ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಭಂಗ ಬರಲಿದೆಯಾ ಎಂಬ ಮಾತು ಕೇಳಿ ಬರುತ್ತಿರುವಾಗಲೇ, RCB ಕಾಲ್ತುಳಿತ ಪ್ರಕರಣದಲ್ಲಿ ವಿಜಯೇಂದ್ರ, ಕುಮಾರಸ್ವಾಮಿ, ಆರ್. ಅಶೋಕ್.. ಅವರೆಲ್ಲ ಒಟ್ಟಿಗೇ ಜಂಟಿ ಸುದ್ದಿಗೋಷ್ಟಿ ನಡೆಸಿ ʻನಾವೀಗಲೂ ಒಂದೇʼ ಎಂಬ ಸಿಗ್ನಲ್ ಕೊಟ್ಟಿದ್ದರು. ಇದೀಗ ಕುಮಾರಸ್ವಾಮಿ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಬೇರೆಯದ್ದೇ ಸಿಗ್ನಲ್ ರವಾನಿಸಿದ್ದಾರೆ.
ಚುನಾವಣೆಗೆ ರೆಡಿಯಾಗಿರಿ. ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ ಎಂದಿರುವ ಕುಮಾರಸ್ವಾಮಿ ಸದ್ಯಕ್ಕೆ ನಮ್ಮ ಪಕ್ಷಕ್ಕೆ ಬಿಜೆಪಿ ಅನಿವಾರ್ಯವಾಗಿದ್ದು, ಸ್ವಲ್ಪ ತಗ್ಗಿಬಗ್ಗಿ ನಡೆದುಕೊಂಡು ಹೋಗೋಣ. ನಮ್ಮಿಂದ ತಪ್ಪಾಗುವುದು ಬೇಡ ಎಂದು ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಸ್ಥಳೀಯ ನಾಯಕರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಮೋದಿ, ಅಮಿತ್ ಶಾ, ಬಿಎಲ್ ಸಂತೋಷ್ ನಮ್ಮೊಂದಿಗೆ ಚೆನ್ನಾಗಿದ್ದಾರೆ ಎಂದೂ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪಕ್ಷದ ಹಾಲಿ, ಮಾಜಿ ಶಾಸಕರ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒಂದು ವಿಷಯವನ್ನು ಒತ್ತಿ ಹೇಳಿದ್ದಾರಂತೆ. ಸ್ಥಳೀಯ ನಾಯಕರ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಪಕ್ಷಕ್ಕೆ ಎಷ್ಟು ಸೀಟು ಬೇಕೋ… ಅಷ್ಟನ್ನೂ ಹೈಕಮಾಂಡ್ ಮೂಲಕ ತರುವುದು ನನಗೆ ಬಿಟ್ಟಿದ್ದು. ನೀವು ಸಂಘಟನೆಯತ್ತ ಗಮನ ಕೊಡಿ ಎಂದಿದ್ದಾರಂತೆ.
ರಾಜ್ಯದಲ್ಲಿ ಮೈತ್ರಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ. ನಾನು ಕೇಂದ್ರದಲ್ಲಿ ವಿಶೇಷ ಗೌರವ ಉಳಿಸಿಕೊಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ಶಾ, ಬಿ.ಎಲ್. ಸಂತೋಷ ಅವರ ಜತೆ ನೇರವಾಗಿ ವ್ಯವಹರಿಸುತ್ತಿದ್ದೇನೆ. ಸ್ಥಳೀಯವಾಗಿ ಯಾರೋ ಒಂದಿಬ್ಬರು ಮೈತ್ರಿ ಬಗ್ಗೆ ಏನೇ ಹೇಳಿದರೂ ಅದನ್ನೇ ನೆಚ್ಚಿಕೊಳ್ಳಬೇಡಿ. ನಮ್ಮ ಮೈತ್ರಿ ಭದ್ರವಾಗಿದೆ. ಇದಕ್ಕೆ ಯಾರೂ ಅಂಜಬೇಕಿಲ್ಲ. ಮುಂದಿನ ಪಂಚಾಯಿತಿ ಚುನಾವಣೆಯಲ್ಲಿ ಸೀಟು ಸಿಗುವುದೋ ಇಲ್ಲವೋ ಎಂಬ ಅಳುಕು ಬೇಡ. ಮೈತ್ರಿ ಪಕ್ಷಕ್ಕೆ ಶಕ್ತಿ ಬರುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿ. ಅದು ನನಗೂ ಶಕ್ತಿ ನೀಡಿದಂತಾಗುತ್ತದೆ. ಪಕ್ಷಕ್ಕೂ ಶಕ್ತಿ ಸಿಗುತ್ತದೆ ಎಂದು ಸಂದೇಶ ನೀಡಿದ್ದಾರಂತೆ.
ಅಲ್ಲದೆ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ 33 ಪರ್ಸೆಂಟ್ ಮಹಿಳಾ ಮೀಸಲಾತಿ ಜಾರಿಗೆ ಬರುವುದು ಖಚಿತ. ವಿಧಾನಸಭೆ ಚುನಾವಣೆಯ ಹೊತ್ತಿಗೆ ಮಹಿಳಾ ಮೀಸಲಾತಿ ಜಾರಿಗೊಂಡರೆ ಎಪ್ಪತ್ತಕ್ಕೂ ಹೆಚ್ಚು ಮಂದಿ ಮಹಿಳೆಯರಿಗೆ ಪಕ್ಷ ಟಿಕೆಟ್ ಕೊಡ ಬೇಕಾಗುತ್ತದೆ. ಮಹಿಳಾ ಮೀಸಲಾತಿ ಜಾರಿಗೊಂಡರೆ ಅವರಿಗೆ ಯಾವ್ಯಾವ ಕ್ಷೇತ್ರಗಳು ಫಿಕ್ಸ್ ಆಗುತ್ತವೋ ಗೊತ್ತಿಲ್ಲ. ಹಾಗೆ ಫಿಕ್ಸಾಗುವ ಕಾಲಕ್ಕೆ ಪಕ್ಷ ಮಹಿಳಾ ಅಭ್ಯರ್ಥಿಗಳನ್ನು ಗುರುತಿಸಿರಬೇಕು. ಕೊನೆಯ ಕ್ಷಣದಲ್ಲಿ ಪರದಾಡುವ ಸ್ಥಿತಿ ಸೃಷ್ಟಿಯಾಗಬಾರದು. ಹೀಗಾಗಿ ಈಗಿನಿಂದಲೇ ಮಹಿಳಾ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಶುರುವಾಗಲಿ ಎಂದು ಮೆಸೇಜ್ ಕೊಟ್ಟಿದ್ದಾರಂತೆ ಕುಮಾರಸ್ವಾಮಿ.
ಮಹಿಳಾ ಮೀಸಲಾತಿ ಜಾರಿಯಾದರೆ 73 ಮಹಿಳಾ ಶಾಸಕರು ಪಕ್ಕಾ..!
ವಿಧಾನಸಭೆಯ ಬಲಾಬಲ 224. ಈ ಸಂಖ್ಯೆಗೆ ಅನುಗುಣವಾಗಿ ಮಹಿಳಾ ಮೀಸಲಾತಿ ಜಾರಿಗೆ ಬಂದರೆ ರಾಜಕೀಯ ಪಕ್ಷಗಳು ತಲಾ 73ರಷ್ಟು ಮಹಿಳೆಯರಿಗೆ ಸೀಟು ಕೊಡಬೇಕು. ಅಂದರೆ ಜಾರಿಯಾದರೆ 73 ಮಹಿಳಾ ಶಾಸಕರು ಆಯ್ಕೆಯಾಗುತ್ತಾರೆ. ಅದಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನಂತೂ ಯಾವ ಪಕ್ಷವೂ ನೀಡುವುದಿಲ್ಲ ಎನ್ನುವುದು ರಾಜಕೀಯ ಪಂಡಿತರ ಭವಿಷ್ಯ.