ಪ್ರತಿ ಮನೆಯಲ್ಲೂ ತೆಂಗಿನ ಕಾಯಿ ಬಳಸುತ್ತಾರೆ. ಹಿಂದೂಗಳ ಮನೆಗಳಲ್ಲಿ ದೇವರ ಪೂಜೆಗೆ ತೆಂಗಿನ ಕಾಯಿ ಬೇಕೇ ಬೇಕು. ಹಿಂದೂಗಳಲ್ಲದಿದ್ದವರು ಅಡುಗೆಯಲ್ಲಿ ಬಳಸ್ತಾರೆ. ಚಟ್ನಿ, ಸಾಂಬಾರ್, ಸಿಹಿ ತಿಂಡಿ, ಚಿಕನ್, ಮಟನ್.. ಯಾವುದೇ ಇರಲಿ.. ತೆಂಗಿನ ಕಾಯಿ ಇದ್ದೇ ಇರುತ್ತದೆ. ಮೊದಲೆಲ್ಲ ಹಳ್ಳಿಗಳಲ್ಲಿ ಸೌದೆ ಒಲೆಗೆ ಹಾಕುತ್ತಿದ್ದ ತೆಂಗಿನ ಕಾಯಿ ಚಿಪ್ಪು, ಈಗ ಗ್ಯಾಸ್ ಒಲೆ ಇದ್ದ ಕಾರಣ.. ಕಸಕ್ಕೆ ಹೋಗುತ್ತಿದೆ. ಕಸಕ್ಕೆ ಹಾಕಬೇಡಿ. ತೆಂಗಿನ ಕಾಯಿ ಚಿಪ್ಪಿಗೂ ಬೆಲೆ ಇದೆ. ಕೆಜಿಗೆ 22 ರೂ. ಇದೆ. ಅಲ್ಲಿಗೆ ತೆಂಗನ್ನು ಕಲ್ಪವೃಕ್ಷ ಎಂದೇಕೆ ಕರೆಯುತ್ತಾರೆ ಎನ್ನುವುದು ಗೊತ್ತಾಗುತ್ತಿದೆ.
ತೆಂಗಿನ ಚಿಪ್ಪುಗಳಿಗೆ ಬೇಡಿಕೆ ಏಕೆ..?
ತೆಂಗಿನಕಾಯಿ ಚಿಪ್ಪುಗಳನ್ನು ಕೇವಲ ಇದ್ದಿಲು ತಯಾರಿಸಲು ಅಥವಾ ಅಲಂಕಾರಿಕ ವಸ್ತುಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ, ಚಿಪ್ಪಿನಿಂದ ತಯಾರಿಸಿದ ಇದ್ದಿಲಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಯಾವ ಮಟ್ಟಿಗೆ ಎಂದರೆ.. ತೆಂಗಿನ ಕಾಐ ಚಿಪ್ಪುಗಳನ್ನು ರಫ್ತು ಮಾಡಲಾಗ್ತಾ ಇದೆ. ಹೀಗಾಗಿ ವೇಸ್ಟ್ ಎಂದು ಪರಿಗಣಿಸಿದ್ದ ಚಿಪ್ಪುಗಳಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಅಡುಗೆ ಒಲೆಗೆ ಉರಿಯಾಗಿ ಅಥವಾ ಕಸದ ಬುಟ್ಟಿಗೆ ಸೇರುತ್ತಿದ್ದ ತೆಂಗಿನ ಚಿಪ್ಪುಗಳು ಈಗ ಆದಾಯದ ಮೂಲವಾಗಿ ಬದಲಾಗಿವೆ.
ಚಿಪ್ಪನ್ನು ಹೇಗೆ ಖರೀದಿ ಮಾಡಲಾಗುತ್ತದೆ..?
ಎಲ್ಲ ಕಡೆ ಖರೀದಿದಾರರು ಇನ್ನೂ ಶುರುವಾಗಿಲ್ಲ. ಸದ್ಯಕ್ಕೆ ತಿಪಟೂರು, ಅರಸೀಕೆರೆ ಸೇರಿದಂತೆ ಪ್ರಮುಖ ತೆಂಗು ಆಧಾರಿತ ಮಾರುಕಟ್ಟೆಗಳಲ್ಲಿ ಮಾತ್ರವೇ ಬಿಸಿನೆಸ್ ಆಗಿ ಕನ್ವರ್ಟ್ ಆಗಿದೆ. ವ್ಯಾಪಾರಿಗಳು ಒಂದು ಚಿಪ್ಪಿಗೆ 1 ರೂಪಾಯಿಯಂತೆ ಅಥವಾ ತೂಕದ ಆಧಾರದ ಮೇಲೆ ಒಂದು ಕೆಜಿಗೆ 20 ರಿಂದ 22 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. ವ್ಯಾಪಾರಿಗಳು ಪ್ರತಿ ಮನೆಗೂ ಹೋಗಿ ಚಿಪ್ಪುಗಳನ್ನು ಸಂಗ್ರಹ ಮಾಡಿಕೊಂಡು ಹೋಗುತ್ತಿದ್ದಾರೆ.
ರೇಟ್ ಹೇಗೆ..?
ತೆಂಗಿನ ಕಾಯಿ ಚಿಪ್ಪುಗಳನ್ನು ಕಲೆಕ್ಟ್ ಮಾಡಿ ಸಂಗ್ರಹ ಮಾಡಿದವರು ಅದೇ ತೆಂಗಿನ ಚಿಪ್ಪು ಅಥವಾ ಕೊಬ್ಬರಿ ಕರಟವನ್ನು ಕ್ವಿಂಟಾಲಿಗೆ 26 ರಿಂದ 27 ಸಾವಿರಕ್ಕೆ ಮಾರುತ್ತಿದ್ದಾರೆ. ವಿದೇಶಗಳಿಗೂ ಹೋಗುತ್ತದೆ. ತಮಿಳುನಾಡು, ಕೇರಳಗಳಲ್ಲಿ ಚಿಪ್ಪಿನ ಇದ್ದಿಲು ತಯಾರಿಗೂ ಹೋಗುತ್ತದೆ. ರಾಜಸ್ತಾನ, ಗುಜರಾತ್ ಮೊದಲಾದ ಕಡೆಗಳಲ್ಲಿರುವ ಸೌಂದರ್ಯವರ್ಧಕ ಕಂಪೆನಿಗಳಲ್ಲೂ ಬೇಡಿಕೆ ಇದೆ. ಮುಖದ ಕ್ರೀಂ, ಪೇಂಟ್ಸ್ ತಯಾರಿಕೆ.. ಇತ್ಯಾದಿ ಇತ್ಯಾದಿಗಳಲ್ಲಿ ಇದ್ದಿಲು ಬೇಕು. ಕೊಬ್ಬರಿ ಇದ್ದಿಲಾದರೆ.. ಅದರಲ್ಲಿ ಮಸಿ ಚೆನ್ನಾಗಿ ಬರುತ್ತದೆ. ಹೀಗಾಗಿಯೇ ಇದಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಅಂದಹಾಗೆ ಇತ್ತೀಚೆಗೆ ರೈತರು ತೆಂಗಿನ ಕಾಯಿಗಳನ್ನು ಕೊಬ್ಬರಿ ಆಗುವವರೆಗೂ ಬಿಡುತ್ತಿಲ್ಲ. ಎಳನೀರುಗಳನ್ನೇ ತೆಗೆದು ಮಾರುತ್ತಿದ್ದಾರೆ. ವರ್ಷವಿಡೀ ಕಾದು ಒಣಗಿಸಿ ಕೊಬ್ಬರಿ ಮಾರಿದಾಗ ಸಿಗುವ ಲಾಭದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಎಳನೀರು ಮಾರಾಟದಲ್ಲೇ ಸಿಗುವಾಗ ಯಾಕೆ ಕೊಬ್ಬರಿ ಮಾಡ್ತಾರೆ.. ಅಲ್ಲವೇ.. ಹೀಗಾಗಿ ಬೇಡಿಕೆಗೆ ತಕ್ಕಷ್ಟು ಕೊಬ್ಬರಿ ಚಿಪ್ಪುಗಳ ಸಂಗ್ರಹ ಆಗುತ್ತಿಲ್ಲ. ಇದು ಕೊಬ್ಬರಿ ಬೆಲೆಯೂ ಹೆಚ್ಚಳವಾಗುವಂತೆ ಮಾಡಿದೆ.



