ಡಾ.ರಾಜ್ ಕುಮಾರ್ ನಟ ಸಾರ್ವಭೌಮ. ಆ ಬಿರುದನ್ನು ಪಡೆದಿರುವ ಮತ್ತೊಬ್ಬ ಕಲಾವಿದ ಇಲ್ಲ. ಅಣ್ಣಾವ್ರು ಕೇವಲ ನಟರಷ್ಟೇ ಅಲ್ಲ, ಗಾಯಕರೂ ಹೌದು. ಗಾನಗಂಧರ್ವ, ಗಾನಕೋಗಿಲೆ ಎಂದೆಲ್ಲ ಬಿರುದುಗಳಿಗೆ. ಹಾಡಿರುವುದೇನು ಕಡಿಮೆ ಗೀತೆಗಳಲ್ಲ.. ರಾಜ್ಕುಮಾರ್ ಕಂಠದಲ್ಲಿ ನೂರಾರು ಹಾಡುಗಳು ಮೂಡಿ ಬಂದಿವೆ. ‘ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು..’, ‘ಅರಿಷಿಣ ಕುಂಕುಮ..’ ಹಾಡಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ನಾದಮಯ ಹಾಡಿಗೆ ರಾಷ್ಟ್ರಪ್ರಶಸ್ತಿ ಗೌರವ ದೊರೆತಿಗೆ. ರಾಜ್ ಅವರಿಗೆ ಇರುವ ಬಿರುದುಗಳಲ್ಲಿ ʻಗಾನಗಂಧರ್ವʼ ಎಂಬ ಬಿರುದೂ ಇದೆ.ಇಷ್ಟೆಲ್ಲ ಸಾಧನೆ ಮಾಡಿರುವ ಅಣ್ಣಾವ್ರ ಧ್ವನಿ ಹಾರಿಬಲ್ ಅಂತೆ..
ಡಾ.ರಾಜ್ ಕುಮಾರ್ ಅವರನ್ನ ಗಾಯನ ಪ್ರತಿಭೆಯ ಬಗ್ಗೆ ಇಡೀ ದೇಶದ ಸಂಗೀತ ಕ್ಷೇತ್ರದ ದಿಗ್ಗಜರು ಎನ್ನಿಸಿಕೊಂಡವರೇ ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ಗಾಯಕ ಅಣ್ಣಾವ್ರ ಧ್ವನಿ ಹಾರಿಬಲ್ ಅಂತಾ ಟ್ವೀಟ್ ಮಾಡಿದ್ದಾನೆ. ಟ್ವೀಟ್ ಮಾಡಿ ತಲೆಮರೆಸಿಕೊಂಡಿದ್ದಾನೆ. ಅಭಿಮಾನಿಗಳು ಗರಂ ಆಗಿದ್ದಾರೆ.
ಟ್ವೀಟ್ ಮಾಡಿರುವ ವ್ಯಕ್ತಿಯ ಹೆಸರು ಸಂಜಯ್ ನಾಗ್. ಒಂದು ಟ್ವೀಟ್ ಮಾಡಿದ್ದೇ ತಡ.. ಅಭಿಮಾನಿಗಳು ಯಾವ ಪರಿ ಮುಗಿಬಿದ್ದರು ಎಂದರೆ.. ಸಂಜಯ್ ನಾಗ್ ಈಗ ಎಲ್ಲೂ ಕಾಣಿಸ್ತಿಲ್ಲ. ಟ್ವಿಟರ್ ಅಕೌಂಟ್ ಕೂಡಾ ಡಿಲೀಟ್ ಆಗಿದೆ. ಟ್ವಿಟರ್ ಖಾತೆಯನ್ನೇ ಅವರು ಡಿ-ಆ್ಯಕ್ಟಿವೇಟ್ ಮಾಡಿದ್ದಾರೆ. ಈ ಕಾರಣಕ್ಕೆ ಅನೇಕರು ಟೀಕೆ ಮಾಡಿದ್ದಾರೆ. ‘ಅಂಗಡಿ ಖಾಲಿ ಮಾಡಿದಾನೆ’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ‘ಎಲ್ಲಿ, ಎಕ್ಸ್ (ಟ್ವಿಟರ್) ಖಾತೆಯನ್ನು ಅಳಿಸಿ ಹೋಗಿದ್ದೀಯಾ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಇನ್ನೂ ಕೆಲವು ಅಭಿಮಾನಿಗಳು ತಾಳ್ಮೆಯಿಂದಲೇ ಉತ್ತರ ಕೊಟ್ಟಿದ್ದಾರೆ. ಡಾ.ರಾಜ್ ಅವರು ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಕಲಾವಿದ. ಇಳಯರಾಜ, ಜಿಕೆ ವೆಂಕಟೇಶ್ ಅವರಂತಹ ದಿಗ್ಗಜರು ಮೆಚ್ಚಿಕೊಂಡಿದ್ದ ಗಾಯಕ. ಇನ್ನು ಪಿಬಿ ಶ್ರೀನಿವಾಸ್ ಅವರೇ ಡಾ.ರಾಜ್ ಅವರ ಗಾಯನಕ್ಕೆ ತಲೆದೂಗುತ್ತಿದ್ದರು. ಇನ್ನೂ ಗೊತ್ತಿಲ್ಲವೆಂದರೆ ರಾಷ್ಟ್ರ ಕಂಡ ಮೇರುಗಾಯ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಸಂದರ್ಶನವನ್ನೊಮ್ಮೆ ಕೇಳಿ ನೋಡಿ. ಪಿ.ಸುಶೀಲಾ, ಎಸ್ ಜಾನಕಿ ಅವರಂತಹ ದೊಡ್ಡ ದೊಡ್ಡ ಗಾಯಕರು ರಾಜ್ ಗಾಯನದ ಬಗ್ಗೆ ಆಡಿರುವ ಮಾತುಗಳನ್ನು ಕೇಳಿಸಿಕೊಳ್ಳಿ. ಜೀವನ ಚೈತ್ರ ಚಿತ್ರದ ನಾದಮಯ.. ಹಾಗೂ ಕವಿರತ್ನ ಕಾಳಿದಾಸ ಚಿತ್ರದ ʻಮಾಣಿಕ್ಯವೀಣಾ.. ಹಾಡುಗಳನ್ನು ಕೇಳಿ… ರಾಜ್ ಕುಮಾರ್ ಅವರನ್ನೇಕೆ ಇಷ್ಟೊಂದು ದ್ವೇಷ ಮಾಡ್ತೀರಿ.. ಎಂದೆಲ್ಲ ಪ್ರಶ್ನೆ ಮಾಡಿದ್ದಾರೆ.
ಇನ್ನು ಡಾ.ರಾಜ್ ಅವರ ಕೆಲವು ಕ್ಲಿಷ್ಟಕರವಾದ ಹಾಡುಗಳ ಪಟ್ಟಿ ಇಲ್ಲಿದೆ.
ಆಕಸ್ಮಿಕ : ಅನುರಾಗದಾ ಭೋಗ.. (ಶುದ್ಧಸಾವೇರಿ ರಾಗ)
ಶ್ರಾವಣ ಬಂತು : “ಇದೇ ರಾಗದಲ್ಲಿ, ಇದೇ ತಾಳದಲ್ಲಿ” ಇದೂ ಕೂಡಾ (ಶುದ್ಧಸಾವೇರಿ ರಾಗ)
ಬಭ್ರುವಾಹನ : ಆರಾಧಿಸುವೆ ಮದನಾರಿ.. (ಖರಹರಪ್ರಿಯ ರಾಗ)
ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ (ಕೇದಾರಗೌಳ ರಾಗ)
ಬಭ್ರುವಾಹನ : ಈ ಸಮಯ ಶೃಂಗಾರಮಯ (ರಾಗಮಾಲಿಕೆ ಪ್ರಕಾರದಲ್ಲಿ ಇದೊದು ಹಾಡಿನಲ್ಲಿ ಕಲ್ಯಾಣಿ, ಬಹಾರ್ ಮತ್ತು ಬಾಗೇಶ್ರೀ ರಾಗಗಳಿವೆ)
ಕವಿರತ್ನ ಕಾಳಿದಾಸ : ಮಾಣಿಕ್ಯ ವೀಣಾ ಉಪಲಾಲಯಂತೀಂ ( ಇದೂ ಕೂಡಾ ರಾಗಮಾಲಿಕೆ. ಕಲ್ಯಾಣಿ, ಹಂಸಧ್ವನಿ, ಹಿಂದೋಳ ರಾಗಗಳ ಸಂಯೋಜನೆ ಇದೆ)
ಶ್ರೀನಿವಾಸ ಕಲ್ಯಾಣ : ’ನಾನೇ ಭಾಗ್ಯವತಿ’ (ಕಾನಡ)
ಚಲಿಸುವ ಮೋಡಗಳು ಚಿತ್ರದ ಜೇನಿನ ಹೊಳೆಯೋ (ಮೋಹನ ರಾಗ)
ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ (ಹಿಂದೋಳ ರಾಗ), ಹೊಸಬಾಳಿನ ಹೊಸಿಲಲಿ (ಕಲ್ಯಾಣಿ ರಾಗ)
ಹೊಸಬೆಳಕು ಚಿತ್ರದಿಂದ ಚೆಲುವೆಯೇ ನಿನ್ನ ನೋಡಲು (ಅಭೇರಿ/ಭೀಮ್‍ಪಲಾಸ್ ರಾಗ), ಕಣ್ಣೀರ ಧಾರೆ ಇದೇಕೆ (ಶುಭ ಪಂತುವರಾಳಿ/ಲಲಿತ್ ರಾಗ)
ಜ್ವಾಲಾಮುಖಿ ಚಿತ್ರದ ಹೇಳುವುದು ಒಂದು ಮಾಡುವುದು ಇನ್ನೊಂದು (ಚಕ್ರವಾಕ/ಅಹಿರ್ ಭೈರವ್ ರಾಗ)
ಶ್ರುತಿ ಸೇರಿದಾಗ ಚಿತ್ರದಿಂದ ಬೊಂಬೆಯಾಟವಯ್ಯಾ (ಚಾರುಕೇಶಿ), ಶ್ರುತಿಸೇರಿದೇ ಹಿತವಾಗಿದೆ (ಬೇಹಾಗ್), ಅನುರಾಗ ಅರಳಿತು ಚಿತ್ರದ ಶೀಕಂಠಾ ವಿಷಕಂಠ (ಸಿಂಹೇಂದ್ರ ಮಧ್ಯಮ), ಕವಿರತ್ನ ಕಾಳಿದಾಸದ ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡಿದೆ (ಬೃಂದಾವನ ಸಾರಂಗ),ಧ್ರುವತಾರೆ ಚಿತ್ರದ ಆ ರತಿಯೇ ಧರೆಗಿಳಿದಂತೆ (ಶಿವರಂಜನಿ),ಜೀವನ ಚೈತ್ರದ ಲಕ್ಷ್ಮೀ ಬಾರಮ್ಮ (ಮೋಹನ ಕಲ್ಯಾಣಿ) , ತಾಯಿಗೆ ತಕ್ಕ ಮಗದ ವಿಶ್ವನಾಥನು ತಂದೆಯಾದರೆ (ಹಿಂದೂಸ್ಗ್ತಾನಿ ಕಾಪಿ)..
ಹಾಡುಗಳಿಗೆ ನಿಮಗೆ ಗೊತ್ತಿರುವ ರಾಗ ಮಾಲಿಕೆಯ ಹಾಡುಗಳನ್ನೂ ಸೇರಿಸಿ.



