ಡಾ.ರಾಜ್ (Dr.rajkumar) ಅವರ ಬಗ್ಗೆ ಕನ್ನಡದಲ್ಲಿ ಅದೆಷ್ಟೋ ಪುಸ್ತಕಗಳು ಹೊರಬಂದಿವೆ. ಪುನೀತ್ ರಾಜಕುಮಾರ್ (Puneeth rajkumar) ಅವರೇ ಒಂದು ಪುಸ್ತಕ ಹೊರತಂದಿದ್ದರು. ಎ.ಎನ್. ಪ್ರಹ್ಲಾದ್ ರಾವ್ ಹೊರತಂದಿರುವ ಪುಸ್ತಕ ಅಷ್ಟೇ ಅಲ್ಲದೆ, ನೂರಾರು ಕೃತಿಗಳು ರಾಜ್ ಅವರ ಬಗ್ಗೆಯೇ ಹೊರಬಂದಿವೆ. ಡಾ.ರಾಜ್ ಅವರು ಓದಿದ್ದು 2ನೇ ಕ್ಲಾಸು. ಆದರೆ ಅವರಿಗೆ ಗೌರವ ಡಾಕ್ಟರೇಟ್ ಬಂದಿದ್ದು ಒಂದು ಸಾಧನೆಯಾದರೆ, ಅವರ ಬಗ್ಗೆ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದವರಿದ್ದಾರೆ. ಡಾ.ರಾಜ್ ಅವರ ಬಗ್ಗೆ ಪ್ರಾಥಮಿಕ ಶಾಲೆಯಲ್ಲಿ ಪಠ್ಯವೂ ಇದೆ. ಇಂತಹ ಡಾ.ರಾಜ್ ಅವರ ಜೀವನ ಸಾಧನೆ ಬಗ್ಗೆ ಮಹಾಕಾವ್ಯವೊಂದು ಹೊರಬಂದಿದೆ. ಇದು ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲು.
ಡಾ.ರಾಜ್ ಅವರ ಬಗ್ಗೆ ಮಹಾಕಾವ್ಯ ರಚಿಸಿರುವುದು ಪೇರೂರ ಜಾರ (perura jara). ಮಹಾಕಾವ್ಯದ ಹೆಸರು ಕನ್ನಡದ ಕಣ್ಮಣಿ ಡಾ.ರಾಜಕುಮಾರ್ (kannadada kanmani Dr. Rajkumar). ಈ ಮಹಾಕಾವ್ಯ ಕೃತಿಯನ್ನು ಬಿಡುಗಡೆ ಮಾಡಿದವರು ಡಾ.ರಾಜ್ ಅವರ ಪುತ್ರಿ ಲಕ್ಷ್ಮಿ ಗೋವಿಂದರಾಜ್, ರಾಜ್ಯಸಭಾ ಸದಸ್ಯರೂ ಆಗಿರುವ ಡಾ.ಎಲ್.ಹನುಮಂತಯ್ಯ, ಸಾಹಿತಿ ಕೆ.ಷರೀಫ, ನಿರ್ಮಾಪಕ ಎಸ್.ಎ.ಗೋವಿಂದ ರಾಜ್. ಈ ಕಾರ್ಯಕ್ರಮ ನಡೆದಿದ್ದು ಬೆಂಗಳೂರಿನ ಶೇಷಾದ್ರಿಪುರದ ಹಸಿರು ತೋಟದಲ್ಲಿ .
ಇದು ಡಾ.ರಾಜ್ ಕುಮಾರ್ ಅವರಿಗೆ ಸಂದ ಅತಿ ದೊಡ್ಡ ಗೌರವ. ಜಗತ್ತಿನ ಯಾವುದೇ ನಟನ ಬಗ್ಗೆ ಕಾವ್ಯಗಳು ರಚನೆಯಾಗಿಲ್ಲ. ಡಾ.ರಾಜ್ ಅವರಿಗೆ ಅದೂ ಕೂಡಾ ಸಂದಾಯವಾಗಿದೆ ಎಂದವರು ಹನುಮಂತಯ್ಯ.
ನಟರ ಬಗ್ಗೆ ಸಿನಿಮಾಗಳಾಗಿವೆ. ನಾಟಕಗಳೂ ಆಗಿವೆ. ಡಾಕ್ಯುಮೆಂಟರಿಗಳಾಗಿವೆ. ಪುಸ್ತಕಗಳಾಗಿವೆ. ಆದರೆ ಒಬ್ಬ ನಟನ ಬಗ್ಗೆ ಮಹಾಕಾವ್ಯವೇ ರಚನೆಯಾಗಿರುವುದು ಇದೇ ಮೊದಲು. ಸಾಹಿತ್ಯ ಪ್ರಕಾರಗಳಲ್ಲೇ ಕಾವ್ಯ ಅತ್ಯಂತ ಸೂಕ್ಷ್ಮ. ಕೇವಲ ಛಂದಸ್ಸು, ವ್ಯಾಕರಣಗಳ ಕಾರಣಕ್ಕಷ್ಟೇ ಅಲ್ಲ, ಕಾವ್ಯಕ್ಕಿರುವ ಶಕ್ತಿಯೇ ವಿಶೇಷ. ವಾಕ್ಯಗಳಲ್ಲಿ 30 ಸಾಲುಗಳಲ್ಲಿ ಹೇಳಬಹುದಾದದ್ದನ್ನು ಕಾವ್ಯದಲ್ಲಿ 3 ಸಾಲುಗಳಲ್ಲಿ ಹೇಳಬಹುದು. ಅಂತಹ ಹೆಮ್ಮೆಯ ಕೆಲಸವನ್ನು ಮಾಡಿರುವ ಪೇರೂರ ಜಾರ ಅವರನ್ನು ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲ ಹಾಡಿ ಹೊಗಳಿದರು.



