀಕು. ತಮ್ಮನ ಜೊತೆ ಡಾ.ರಾಜ್ ಬಾಂಧವ್ಯ ಎಷ್ಟು ಅದ್ಭುತವಾಗಿತ್ತು ಎಂದರೆ ತಮ್ಮನ ಅಗಲುವಿಕೆಯನ್ನು ಸಹಿಸಿಕೊಳ್ಳಲಾಗಲೇ ಇಲ್ಲ. ಅದಾದ ಎರಡೇ ತಿಂಗಳಲ್ಲಿ ಅಂದರೆ ಅದೇ ವರ್ಷ ೧೦೦೬ರ ಏಪ್ರಿಲ್ ೧೨ರಂದು ನಿಧನರಾದರು.



