ವರಮಹಾಲಕ್ಷ್ಮೀ ಪೂಜೆ ಹತ್ತಿರ ಬರುತ್ತಿದೆ. ಇನ್ನೊಂದೇ ವಾರ. ಬಹುತೇಕ ಮನೆಗಳಲ್ಲಿ ಲಕ್ಷ್ಮೀ ಪೂಜೆಯನ್ನು ಎಂದಿನಂತೆ ಲಕ್ಷ್ಮೀ ವಿಗ್ರಹಕ್ಕೆ ಸೀರೆ ತೊಡಿಸಿ, ಹಣ, ಒಡವೆಗಳನ್ನಿಟ್ಟು.. ನೈವೇದ್ಯ ಮಾಡಿ ಪೂಜೆ ಮಾಡ್ತಾರೆ. ಆದರೆ.. ಈ ವೇಳೆ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಅದನ್ನು ಗಮನಿಸದಿದ್ದರೆ.. ಅಪಾಯ ಕಟ್ಟಿಟ್ಟ ಬುತ್ತಿ. ಶನಿ ವಕ್ಕರಿಸ್ತಾನೆ.
ಒಂದು ವಿಷಯ ನೆನಪಿನಲ್ಲಿರಲಿ. ಲಕ್ಷ್ಮೀ ಪೂಜೆ ಕೇವಲ ಲಕ್ಷ್ಮೀ ದೇವಿಗೆ ಸಂಬಂಧಪಟ್ಟಿದ್ದಲ್ಲ. ಶಿವ ಹಾಗೂ ಪಾರ್ವತಿ ದೇವಿಗೂ ಸಂಬಂಧಪಟ್ಟ ಹಬ್ಬ.
ನಗು ನಗುತ್ತಾ ಪೂಜೆ ಮಾಡಿ..
ಮೊದಲನೆಯ ನಿಯಮವೇ ಇದು. ನಗುನಗುತ್ತಾ ಇದ್ದರೆ ಪಾಸಿಟಿವಿಟಿ ವೈಬ್ಸ್ ಇರುತ್ತದೆ. ಯಾರ ಮೇಲಾದರೂ.. ಕೋಪಿಸಿಕೊಂಡು, ಶಾಪ ಹಾಕುತ್ತಾ ಪೂಜೆ ಮಾಡುವವರು ಕೂಡಾ ಇದ್ದಾರೆ. ಅಂತಹ ಪೂಜೆ ಮಾಡುವುದಕ್ಕಿಂತ ಸುಮ್ಮನೆ ಇದ್ದರೆ ಒಳ್ಳೆಯದು. ಸುಮಂಗಲಿಯರು ಮನೆಯ ಪೂಜಾ ಕೊಠಡಿಯಲ್ಲಿ ಪೂಜೆ ಮಾಡುವಾಗ, ಪೂಜೆಯ ಸಮಯದಲ್ಲಿ ಪೂಜಾ ಕೋಣೆ ನಕರಾತ್ಮಕತೆಯಿಂದ ಕೂಡಿದ್ದರೆ ಅದರ ಪರಿಣಾಮ ತುಂಬಾ ಕೆಟ್ಟದ್ದಾಗಿರುತ್ತದೆ. ಪೂಜಾ ಕೋಣೆಯಲ್ಲಿ ಮಾಡುವ ಕೆಲವು ತಪ್ಪುಗಳು ಆ ಮನೆಯಲ್ಲಿ ಅನೇಕ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು. ಪ್ರಶಾಂತವಾದ ಮನಸ್ಸಿನಿಂದ, ನಗುನಗುತ್ತಾ ಪೂಜಿಸಬೇಕು.
ವಿಘ್ನವಾಗಿರುವ ವಿಗ್ರಹ ಪೂಜೆ ಬೇಡವೇ ಬೇಡ..!
ವಾಸ್ತು ಪ್ರಕಾರ ಪೂಜಾ ಕೋಣೆಯಲ್ಲಿ ಇರಿಸಲಾದ ದೇವತೆಗಳ ವಿಗ್ರಹಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಮುರಿದ ವಿಗ್ರಹಗಳನ್ನು ಯಾವುದೇ ಕಾರಣಕ್ಕೂ ಮನೆಯ ಪೂಜಾ ಕೋಣೆಯಲ್ಲಿ ಇಡಬಾರದು. ಲಕ್ಷ್ಮೀ ವಿಗ್ರಹವನ್ನಷ್ಟೇ ಅಲ್ಲ.. ಯಾವುದೇ ವಿಘ್ನ ಅಥವಾ ಭಗ್ನವಾಗಿರುವ ವಿಗ್ರಹಗಳು ದೇವರ ಕೋಣೆಯಲ್ಲಿ ಇರಬಾರದು. ಅವುಗಳನ್ನು ಪೂಜೆಯ ವೇಳೆ ಹಾಗೆ ಇಟ್ಟರೆ ನೀವು ದೇವತೆಗಳ ಕೋಪಕ್ಕೆ ಗುರಿಯಾಗುತ್ತೀರಿ. ಮನೆಯು ನಕಾರಾತ್ಮಕ ಶಕ್ತಿಯಿಂದ ಕೂಡಿರುತ್ತದೆ.
ತುಕ್ಕು ಹಿಡಿದ ಆಭರಣ ಬೇಡ..!
ಲಕ್ಷ್ಮೀ ಪೂಜೆ ವೇಳೆ ಆಭರಣಗಳನ್ನು ಹಾಕಲೇಬೇಕೆಂಬ ನಿಯಮ ಇಲ್ಲ. ಇಲ್ಲದಿದ್ದರೆ ಅಪರಾಧವೂ ಅಲ್ಲ. ನಿಷ್ಕಲ್ಮಷ ಮನಸ್ಸಿನಿಂದ ಪೂಜೆ ಮಾಡಿ. ಅಷ್ಟೇ ಸಾಕು. ತುಕ್ಕು ಹಿಡಿದ, ಜಡ್ಡುಗಟ್ಟಿದ ಆಭರಣಗಳನ್ನು ಹಾಕುವುದು ಬೇಡ. ಮುರಿದಿರುವ ಆಭರಣಗಳನ್ನೂ ಹಾಕಬೇಡಿ. ಹಾಗೇನಾದರೂ ಮಾಡಿದರೆ.. ಅದು ಮನೆಯಲ್ಲಿ ಅನೇಕ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ.
ಹೊಸ ವಸ್ತುಗಳೇ ಇರಲಿ..
ಮನೆಯ ಪೂಜೆ ಕೋಣೆಯಲ್ಲಿ ಹಳೆಯದಾಗಿರುವ, ಹಾಳಾದ ವಸ್ತುಗಳನ್ನು ಇಡುವುದು ಅಶುಭ. ತುಂಬಾ ವರ್ಷಗಳಿಂದ ದೇವರ ಕೋಣೆಯಲ್ಲಿ ಬಳಕೆ ಮಾಡದೇ ಹಾಳಾದ ಕುಂಕುಮ, ವಿಭೂತಿ, ಊದುಬತ್ತಿ, ಹತ್ತಿ, ಅರಿಶಿಣ, ಹಳೆಯ ಬಟ್ಟೆ, ಹಾಳಾದ ದೀಪ ಹಚ್ಚುವ ಎಣ್ಣೆ ಹಾಗೂ ತುಪ್ಪ ಇದ್ದರೆ ಅದನ್ನು ಮೊದಲು ಮನೆಯಿಂದ ಹೊರಹಾಕಿ. ಇವುಗಳನ್ನು ಬಳಸಿ ವರಮಹಾಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಗೆ ದಾರಿದ್ರ್ಯ ಅಂಟುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ಏಳಿಗೆ ಕಂಡುಬರುವುದಿಲ್ಲ. ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಕರಿದು ಉಳಿದ ಎಣ್ಣೆಯಿಂದಲೂ ಲಕ್ಷ್ಮೀ ದೇವಿಗೆ ದೀಪ ಹಚ್ಚಿ ಪೂಜೆ ಬಾಡಬಾರದು. ಹೀಗೆ ಮಾಡುವುದರಿಂದ ಪೂಜೆ ಫಲ ನೀಡುವುದಿಲ್ಲ.
ವಿಗ್ರಹವನ್ನು ಇಂತಹ ಕಡೆ ಇಡಬೇಡಿ..!
ಲಕ್ಷ್ಮೀದೇವಿಯನ್ನು ಮೆಟ್ಟಿಲುಗಳ ಕೆಳಗೆ, ಶೌಚಾಲಯ ಹಾಗೂ ಸ್ನಾನಗೃಹದ ಬಳಿ ಕೂರಿಸಬೇಡಿ. ಲಕ್ಷ್ಮೀ ದೇವಿಯನ್ನು ಯಾವಾಗಲು ತೆರೆದ ಕೋಣೆ ಗಾಳಿ ಇರುವ ಸ್ಥಳದಲ್ಲಿ ಕೂರಿಸಬೇಕು. ಆಗ ಮಾತ್ರ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಉತ್ತಮವಾಗಿರುವುದು.
ಪೂಜೆಗಿಟ್ಟ ಹಣವನ್ನು ತೆಗೆದು ಬಳಸಿ..!
ಪೂಜೆಯ ವೇಳೆ ಹಣವನ್ನು ಇಟ್ಟು ಪೂಜೆ ಮಾಡುತ್ತಾರೆ. ಆದರೆ.. ಬಹುತೇಕರು ಆ ಹಣವನ್ನು ತೆಗೆದು ಬಳಸೋದಿಲ್ಲ. ಅದು ದೇವರ ಹಣ ಎನ್ನುತ್ತಾರೆ. ಎಂತಹ ಕಷ್ಟ ಬಂದರೂ ಮಟ್ಟುವುದಿಲ್ಲ. ಆದರೆ.. ಅದು ತಪ್ಪು. ಪೂಜೆಗಿಟ್ಟ ಹಣವನ್ನು ಬಳಸುವುದು ಉತ್ತಮ. ಲಕ್ಷ್ಮೀ ನದಿಯಂತೆ. ಹರಿಯುತ್ತಿರುಬೇಕು. ನಿಲ್ಲಿಸಬಾರದು. ಪೂಜೆಗಿಟ್ಟ ಹಣವನ್ನು ತೆಗೆದು ಧಾರಾಳವಾಗಿ ಬಳಸಿ.



