ಕೆಸಿಎನ್ ಕುಟುಂಬ ಕನ್ನಡ ಚಿತ್ರರಂಗದ ಶಕ್ತಿಗಳಲ್ಲಿ ಒಂದಾಗಿತ್ತು. ಕೆಸಿಎನ್ ಗೌಡ (KCN GOWDA) ನಿರ್ಮಾಪಕರಾಗಿದ್ದು ಭಲೇ ಜೋಡಿ ಚಿತ್ರದಿಂದ. ಡಾ.ರಾಜ್ ಕುಮಾರ್ ಹೀರೋ. (Dr.Rajkumar) ಬಂಗಾರದ ಮನುಷ್ಯ, ಬಭ್ರುವಾಹನ, ಹುಲಿಯ ಹಾಲಿನ ಮೇವು, ಸನಾದಿ ಅಪ್ಪಣ್ಣ, ದೂರದ ಬೆಟ್ಟ, ಸತ್ಯ ಹರಿಶ್ಚಂದ್ರ.. ಹೀಗೆ ಡಾ.ರಾಜ್ ಅವರ ಕ್ಲಾಸಿಕ್ ಚಿತ್ರಗಳಲ್ಲಿ ಹೆಚ್ಚಿನ ಚಿತ್ರಗಳಿಗೆ ನಿರ್ಮಾಪಕರು ಕೆಸಿಎನ್ ಗೌಡ. ಕಸ್ತೂರಿ ನಿವಾಸ, ವೀರಕೇಸರಿ, ಸತ್ಯ ಹರಿಶ್ಚಂದ್ರ.. ಮೊದಲಾದ ಸಿನಿಮಗಳನ್ನು ಕಲರ್`ನಲ್ಲಿ ರಿಲೀಸ್ ಮಾಡಿಸಿದ್ದು ಕೂಡಾ ಕೆಸಿಎನ್ ಗೌಡರೇ. ಆದರೆ ಹೊಸ ಟೆಕ್ನಾಲಜಿಯ ಹಿಂದಿದ್ದವರು (KCN MOHAN)ಕೆಸಿಎನ್ ಮೋಹನ್.
65 ವಯಸ್ಸಿನ ಕೆಸಿಎನ್ ಮೋಹನ್ ನಿಧನರಾಗಿದ್ದಾರೆ. ಕೆಸಿಎನ್ ಮೋಹನ್ ತಂದೆಯಂತೆಯೇ ಚಿತ್ರರಂಗದಲ್ಲಿ ಪಳಗಿದ್ದವರು. ಆದರೆ ರೇಷ್ಮೆ ಸೇರಿದಂತೆ ಇತರೆ ಉದ್ಯಮಗಳ ಮೇಲೆ ಆಕರ್ಷಣೆ ಹೆಚ್ಚಿತ್ತು. ಪಾರ್ವತಮ್ಮ ರಾಜಕುಮಾರ್ ಮೊದಲಿಗೆ ಪೂರ್ಣಿಮಾ ಎಂಟರ್`ಪ್ರೈಸರ್ ಹಾಗೂ ವಜ್ರೇಶ್ವರಿ ಕಂಬೈನ್ಸ್ ಆರಂಭಿಸಿದಾಗ ಕೆಸಿಎನ್ ಮೋಹನ್ ಪಾರ್ವತಮ್ಮನವರ ಜೊತೆಯಲ್ಲೇ ಇದ್ದರು. ಪಾರ್ವತಮ್ಮ ಈ ಉದ್ಯಮಕ್ಕೆ ಹೊಸಬರು. ಅವರಿಗೆ ಸಹಾಯಕ್ಕಿರಲಿ ಎಂದು ಕೆಸಿಎನ್ ಗೌಡರು, ಪಾರ್ವತಮ್ಮನವರ ಜೊತೆಗಿರಲು ಹೇಳಿದ್ದರಂತೆ. ಡಾ.ರಾಜ್ ಕುಟುಂಬದ ಏಳಿಗೆಯಲ್ಲಿ ಕೆಸಿಎನ್ ಪಾಲೂ ಇದೆ.
ಡಾ.ರಾಜ್ ಸಿನಿಮಾ ಮಾಡಿ ಲಾಸ್ ಮಾಡಿಕೊಂಡ್ರು ಎಂದು ಜನರೆಲ್ಲ ಆಡಿಕೊಳ್ಳುತ್ತಿದ್ದಾಗ.. ಯಾರ್ರೀ ಹೇಳಿದ್ದು.. ಹಂಗಂತ ಎಂದು ಬಹಿರಂಗವಾಗಿ ಪ್ರಶ್ನಿಸಿದವರು ಕೆಸಿಎನ್ ಮೋಹನ್. ನಮ್ಮ ಕುಟುಂಬವೇನೂ ಸಂಕಷ್ಟದಲ್ಲಿ ಇಲ್ಲ. ನಮಗೆ ಸುಮಾರು 600 ಕೋಟಿ ಬೆಲೆ ಬಾಳುವ ಆಸ್ತಿ ಇದೆ ಎಂದು ಲೆಕ್ಕ ಮಾಧ್ಯಮಗಳಿಗೆ ಲೆಕ್ಕ ಕೊಟ್ಟಿದ್ದರು. ಊರ್ವಶಿ, ನವರಂಗ್, ಸಾಗರ್ (ಈಗಿಲ್ಲ), ಗೋವರ್ಧನ್, ಗೋಪಾಲ್, ಭಾರತಿ, ಸ್ವಾಗತ್, ಹರಿಲಕ್ಷ್ಮಿ, ದೊಡ್ಡಬಳ್ಳಾಪುರದ ರಾಜ್`ಕಮಲ್, ಚನ್ನಪಟ್ಟಣದ ಶಿವಾನಂದ.. ಹೀಗೆ ಹಲವು ಚಿತ್ರಮಂದಿರಗಳ ಮಾಲೀಕರಾಗಿದ್ದರು ಕೆಸಿಎನ್ ಮೋಹನ್. ಊರ್ವಶಿ, ನವರಂಗ್ ಮತ್ತು ರಾಜ್`ಕಮಲ್ ಚಿತ್ರಗಳು ಅವರ ಸ್ವಂತದ್ದಾಗಿದ್ದವು. 80ರ ದಶಕದಲ್ಲಿಯೇ ಹಾಲಿವುಡ್ ಚಿತ್ರಗಳನ್ನು ತಂದು ಸೆನ್ಸಾರ್ ಮಾಡಿಸಿ ರಿಲೀಸ್ ಮಾಡಿಸಿದ್ದ ಖ್ಯಾತಿಯೂ ಕೆಸಿಎನ್ ಮೋಹನ್ ಅವರದ್ದು. ಇಂತಹ ಕೆಸಿಎನ್ ಮೋಹನ್ ಅವರು 65ರ ವಯಸ್ಸಿನಲ್ಲೇ ಮೃತಪಟ್ಟಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕೆಸಿಎನ್ ಮೋಹನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೋಹನ್ ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆಯೂ ಮೋಹನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಹುಷಾರಾಗಿ ಮನೆಗೆ ಬಂದಿದ್ದವರಿಗೆ ಎರಡು ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮತ್ತೆ ಆಸ್ಪತ್ರೆ ಸೇರಿದ್ದ ಮೋಹನ್ ಅವರು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕೆಸಿಎನ್ ಕುಟುಂಬ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದ ಕುಟುಂಬ. ಕೆಸಿಎನ್ ಗೌಡರು ಮೊದಲಿಗೆ ಚಿತ್ರ ನಿರ್ಮಾಣ ಆರಂಭಿಸಿದರು. ಆನಂತರ ಅವರ ಮಕ್ಕಳಾದ ಕೆಸಿಎನ್ ಚಂದ್ರಶೇಖರ್ ಮತ್ತು ಕೆಸಿಎನ್ ಮೋಹನ್ ಅದನ್ನು ಮುಂದುವರೆಸಿದರು. ಕೆಸಿಎನ್ ಮೋಹನ್ ಭಲೇ ಚತುರ, ರಾಮರಾಜ್ಯದಲ್ಲಿ ರಾಕ್ಷಸರು, ಜಯಸಿಂಹ, ಧರ್ಮಯುದ್ಧ, ಅಂತಿಮ ತೀರ್ಪು ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ವಿತರಣೆಯನ್ನೂ ಮಾಡಿದರು. ರಾಜ್ಯದ ಹಲವು ಚಿತ್ರಮಂದಿರಗಳ ಮಾಲೀಕರಾಗಿದ್ದರೂ ಅವರು ನವರಂಗ್ ಥಿಯೇಟರ್ ಮಾಲೀಕರಾಗಿ ಪ್ರಸಿದ್ಧರಾಗಿದ್ದರು. ಕನ್ನಡದ ಕ್ಲಾಸಿಕ್ ಕಸ್ತೂರಿ ನಿವಾಸ ಸಿನಿಮಾಗೆ ಕಲರ್ ರೂಪ ಕೊಟ್ಟಿದ್ದರು.
ಕೆಸಿಎನ್ ಮೋಹನ್ ಅವರ ಪತ್ನಿ ಪೂರ್ಣಿಮಾ ಮೋಹನ್ ಅವರು ‘ಜೂಲಿ’ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಿದ್ದರು. ನಟಿ ರಮ್ಯಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಪೂರ್ಣಿಮಾ ಮೋಹನ್ ಅವರೇ ಈ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಪತ್ನಿಯ ಸಿನಿಮಾವನ್ನು ಕೆಸಿಎನ್ ಮೋಹನ್ ನಿರ್ಮಿಸಿದ್ದರು. 2017ರಲ್ಲಿ ಪತ್ನಿ ಪೂರ್ಣಿಮಾ ನಿಧನದ ನಂತರ ಒಂಟಿಯಾಗಿದ್ದರು.



