ಡಾ.ರಾಜ್ ಕುಮಾರ್ ಅಕಾಡೆಮಿ. ಬೆಂಗಳೂರಿನಲ್ಲಿರುವ ಈ ಅಕಾಡೆಮಿ ಮೂಲಕ ಪ್ರತಿ ವರ್ಷ ನೂರಾರು ಬಡ ಐಎಎಸ್, ಐಪಿಎಸ್ ಆಕಾಂಕ್ಷಿಗಳು ಉಚಿತವಾಗಿ ತರಬೇತಿ ಪಡೆಯುತ್ತಾರೆ. ವಿಜಯನಗರ, ಪ್ರಕಾಶ್ ನಗರ.. ಹೀಗೆ ಮೂರ್ನಾಲ್ಕು ಕಡೆ ಪುಟ್ಟ ಪುಟ್ಟದಾಗಿಯೇ ಈ ಸಂಸ್ಥೆ ಸೇವೆ ನಡೆಸುತ್ತಲೇ ಬಂದಿದೆ. ಅದು ಇವತ್ತಿನಿಂದ ಶುರುವಾಗಿರುವ ಸಂಸ್ಥೆ ಏನಲ್ಲ. ಇದರ ಬಗ್ಗೆ ಕನಸು ಕಂಡಿದ್ದು ರಾಘವೇಂದ್ರ ರಾಜ್ ಕುಮಾರ್. ಈಗ ಅದನ್ನು ವಿನಯ್ ಹಾಗೂ ಯುವ ರಾಜ್ ಕುಮಾರ್ ನೋಡಿಕೊಂಡು ಹೋಗ್ತಿದ್ದಾರೆ. ಈಗಾಗಲೇ ಇಲ್ಲಿ ತರಬೇತಿ ಪಡೆದ ಸುಮಾರು 20ಕ್ಕೂ ಹೆಚ್ಚು ಜನ ಐಎಎಸ್, ಐಪಿಎಸ್ ಆಗಿದ್ದಾರೆ. ಕೆಎಎಸ್ ಕೂಡಾ ಆಗಿದ್ದಾರೆ. ಇತ್ತೀಚೆಗೆ ಹಾಗೆ ಸಾಧನೆ ಮಾಡಿದ, ಅಕಾಡೆಮಿಯಲ್ಲಿ ತರಬೇತಿ ಪಡೆದು ಎಕ್ಸಾಂ ಪಾಸ್ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಆ ಕಾರ್ಯಕ್ರಮದಲ್ಲಿ ಹಲವರು ಜೊತೆ ಎಸಿಪಿ ಚಂದನ್ ಅವರನ್ನೂ ಸನ್ಮಾನಿಸಲಾಯ್ತು.
ಇನ್ನು ACP ಚಂದನ್ ಅವರನ್ನು ನಟ ದರ್ಶನ್ ಜೀವನದಲ್ಲಿ ಮರೆಯುವಂತೆಯೇ ಇಲ್ಲ. ದರ್ಶನ್ ಅವರನ್ನು ಮೈಸೂರಿಂದ ಎಳೆದು ತಂದವರೇ ಎಸಿಪಿ ಚಂದನ್. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಕಾರಣಕ್ಕೆ, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಎತ್ತಾಕ್ಕೊಂಡ್ ಬಂದು ಕೊಲೆ ಮಾಡಿದ್ದ ಆರೋಪ ದರ್ಶನ್ & ಗ್ಯಾಂಗ್ ಮೇಲಿದೆ. ರೇಣುಕಾಸ್ವಾಮಿಯನ್ನು ಅನಾಥ ಶವ ಎಂಬಂತೆ ಬಿಂಬಿಸಲು ಯತ್ನಿಸಿದ್ದವರು, ಆನಂತರ ಸ್ವತಃ ತಾವಾಗಿಯೇ ಸ್ಟೇಷನ್ನಿಗೆ ಬಂದು ಶರಣಾಗಿದ್ದರು. ಅನುಮಾನ ಬಂದು ʻಪೊಲೀಸ್ ಭಾಷೆʼಯಲ್ಲಿ ವಿಚಾರಿಸಿದ್ದಾಗ ದರ್ಶನ್, ಪವಿತ್ರಾ ಗೌಡ ಹೆಸರು.. ಕಂಪ್ಲೀಟ್ ಕಥೆ ಗೊತ್ತಾಗಿತ್ತು. ಆಗ ದರ್ಶನ್ ಅವರನ್ನು ಅರೆಸ್ಟ್ ಮಾಡಿ ಕರೆತಂದವರೇ ACP ಚಂದನ್. ಇಲ್ಲಿ ಒಂದು ವಿಷಯ ಹೇಳಬೇಕು, ಕ್ರೈಂ ಮಾಡಿದವರು ಯಾರೇ ಇರಲಿ, ಅವರನ್ನು ಅರೆಸ್ಟ್ ಮಾಡಿ, ಕೋರ್ಟ್ ಕಟಕಟೆಗೆ ನಿಲ್ಲಿಸುವುದೇ ಚಂದನ್ ಅವರ ವೃತ್ತಿ. ಹಾಗೂ ಅದೇ ವೃತ್ತಿ ಧರ್ಮ.
ಈಗ ಅವರಿಗೆ ಡಾ.ರಾಜ್ ಕುಮಾರ್ ಅವರ ಹೆಸರಿನ ಟ್ರಸ್ಟ್ ಸನ್ಮಾನ ಮಾಡಿರುವುದು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ದರ್ಶನ್ ಅವರನ್ನು ಅರೆಸ್ಟ್ ಮಾಡಿದ ಅಧಿಕಾರಿಯನ್ನು ಸನ್ಮಾನ ಮಾಡಿರುವುದೇ ಇದಕ್ಕೆ ಸಾಕ್ಷಿ. ದೊಡ್ಮನೆಯವರೇ ದರ್ಶನ್ ಅವರನ್ನು ಒಳಗೆ ಹಾಕಿಸಿದರು ಎಂದೆಲ್ಲ ಕಥೆ ಕಟ್ಟಲಾಗುತ್ತಿದೆ. ಆದರೆ.. ವಾಸ್ತವ ವಿಷಯ ಏನೆಂದರೆ.. ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಲ್ಲಿ ಐಎಎಸ್, ಕೆಎಎಸ್ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದ್ದಾರಲ್ಲ.. ಅಂತಹವರಿಗೆ ಗೈಡ್ ಮಾಡುತ್ತಿರುವವರಲ್ಲಿ ಚಂದನ್ ಕೂಡಾ ಒಬ್ಬರು. ಹೀಗಾಗಿ ಡಾ.ರಾಜ್ ಅಕಾಡೆಮಿಯಲ್ಲಿ ತರಬೇತಿ ಪಡೆದು, ಐಎಎಸ್ ಪಾಸ್ ಆದವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಚಂದನ್ ಕೂಡಾ ಅತಿಥಿಯಾಗಿದ್ದರು. ACP ಚಂದನ್ ಅವರು ಡಾ.ರಾಜ್ ಅಕಾಡೆಮಿ ಇರುವ ಪ್ರದೇಶದ ಅಧಿಕಾರ ವ್ಯಾಪ್ತಿಯಲ್ಲಿಯೇ ಕೆಲಸ ಮಾಡುವವರು. ಜೊತೆಗೆ ಬಿಡುವಿದ್ದಾಗ ಬಂದು, ಅಕಾಡೆಮಿಯಲ್ಲಿ ಪಾಠ ಮಾಡುತ್ತಾರೆ. ಸಂಭಾವನೆ ಅಥವಾ ಗೌರವ ಧನವನ್ನೂ ಪಡೆಯುವುದಿಲ್ಲ. ಮಾರ್ಗದರ್ಶನ ಮಾಡುತ್ತಾರೆ. ಅಲ್ಲದೆ ತಮ್ಮ ಐಪಿಎಸ್, ಐಎಎಸ್, ಕೆಎಎಸ್ ಗೆಳೆಯರನ್ನು ಕೂಡಾ ಡಾ.ರಾಜ್ ಅಕಾಡೆಮಿಗೆ ಕರೆಸಿ, ಮಾರ್ಗದರ್ಶನ ಕೊಡಿಸುತ್ತಾರೆ. ಡಾ.ರಾಜ್ ಅಕಾಡೆಮಿಯ ಗೆಲುವಿನಲ್ಲಿ ಚಂದನ್ ಅಂತಹವರ ಕೊಡುಗೆ ಬಹಳಷ್ಟಿದೆ. ಎಲ್ಲರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಗಿದೆ.
ಹೀಗಾಗಿ ಸಂಸ್ಥೆಯ ಜೊತೆಯಲ್ಲಿ ನಿಂತಿರುವವರನ್ನ ಆತ್ಮೀಯವಾಗಿ ಕರೆದು ಸನ್ಮಾನ ಮಾಡಲಾಗಿದೆಯೇ ಹೊರತು, ಬೇರೇನಲ್ಲ.



