ಧರ್ಮಬೀರು ನಾಡಪ್ರಭು ಕೆಂಪೇಗೌಡ V/S ನಾಡಪ್ರಭು ಕೆಂಪೇಗೌಡ. ಈ ಎರಡು ಸಿನಿಮಾಗಳ ಸಮರದಲ್ಲಿ ಕೆಂಪೇಗೌಡರ ಚರಿತ್ರೆ ಕನ್ನಡಿಗರ ಕಣ್ತುಂಬಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಬೆಂಗಳೂರು ನಾಡಪ್ರಭು ಕೆಂಪೇಗೌಡರ ಇತಿಹಾಸ ಕುರಿತು ಎರಡು ಸಿನಿಮಾಗಳು ಸದ್ದು ಮಾಡ್ತಿವೆ. ಆದರೆ.. ಎರಡೂ ಸಿನಿಮಾಗಳು ಸದ್ಯಕ್ಕೆ ಶೂಟಿಂಗ್ ಕೂಡಾ ಆಗಲ್ಲ. ರಿಲೀಸ್ ಆಗುವುದು ಡೌಟ್.
ಕೆಂಪೇಗೌಡರ ಬಗ್ಗೆ ಸಿನಿಮಾ ಮಾಡ್ತಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಹಿರಂಗವಾಗಿ ಘೋಷಿಸಿದವರು ಕಿರಣ್ ತೋಟಂಬೈಲ್. ʻಧರ್ಮಬೀರು ನಾಡಪ್ರಭು ಕೆಂಪೇಗೌಡʼ ಈ ಸಿನಿಮಾ ಟೈಟಲ್ ಘೋಷಣೆಯಾಗುತ್ತಿದ್ದಂತೆಯೇ ಅಲರ್ಟ್ ಆದ ನಿರ್ದೇಶಕ ಟಿ.ಎಸ್.ನಾಗಾಭರಣ, ಚಿತ್ರದ ಕಾಪಿರೈಟ್ಸ್ ತಮ್ಮ ಬಳಿ ಇದೆ ಎಂದು ಹೇಳಿ ತಡೆ ತಂದರು. ಈಗ ನಾಗಾಭರಣ ʻನಾಡಪ್ರಭು ಕೆಂಪೇಗೌಡʼ ಸಿನಿಮಾ ಘೋಷಿಸಿದ್ದಾರೆ. ಈಗ ʻಧರ್ಮಬೀರು ನಾಡಪ್ರಭು ಕೆಂಪೇಗೌಡʼ ಚಿತ್ರದ ನಿರ್ಮಾಪಕ ಕಿರಣ್ ತೋಟಂಬೈಲು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಕಿರಣ್ ತೋಟಂಬೈಲು ʻಧರ್ಮಬೀರು ನಾಡಪ್ರಭು ಕೆಂಪೇಗೌಡʼ ಸಿನಿಮಾ ಘೋಷಣೆ ಮಾಡಿದ್ದರು. ಆ ಚಿತ್ರಕ್ಕೆ ದಿನೇಶ್ ಬಾಬು (ಸುಪ್ರಭಾತ, ಅಮೃತವರ್ಷಿಣಿ ಖ್ಯಾತಿ) ನಿರ್ದೇಶಕರು. ಘೋಷಣೆಯಾಗುತ್ತಿದ್ದಂತೆಯೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಸಿನಿಮಾಕ್ಕೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದರು ಟಿ.ಎಸ್.ನಾಗಾಭರಣ.
ಕೋರ್ಟ್ ನೀಡಿದ್ದ ಮಧ್ಯಂತರ ಆದೇಶದ ಅನುಸಾರ ಕಿರಣ್ ತೋಟಂಬೈಲ್, ಚೇತನ್ ರಾಜ್, ಧರ್ಮೇಂದ್ರ ಕುಮಾರ್ ಅರೇಹಳ್ಳಿ ಮತ್ತು ದಿನೇಶ್ ಬಾಬು, ಅವರ ಉದ್ಯೋಗಿಗಳು, ಏಜೆಂಟರು, ಪಾಲುದಾರರು, ಸಹವರ್ತಿ, ಅಧಿಕಾರಿ, ಪ್ರತಿನಿಧಿ ಮತ್ತು ಅವರ ಪರವಾಗಿ ವರ್ತಿಸುವ ಇತರ ಎಲ್ಲ ವ್ಯಕ್ತಿಗಳ ವಿರುದ್ಧ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಶೀರ್ಷಿಕೆಯ ಚಲನಚಿತ್ರವನ್ನು ಅಥವಾ ಆ ವಿಷಯವನ್ನು ಹೊಂದಿರುವ ಯಾವುದೇ ಚಲನಚಿತ್ರವನ್ನು ನಿರ್ಮಾಣ, ಪ್ರಸಾರ, ಸಾರ್ವಜನಿಕರಿಗೆ ಸಂವಹನ, ಪುನರುತ್ಪಾದನೆ, ಧ್ವನಿಮುದ್ರಣ, ವಿತರಣೆ, ಪ್ರಸಾರ, ಜಾಹೀರಾತು, ನಿರ್ದೇಶನ ಅಥವಾ ಇತರ ಯಾವುದೇ ರೀತಿಯಲ್ಲಿ ಪ್ರಕಟಿಸುವುದಕ್ಕೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿತ್ತು ನ್ಯಾಯಾಲಯ. ಹೀಗಾಗಿ ಜೂನ್ ೨೭ಕ್ಕೆ ನಿಗದಿಯಾಗಿದ್ದ ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರದ ಮುಹೂರ್ತ ಮುಂದಕ್ಕೆ ಹೋಗಿತ್ತು.
ಇದೀಗ ನಾಗಾಭರಣ ಸಿನಿಮಾ ಘೋಷಿಸಿ, ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿರುವ ಕಿರಣ್ ತೋಟಂಬೈಲ್ ನಾಗಾಭರಣ ವಿರುದ್ಧ ಉಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಗಾಭರಣ ಅವರ ವಿರುದ್ಧ ೪೨೦/ಚೀಟಿಂಗ್ ಹಾಗೂ ನ್ಯಾಯಾಂಗ ನಿಂದನೆ ದೂರು ದಾಖಲಿಸಿದ್ದಾರೆ.
ನಾಗಾಭರಣ ಅವರು ಕಾಪಿರೈಟ್ ಆಕ್ಟ್ ಅಡಿಯಲ್ಲಿ ಯಾವುದೇ ಹಕ್ಕುಸ್ವಾಮ್ಯದ ಅಧಿಕಾರ ಪಡೆದುಕೊಂಡಿಲ್ಲ. ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇದು ಮೋಸ ಹಾಗೂ ವಂಚನೆ. ನಮ್ಮ ಸಿನಿಮಾ ಘೋಷಣೆಯಾದ ಮೇಲೆ ಫಿಲ್ಮ್ ಚೇಂಬರ್ʻನಲ್ಲಿ ಪ್ರತಿಭಾ ನಂದಕುಮಾರ್ ಹೆಸರಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ ಎಂದು ದೂರು ಕೊಟ್ಟಿದ್ದಾರೆ.
ನಾಡಪ್ರಭು ಕೆಂಪೇಗೌಡ, ಐತಿಹಾಸಿಕ ಪುರುಷ. ಇತಿಹಾಸದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಎಷ್ಟು ಸಿನಿಮಾ ಬಂದರೂ, ಪ್ರತಿಯೊಬ್ಬರ ನಿರೂಪಣೆ, ಪ್ರಸ್ತುತಿ ವಿಭಿನ್ನವಾಗಿರುತ್ತವೆ. ಈ ಹಿಂದೆ ಭಗತ್ ಸಿಂಗ್ ಕುರಿತಂತೆ ಒಮ್ಮೆಗೇ ಐದು ಸಿನಿಮಾ ರಿಲೀಸ್ ಆದ ಉದಾಹರಣೆ ಇದೆ ಮಹಾತ್ಮ ಗಾಂಧೀಜಿ ಕುರಿತಂತೆ ಅದೆಷ್ಟು ಚಿತ್ರಗಳು ಬಂದಿವೆಯೋ.. ಲೆಕ್ಕ ಇಟ್ಟವರಿಲ್ಲ. ಸುಭಾಷ್ ಚಂದ್ರ ಭೋಸ್, ಅಂಬೇಡ್ಕರ್ ಕುರಿತ ಸಿನಿಮಾಗಳೂ ಬಂದಿದೆ. ಇನ್ನು ಕನ್ನಡದಲ್ಲಿ ಬಸವಣ್ಣ (ಅಶೋಕ್/ಹೊನ್ನಪ್ಪ ಭಾಗವತರ), ಸಂಗೊಳ್ಳಿ ರಾಯಣ್ಣ (ದರ್ಶನ್/ವಿಎಸ್ ಪಾಟೀಲ್), ಕವಿರತ್ನ ಕಾಳಿದಾಸ (ಡಾ.ರಾಜ್/ಹೊನ್ನಪ್ಪ ಭಾಗವತರ್), ತೆನಾಲಿ ರಾಮಕೃಷ್ಣ (ಕನ್ನಡದಲ್ಲಿ ಅನಂತನಾಗ್), ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ (ಡಾ.ರಾಜ್/ಶ್ರೀನಾಥ್), ಸಾಯಿಬಾಬಾ (ಸಾಯಿಪ್ರಕಾಶ್/).. ಹೀಗೆ ಹಲವು ಸಿನಿಮಾಗಳು ಬಂದಿವೆ. ವಿವಾದ ಏಕೆ..
ಹಾಗೆ ನೋಡಿದರೆ ಕಿರಣ್ ತೋಟಂಬೈಲ್ ಅವರು ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡುವ ಕನಸು ಹೊತ್ತಿದ್ದಾರೆ. ಇಂಗ್ಲಿಷಿನಲ್ಲಿ ಸಿನಿಮಾ ಮಾಡುವ ಮೂಲಕ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕನಸಿನಲ್ಲಿದ್ದಾರೆ. ಒಬ್ಬ ಐತಿಹಾಸಿಕ ಹೆಮ್ಮೆಯ ಸಾಧಕನ ಬಗ್ಗೆ ಎರಡು ಸಿನಿಮಾ ಬಂದರೆ.. ಬರಲಿ ಬಿಡಿ ಎಂದು ಹೇಳಬೇಕಲ್ಲವೇ..
ʻನಾಡಪ್ರಭು ಕೆಂಪೇಗೌಡ’ ಹೆಸರಿನ ಟಿ ಎಸ್ ನಾಗಾಭರಣ ಸಿನಿಮಾಗೆ ಡಾಲಿ ಧನಂಜಯ ಹೀರೋ. ಇದೀಗ ಅಧಿಕೃತ. ಈ ಐತಿಹಾಸಿಕ ಸಿನಿಮಾಕ್ಕೆ ‘ಬೆಂಗಳೂರು ಕಾರಣಿಕ’ ಎಂಬ ಟ್ಯಾಗ್ ಲೈನ್ ಕೂಡ ಇಟ್ಟಿದ್ದಾರೆ ನಾಗಾಭರಣ. ಸಿನಿಮಾದಲ್ಲಿ ಕೆಂಪೇಗೌಡರ ಯೋಧನ ಬದುಕಿನಿಂದ ಬೆಂಗಳೂರು ಕಟ್ಟಿದವರೆಗಿನ ಕಥೆ ಹೇಳಲಾಗುತ್ತದಂತೆ. ಧನಂಜಯ್ ಅವರ ಕೆಂಪೇಗೌಡ ಪಾತ್ರದ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೂ ಉತ್ತರ ಸಿಕ್ಕಿದೆ.
ʻನಾಡಪ್ರಭು ಕೆಂಪೇಗೌಡ’ ಚಿತ್ರವನ್ನು ಡಾ ಎಂ ಎನ್ ಶಿವರುದ್ರಪ್ಪ ಮತ್ತು ಶುಭಂ ಗುಂಡಲ ನಿರ್ಮಾಪಕರು. ಈಶ್ವರ ಎಂಟರ್‌ಟೇನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ.ಡಾಲಿ ಪಿಕ್ಚರ್ಸ್ ಅರ್ಪಿಸುತ್ತಿರುವ ಸಿನಿಮಾಕ್ಕೆ, ವಾಸುಕಿ ವೈಭವ್ ಸಂಗೀತ ಇದೆ. ಪನ್ನಗ ಭರಣ ಕಾರ್ಯಕಾರಿ ನಿರ್ಮಾಪಕ ಮತ್ತು ಸಹ ನಿರ್ದೇಶಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಐತಿಹಾಸಿಕ ಸಿನಿಮಾದಲ್ಲಿ ಕಲಾ ನಿರ್ದೇಶನ ಹಾಗೂ ವಸ್ತ್ರ ವಿನ್ಯಾಸ ಬಹಳ ಮುಖ್ಯ. ಇದರ ಹೊತೆ ಕ್ರಮವಾಗಿ ಶಶಿಧರ ಅಡಪ ಹಾಗೂ ನಾಗಿಣಿ ಭರಣ ಅವರದ್ದು.
ಈ ಹಿಂದೆ ಟಿ ಎಸ್ ನಾಗಾಭರಣ ನಿರ್ದೇಶನ ಮಾಡಿದ್ದ ʻಅಲ್ಲಮ’ ಸಿನಿಮಾದಲ್ಲಿ ʻಡಾಲಿ’ ಧನಂಜಯ್ ನಟಿಸಿದ್ದರು. ಹಡಗಲಿ ಬೇಡರ ಕಥೆಯನ್ನೂ ಒಪ್ಪಿಕೊಂಡಿರುವ ಡಾಲಿ ಧನಂಜಯ, ಬೆನ್ನು ಬೆನ್ನಿಗೆ ಐತಿಹಾಸಿಕ ಸಿನಿಮಾಗಳ ಹೀರೋ ಆಗಿದ್ದಾರೆ. ಹಡಗಲಿ ಕೂಡಾ ಶೀಘ್ರದಲ್ಲೇ ಸೆಟ್ಟೇರಲಿದೆ.
ಎಲ್ಲವೂ ಓಕೆ. ಆದರೆ ಕೆಂಪೇಗೌಡ ಚಿತ್ರಕ್ಕೆ ಇಷ್ಟೊಂದು ವಿಘ್ನ ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ.



