ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ.. ಎಂಬ ವಾದ ಸಿದ್ಧರಾಮಯ್ಯ ಅವರ ಪ್ರಥಮ ಅವಧಿಯಲ್ಲಿ ಶುರುವಾಗಿತ್ತು. ಅದಾದ ಮೇಲೆ ಪಂಚಮಸಾಲಿಗಳ ಪ್ರತ್ಯೇಕ ಹೋರಾಟವೂ ಶುರುವಾಗಿತ್ತು. ಈಗ ಮತ್ತೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಕೇಳಿಬಂದಿದೆ. ʻವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮʼ ಎಂಬ ವಾದ ಹೊಸದೇನಲ್ಲ. ನಾವು ಹಿಂದೂಗಳಲ್ಲ. ನಾವೇ ಪ್ರತ್ಯೇಕ ಎಂಬ ವಾದವೂ ಹೊಸದಲ್ಲ. ಆದರೆ.. ಈ ಬಾರಿ ಅದು ಬೇರೆಯದೇ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಒಗ್ಗಟ್ಟಿನ ಮಂತ್ರ ಜಪಿಸಿದ್ದ ವೀರಶೈವ ಲಿಂಗಾಯತರಲ್ಲಿ ಇದು ಭಿನ್ನಮತ ಮೂಡಿಸಿದ್ದು, ಮತ್ತೆ ಇಬ್ಭಾಗವಾಗಿದೆ.
ಇದೇ ತಿಂಗಳ 22ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಸಮುದಾಯದವರು ವೀರಶೈವ ಲಿಂಗಾಯತ ಎಂದು ಬರೆಸಬೇಕು. ಹಿಂದೂ ಎಂದು ಬರೆಸಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ. ಧರ್ಮದ ಕಾಲಂನ ಇತರೆ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಜಾತಿಯ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು, ಉಪ ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿ ಹೆಸರು ಬರೆಸಬೇಕು ಎಂಬ ಸಂದೇಶ ರವಾನಿಸಿದ್ದಾರೆ.
ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಹಾಸಭಾ ಕಾರ್ಯದರ್ಶಿ ರೇಣುಕ ಪ್ರಸನ್ನ, ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶೆಪ್ಪನವರ್ ಕೂಡಾ ಇದ್ದರು. ಶಂಕರ ಬಿದರಿ ಅವರು ಜಗಜ್ಯೋತಿ ಬಸವಣ್ಣನವರ ಹೆಸರನ್ನು ಹೇಳಿಕೊಂಡು ಸಮಾಜವನ್ನು ವಿಭಜಿಸಬೇಡಿ. ಹಿಂದಿನ ಸಮೀಕ್ಷೆಗಳಲ್ಲಿ ವೀರಶೈವ ಮತ್ತು ಲಿಂಗಾಯತರನ್ನು ಜಾತಿ ಎಂದು ಪರಿಗಣಿಸಲಾಗಿದೆ. ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಅಧಿಕೃತವಾಗಿ ನೀಡಿಲ್ಲ. ಅದನ್ನು ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೆಲವು ಸ್ವಾಮೀಜಿಗಳ ಆಕ್ರೋಶವೂ ವ್ಯಕ್ತವಾಗಿದೆ. ಇತ್ತೀಚೆಗೆ ಲಿಂಗಾಯತ ಸಮುದಾಯದ ಕೆಲವು ಮಠಗಳ ಸ್ವಾಮೀಜಿಗಳೇ ಲಿಂಗಾಯತರೂ ಹಿಂದೂ ಧರ್ಮದ ಒಂದು ಭಾಗ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಹೀಗಿರುವಾಗಲೇ ಮಹಾಸಭಾ ಮೂಲಕವೇ ಪ್ರತ್ಯೇಕ ಧರ್ಮ ಎಂಬ ಆಂದೋಲನ ಶುರುವಾಗಿದೆ.
ಮಹಾಸಭಾಗೆ ಏನು ಕೆಲಸ..?
ವೀರಶೈವ ಮಹಾಸಭಾ ಏನೋ ಕರೆಕೊಟ್ಟಿದೆ. ಆದರೆ, ಈ ಮಹಾಸಭಾ, ರಾಜ್ಯದ ಇಡೀ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಲ್ಲ. ಎಲ್ಲರೂ ಈ ಸಭಾದ ತೀರ್ಮಾನವನ್ನೇ ಒಪ್ಪಬೇಕು ಎಂಬ ವಾದವೇ ಸರಿಯಲ್ಲ. ಈ ಹಿಂದೆ ಲಿಂಗಾಯತರನ್ನು ಒಡೆಯುವ ಹೋರಾಟ ನಡೆದಾಗ ಮಹಾಸಭಾ ಮೌನವಾಗಿತ್ತು. ಇದು ಕೇವಲ ರಾಜಕೀಯ ಪ್ರಾಬಲ್ಯ ಮೆರೆಯುವ ಆಟವೇ ಹೊರತು, ಮತ್ತೇನಲ್ಲ ಎನ್ನುವ ವಾದವೂ ಇದೆ. ಇದರ ಹಿಂದೆ ಸಿದ್ಧರಾಮಯ್ಯ ಮತ್ತೊಮ್ಮೆ ಕುಮ್ಮಕ್ಕು ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರೋದಕ್ಕೆ ಶುರುವಾಗಿವೆ.



