ದುನಿಯಾ ವಿಜಯ್ ಅವರಿಗೆ ಈಗ ಡಬಲ್ ಧಮಾಕಾ. ಅವರಿಗೆ ಈಗ ಒಂದೇ ದಿನ ಎರಡು ಲಾಟರಿ. ಮೊದಲನೇ ಲಾಟರಿ ಮಗಳು ಹೀರೋಯಿನ್. 2ನೇ ಲಾಟರಿ ಅವರ ಲ್ಯಾಂಡ್ ಲಾರ್ಡ್ ಟೀಸರ್ ರಿಲೀಸ್ ಮತ್ತು ಸಿನಿಮಾ ರಿಲೀಸ್ ಡೇಟ್ ಘೋಷಣೆ. ಅಂದಹಾಗೆ ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ವಿಲನ್ ಅಂತೆ. ರಾಜ್ ಅವರಿಗೆ ತಲೆ ತುಂಬಾ ಕೂದಲಿದೆ ಎನ್ನುವುದೇ ಸ್ಪೆಷಲ್.
ದುನಿಯಾ ವಿಜಯ್ ಅವರ ಹೊಸ ಸಿನಿಮಾ ಲ್ಯಾಂಡ್ ಲಾರ್ಡ್. ಲ್ಯಾಂಡ್ ಲಾರ್ಡ್ ನಿರ್ದೇಶಕ ಜಡೇಶ್ ಕೆ ಹಂಪಿ ಅವರ ಸಿನಿಮಾ. ವಿಶೇಷ ಎಂದರೆ ಈ ಚಿತ್ರದ ವಿಲನ್ ರಾಜ್ ಬಿ ಶೆಟ್ಟಿ. ಚಿತ್ರದ ಸರ್ವೈವರ್ ಆಗಿ ಆಬ್ಬರಿಸ್ತಾ ಇರೋ ಚಿತ್ರದ ಟೀಸರ್ ರಿಲೀಸ್ ಆಗಿದೆ. ರಾಜ್ ಬಿ ಶೆಟ್ಟಿ ಅವರಿಗೆ ಈ ಚಿತ್ರದಲ್ಲಿ ತಲೆ ತುಂಬಾ ಕೂದಲು ಕೊಟ್ಟಿದ್ದಾರೆ ಜಡೇಶ್ ಕೆ ಹಂಪಿ.
70 ಹಾಗೂ 80ರ ದಶಕದಲ್ಲಿ ಜಮೀನ್ದಾರರು ಹೇಗೆ ಕೆಳ ವರ್ಗದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು ಎಂಬುದನ್ನು ತಿಳಿಸುವ ರೂಲರ್ ಪಾತ್ರ ಮಾಡಿದ್ದಾರೆ ರಾಜ್ ಬಿ ಶೆಟ್ಟಿ. ಈ ಸಿನಿಮಾವನ್ನು ಒಪ್ಪಿಕೊಳ್ಳೋಕೆ ಕಾರಣ ಜಡೇಶ್ ಎಂದ ರಾಜ್, ತಮ್ಮ ಪಾತ್ರ, ಪಾತ್ರಕ್ಕೆ ಕೊಟ್ಟಿರುವ ವಿಗ್ ಕಥೆಯನ್ನೂ ಹೇಳಿಕೊಂಡರು. ವೇದಿಕೆಯಲ್ಲಿ ಮಾತನಾಡಿದ ವಿಜಯ್ ʻʻ 20 ವರ್ಷದ ಮುಂಚೆ ನನ್ನ ಬಣ್ಣ ನೋಡಿ ಆಡಿಕೊಂಡು ನಕ್ಕವರೇ, ರಾಜ್ ಅವರ ಬೊಕ್ಕತಲೆಯನ್ನೂ ಆಡಿಕೊಂಡರುʼʼ ಎಂದು ನೆನಪಿಸಿಒಕೊಂಡು, ಆಡಿಕೊಂಡವರಿಗೆಲ್ಲ ಧನ್ಯವಾದ ಅರ್ಪಿಸಿದ್ರು.
ದುನಿಯಾ ವಿಜಯ್ ಎದುರು ರಚಿತಾ ರಾಮ್ ನಾಯಕಿ. ಉಮಾಶ್ರೀ, ಶಿಶಿರ್, ರಾಕೇಶ್ ಅಡಿಗ, ಅಚ್ಯುತ್ ಕುಮಾರ್, ಮಿತ್ರ, ಅಭಿಷೇಕ್ ದಾಸ್.. ಹೀಗೆ ಕೆಲವು ರಂಗಭೂಮಿ ನಟರೂ ಚಿತ್ರದಲ್ಲಿದ್ದಾರೆ. ಕೆ. ವಿ. ಸತ್ಯಪ್ರಕಾಶ್, ಹೇಮಂತ್ ಗೌಡ ಚಿತ್ರದ ನಿರ್ಮಾಪಕರು. ಅದ್ದೂರಿಯಾಗಿಯೇ ಸಿನಿಮಾ ರೆಡಿ ಮಾಡಿದ್ದಾರೆ. ವಿಜಯ್ ಪುತ್ರ ರಿತನ್ಯ ಕೂಡಾ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಮತ್ತೊಂದು ಸಿನಿಮಾದ ಮೂಲಕ ಅದೇ ರಿತನ್ಯ ನಾಯಕಿಯೂ ಆಗಿದ್ದಾರೆ. ರಿತನ್ಯ ʻಜವರʼ ಚಿತ್ರಕ್ಕೆ ನಾಯಕಿ. ʻಯಲಾ ಕುನ್ನಿʼ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ದಳವಾಯ್ ನಿರ್ದೇಶಕ. ಚಿದಾವೃಷಭ ನಿರ್ಮಾಪಕ. ಜವರ ಚಿತ್ರಕ್ಕೆ ʻಆಪರೇಷ್ ಅಲಮೇಲಮ್ಮʼ ಖ್ಯಾತಿಯ ರಿಷಿ ನಾಯಕ.
ದುನಿಯಾ ವಿಜಯ್, ಸಲಗ ವಿಜಯ್ ಆಗಿಯೂ ಗೆದ್ದಿದ್ದಾರೆ. ನಟರಾಗಿ, ನಿರ್ಮಾಪಕರಾಗಿ ಗೆದ್ದಿದ್ದ ವಿಜಯ್, ನಿರ್ದೇಶಕರಾಗಿಯೂ ಗೆದ್ದಾಗಿದೆ. ಈಗ ವಿಜಯ್ ಅವರನ್ನು ಅವರ ಮಕ್ಕಳು ಗೆಲ್ಲಿಸಬೇಕು. ತಂದೆಯಾಗಿ ಗೆಲ್ಲುವ ಹಾದಿಯಲ್ಲಿ ಮುಂದಡಿ ಇಟ್ಟಿರುವ ವಿಜಯ್, ತಮ್ಮ ಹಿರಿಯ ಮಗಳನ್ನೂ ಚಿತ್ರರಂಗಕ್ಕೆ ನಾಯಕಿಯಾಗಿ ತರುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ಅವರ ಮುಂಬರುವ ಚಿತ್ರ ʻಸಿಟಿ ಲೈಟ್ಸ್ʼ ಸಿನಿಮಾದಲ್ಲಿ ಮೋನಿಷಾ ನಾಯಕಿಯಾಗಿ ನಟಿಸುತ್ತಿದ್ಧಾರೆ. ಸಿಟಿ ಲೈಟ್ಸ್ʻಗೆ ವಿಜಯ್ ಅವರದ್ದೇ ನಿರ್ದೇಶನ ಇದೆ.
ರಿತನ್ಯ ಅವರಿಗೆ ಮೆಡಿಕಲ್ ವಿದ್ಯಾರ್ಥಿನಿಯ ಪಾತ್ರ ಇದೆಯಂತೆ. ಪಾತ್ರದ ಹೆಸರು ಭೂಮಿ. ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸುತ್ತಿದ್ದೇನೆ. ತುಂಬಾ ಖುಷಿ ಇದೆ, ಹೆಮ್ಮೆ ಇದೆ ಅಂತಾರೆ ರಿತನ್ಯ. ಚಿತ್ರದಲ್ಲಿ ನಟಿಸುತ್ತಿರುವ ಸೀನಿಯರ್ ಕಲಾವಿದರೆಂದರೆ ರಂಗಾಯಣ ರಘು, ಶೃತಿ. ಇನ್ನು ರಿಷಿಯ ಪಾತ್ರದ ಹೆಸರು ರುದ್ರ. ಧರ್ಮವಿಶ್ ಸಂಗೀತ ನಿರ್ದೇಶನ ಇರಲಿದೆ.
“ಕಥೆ ತುಂಬಾ ಇಷ್ಟವಾಯ್ತು. ನಿರ್ದೇಶಕರು ಕಥೆ ಹೇಳುವಾಗಲೇ ಸ್ಕ್ರೀನ್ ಪ್ಲೇ ಕೂಡ ರೆಡಿ ಮಾಡಿಕೊಂಡಿದ್ದರು ಎಂದಿದ್ದಾರೆ ರಿಷಿ. ರಿಷಿ ಅವರಿಗೆ ಹೆಸರು ತಂದುಕೊಟ್ಟಿದ್ದು ಆಲಮೇಲಮ್ಮ ಸಿನಿಮಾ ಆದರೂ, ಆ ನಂತರ ರಗಡ್ ಪಾತ್ರಗಳಲ್ಲೂ ಮಿಂಚಿರುವ ರಿಷಿ, ತಾವೊಬ್ಬ ಪರ್ಫೆಕ್ಟ್ ಆರ್ಟಿಸ್ಟ್ ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ್ದಾರೆ. ಹೀಗಾಗಿ ಜವರ ಚಿತ್ರದ ಮೇಲೊಂದು ನಿರೀಕ್ಷೆ ಇದೆ.



