ನಟ ದರ್ಶನ್ ಅವರನ್ನು ತಮ್ಮ ಅಣ್ಣ ಎಂದೇ ಕರೆಯುವ ನಟ ವಿನೋದ್ ಪ್ರಭಾಕರ್. ರಾಬರ್ಟ್ ಸಿನಿಮಾದಲ್ಲಿ ಹಾಡಿದ ವಿ ಆರ್ ಬ್ರದರ್ ಫ್ರಂ ಅನದರ್ ಮದರ್.. ಹಾಡು ಸಿನಿಮಾಕ್ಕಷ್ಟೇ ಅಲ್ಲ, ಪರ್ಸನಲ್ ಲೈಫಿಗೂ ಇದೆ ಎಂದು ಹಲವು ಬಾರಿ ವಿನೋದ್ ಪ್ರಭಾಕರ್ ಹೇಳ್ಕೊಂಡಿದ್ದಾರೆ. ಅಂತಹ ವಿನೋದ್, ದರ್ಶನ್ ಅವರು ಎದುರಿಸುತ್ತಿರುವ ಈ ಕೊಲೆ ಆರೋಪದ ಬಗ್ಗೆ ಏನೂ ಮಾತಾಡ್ತಿಲ್ಲ, ಪೋಸ್ಟ್ ಕೂಡಾ ಹಾಕ್ತಿಲ್ಲ ಎಂದು ಅಭಿಮಾನಿಗಳು ಕೆರಳಿದ್ದರು. ಅವರೆಲ್ಲರಿಗೂ ಉತ್ತರ ಕೊಟ್ಟಿದ್ದಾರೆ ವಿನೋದ್ ಪ್ರಭಾಕರ್.
ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಲ್ಲಿ ನಟರಾದ ವಿನೋದ್ ಪ್ರಭಾಕರ್ ಭೇಟಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ವಿನೋದ್ ಪ್ರಭಾಕರ್ ಅವರು ಏನ್ ಟೈಗರ್.. ಅಂದ್ರು. ನಾನು ಬಾಸ್.. ಅಂದೆ. ಕೆಲವೇ ಸೆಕೆಂಡ್ ಅಷ್ಟೇ ಅಲ್ಲಿದ್ದೆ. ನನಗೂ ಏನು ಮಾತನಾಡಬೇಕು ಎಂದು ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.
ರೇಣುಕಾ ಸ್ವಾಮಿ ಕುಟುಂಬಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಧೈರ್ಯವನ್ನು ಕೊಡಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಇದು ಆಗಬಾರದಾಗಿತ್ತು. ಎಲ್ಲರಿಗೂ ಗೊತ್ತಿರುವಷ್ಟೇ ನನಗೂ ಗೊತ್ತಿದೆ. ನಾಲ್ಕು ತಿಂಗಳ ಹಿಂದೆ ದರ್ಶನ್ ಸರ್‌ನ ಮೀಟ್ ಆಗಿದ್ದೆ. ಈ ಹಿಂದೆ ಪೊಲೀಸ್ ಸ್ಟೇಷನ್‌ಗೆ ಹೋಗಿ ಭೇಟಿಯಾಗಲು ಪ್ರಯತ್ನಿಸಿದ್ದೆ. ಆದರೆ ಆಗಿರಲಿಲ್ಲ. ಇಲ್ಲಿ ಭೇಟಿಯಾಗಿ ಬಂದಿದ್ದೇನೆ. ದರ್ಶನ್ ಅವರು ಮೌನವಾಗಿದ್ದರು, ಮಂಕಾಗಿದ್ದರು ಎಂದಿದ್ದಾರೆ ವಿನೋದ್ ಪ್ರಭಾಕರ್.
ತಮ್ಮ ವಿರುದ್ಧದ ಟೀಕೆಗಳಿಗೂ ಉತ್ತರ ನೀಡಿದ ವಿನೋದ್ ವಿನೋದ್ ಪ್ರಭಾಕರ್ ಬಂದಿಲ್ಲ, ಏನೂ ಹೇಳಿಕೆ ನೀಡಿಲ್ಲ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ತಾರೆ. ನಾನು ಪೋಸ್ಟ್ ಹಾಕಿದ್ರೆ ಈ ಸಮಸ್ಯೆಗಳೆಲ್ಲಾ ಬಗೆಹರಿಯತ್ತೆ ಅನ್ನೋದಾಗಿದ್ರೆ ನಾನೇ ಒಂದು ಲಕ್ಷ ಪೋಸ್ಟ್‌ಗಳನ್ನು ಹಾಕಿಬಿಡುತ್ತಿದ್ದೆ. ಇದು ಬಹಳ ಗಂಭೀರ ವಿಚಾರ. ಪೊಲೀಸ್ ತನಿಖೆ ನಡೆಯುತ್ತಿರುವ ವೇಳೆ ಡಿಸ್ಟರ್ಬ್ ಮಾಡುವುದು ಅಪರಾಧ. ಅಲ್ಲದೆ ಈ ಪ್ರಕರಣದ ಬಗ್ಗೆ ನನಗೂ ಕ್ಲಾರಿಟಿ ಇಲ್ಲ. ಹೀಗಾಗಿ ದರ್ಶನ್ ಅವರನ್ನು ಭೇಟಿಯಾಗುವವರೆಗೂ ಇದರ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೆ. ಎಲ್ಲರಿಗೂ ನ್ಯಾಯ ಸಿಗಬೇಕು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಲ್ಲ ಒಳ್ಳೆಯದಾಗತ್ತೆ ಅಂತ ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದಿದ್ದಾರೆ.
ತಾತ್ಪರ್ಯ ಇಷ್ಟೆ, ದರ್ಶನ್ ಎದುರಿಸುತ್ತಿರುವುದು ಸಾಧಾರಣ ಕೇಸ್ ಅಂತೂ ಅಲ್ಲ, ಮರ್ಡರ್ ಕೇಸು. ಅದೂ ಕ್ರೌರ್ಯದ ಪರಮತಾಂಡವವೇ ಆಗಿದೆ. ಈ ಪ್ರಕರಣದಲ್ಲಿ ತನಿಖೆಯನ್ನೇ ಪ್ರಶ್ನಿಸಿ ಮಾತನಾಡುವುದು, ಕೊಲೆ ಆರೋಪಿಯ ಪರ ಜನಾಭಿಪ್ರಾಯ ರೂಪಿಸಿ ತನಿಖೆಯ ಮೇಲೆ ಒತ್ತಡ ಹೇರುವುದು ಅಪರಾಧವಾಗಲಿದೆ. ವಿನೋದ್ ಹೇಳಿರುವುದು ಇದನ್ನೇ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ & ಗ್ಯಾಂಗ್ʻನ ನಾಲ್ವರನ್ನು ತುಮಕೂರು ಜೈಲಿಗೆ ಸ್ಥಳಾಂತರಿಸಲಾಗಿದೆ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡುವುದಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.ವಿಶಂಕರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಆರೋಪಿಗಳ ಸ್ಥಳಾಂತರಕ್ಕೆ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಕಾರ್ತಿಕ್, ಕೇಶವಮೂರ್ತಿ, ನಿಖಿಲ್.. ಈ ಮೂವರು ರೇಣುಕಾಸ್ವಾಮಿ ನಾವೇ ಕೊಂದಿದ್ದೇವೆಂದು ಹೇಳಿಕೊಂಡು ಮೊದಲು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಶರಣಾಗತರಾಗಿದ್ದವರು. ಇನ್ನು ರವಿಶಂಕರ್, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದ ಕ್ಯಾಬ್ ಡ್ರೈವರ್. ಪ್ರಕರಣ ಬೆಳಕಿಗೆ ಬಂದ ಮೇಲೆ ಹೆದರಿ ಚಿತ್ರದುರ್ಗ ಡಿವೈಎಸ್ಪಿ ಕಚೇರಿಗೆ ಬಂದು ಶರಣಾಗಿದ್ದರು. ರವಿಶಂಕರ್ ಮೊದಲು ತನ್ನೆಲ್ಲ ಕಥೆಯನ್ನು ಟ್ಯಾಕ್ಸಿ ಚಾಲಕರ ಸಂಘದವರ ಬಳಿ ಹೇಳಿಕೊಂಡಿದ್ದರು.ಟ್ಯಾಕ್ಸಿ ಸಂಘದ ಮುಖಂಡರೇ, ರವಿಶಂಕರ್ʻನನ್ನು ಸರೆಂಡರ್ ಮಾಡಿಸಿದ್ದರು. ಈ ನಾಲ್ವರೂ ಆರೋಪಿಗಳನ್ನು ಸುರಕ್ಷತೆಯ ಕಾರಣ ನೀಡಿ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.



