ಬಸನಗೌಡ ಪಾಟೀಲ ಯತ್ನಾಳ್ ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ಕಾಂಟ್ರವರ್ಸಿ ಹೇಳಿಕೆಗಳಿಗೆ ಹೆಸರುವಾಸಿ. ಪಕ್ಷದ ನಾಯಕರು, ಜೊತೆಯಲ್ಲಿರುವ ರಾಜಕಾರಣಿಗಳು, ಎದುರಾಳಿ ಪಕ್ಷದವರು.. ಹೀಗೆ ಯಾರನ್ನೂ ಬಿಡದ ಯತ್ನಾಳ್, ಹಿಂದೂ-ಮುಸ್ಲಿಂ ವಿಷಯದಲ್ಲಿ ಹತೋಟಿ ಮೀರಿ ಮಾತನಾಡುತ್ತಾರೆ. ಇಂತಹ ಯತ್ನಾಳ್ ಅವರಿಗೆ ಈಗ ಹೈಕೋರ್ಟ್ ಕೂಡಾ ಚಾಟಿ ಬೀಸಿದೆ.
‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ,” ಎಂದು ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣದಲ್ಲಿ ಹೈಕೋರ್ಟ್, ಯತ್ನಾಳ್ ಅವರಿಗೆ ಛೀಮಾರಿ ಹಾಕಿದೆ. ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದೆ.
ದಿನೇಶ್ ಗುಂಡೂರಾವ್ ಅವರದ್ದು ಅಂತರ್ ಧರ್ಮೀಯ ವಿವಾಹ. ದಿನೇಶ್ ಅವರ ಪತ್ನಿ ತಬುಸ್ಸಮ್. ಈ ಪ್ರಕರಣ ಶುರುವಾಗಿದ್ದು ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ. ಎನ್‌ಐಎ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರೊಬ್ಬರನ್ನು ವಿಚಾರಣೆ ನಡೆಸಿದ್ದರು. ಇದನ್ನು ಪ್ರಸ್ತಾಪಿಸಿ ದಿನೇಶ್ ಗುಂಡೂರಾವ್ ಟೀಕಿಸಿದ್ದರು. ದಿನೇಶ್ ಗುಂಡೂರಾವ್ ಅವರ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡುವಾಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ. ಹೀಗಾಗಿ, ಅವರಿಗೆ ದೇಶ ವಿರೋಧಿ ಹೇಳಿಕೆ ನೀಡುವುದು ಚಟವಾಗಿದೆ ಎಂದು ಯತ್ನಾಳ್ ಆರೋಪಿಸಿದ್ದರು.
”ಯತ್ನಾಳ್ ಅವರ ದೇಶ ವಿರೋಧಿ ಹೇಳಿಕೆಯಿಂದ ನನಗೆ ನೋವಾಗಿದೆ,” ಎಂದು ಆರೋಪಿಸಿ ದಿನೇಶ್ ಗುಂಡೂರಾವ್ ಅವರ ಪತ್ನಿ ತಬಸ್ಸುಮ್ ಅವರು, ಯತ್ನಾಳ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಈ ದೂರನ್ನು ಪರಿಗಣಿಸಿರುವ ನ್ಯಾಯಾಲಯವು ಆರೋಪಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲು ನಿರ್ದೇಶಿಸಿತ್ತು. ಅದನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪ್ರಕರಣ ರದ್ದು ಮಾಡಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್ ಯತ್ನಾಳ್ ಅವರಿಗೆ ಛೀಮಾರಿ ಹಾಕಿದೆ.
ನಿಮಗೆ ಎಷ್ಟು ಹೇಳಲಾಗಿದೆ, ನಿಮಗೆ (ಯತ್ನಾಳ್‌ಗೆ) ಇದೆಲ್ಲಾಏಕೆ ಬೇಕು? ನಿಮ್ಮ ಮನಸ್ಸಿಗೆ ಬಂದಿದ್ದೆಲ್ಲವನ್ನೂ ಮಾತನಾಡುತ್ತೀರಲ್ಲ. ಅರ್ಧ ಪಾಕಿಸ್ತಾನ ಎಂದರೆ ಏನರ್ಥ? ಆ ಸಮುದಾಯ ಈ ದೇಶದಲ್ಲಿದೆ. ಇದರಿಂದ ಏನು ಸಿಗುತ್ತದೆ? ಸಚಿವರ ಪತ್ನಿ ಮುಸ್ಲಿಂ ಆಗಿದ್ದಾರೆಂದ ಮಾತ್ರಕ್ಕೆ ಆ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಮಾತುಗಳನ್ನಾಡುವುದು ಸರಿಯಲ್ಲ. ನಾನು ಇದಕ್ಕೆ ತಡೆ ನೀಡುವುದಿಲ್ಲ. ಸ್ವಲ್ಪ ತಡೆ ಹಿಡಿದು ಮಾತನಾಡಿ ಅಂಥ ಹೇಳುತ್ತಿದ್ದೇವೆ, ಅದನ್ನು ಪಾಲಿಸಬೇಕು” ಎಂದು ನ್ಯಾಯಪೀಠ ಕಿವಿಮಾತು ಹೇಳಿದೆ.
ಯತ್ನಾಳ್ ಪರ ವಕೀಲರು, ”ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿ ಹೇಳಿಕೆ ನೀಡಲಾಗಿತ್ತು. ಮರುದಿನವೇ ಸ್ಪಷ್ಟನೆಯನ್ನೂ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಆ ಹೇಳಿಕೆ ನೀಡಿಲ್ಲ. ಶುಕ್ರವಾರ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಅದಕ್ಕೆ ತಡೆ ನೀಡಬೇಕು,” ಎಂದು ಕೋರಿದರು.
ನ್ಯಾಯಪೀಠ, ಪ್ರಕರಣಕ್ಕೆ ತಡೆ ನೀಡುವುದಕ್ಕೆ ಸಾಧ್ಯವಿಲ್ಲ. ಬಿಎನ್‌ಎಸ್‌ಎಸ್ ಸೆಕ್ಷನ್ 200ರ ಅಡಿ ಸಂಜ್ಞೆ ಪರಿಗಣಿಸುವುದಕ್ಕೂ ಮುನ್ನ ಆರೋಪಿಯ ವಾದವನ್ನು ಆಲಿಸಬೇಕು. ಆದರೆ ಆ ಪ್ರಕ್ರಿಯೆಯಲ್ಲಿ ಲೋಪ ಕಾಣುತ್ತಿದೆ. ಹಾಗಾಗಿ, ಸೆ. 26ರಂದು ಹೊಸದಾಗಿ ನಿಯಮದ ಪ್ರಕಾರ ಸಂಜ್ಞೆ ಪರಿಗಣಿಸಲು ಪ್ರಕರಣವನ್ನು ಮತ್ತೆ ಅಧೀನ ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿದೆ.
ಯತ್ನಾಳ್ ವಿರುದ್ಧ ಮತ್ತೊಂದು ಕೇಸು : ಒಂದು ಪ್ರಕರಣ ಹೀಗಿರುವಾಗಲೇ ಯತ್ನಾಳ್ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ರಾಹುಲ್ ಗಾಂಧಿಗೆ ತನ್ನ ಜಾತಿ ಯಾವುದು ಎಂದೇ ಗೊತ್ತಿಲ್ಲ ಎಂದು ಟೀಕೆ ಮಾಡಿದ್ದ ಪ್ರಕರಣದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಅವರು ದೂರು ನೀಡಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿ ಬಾರಿಯೂ ಕೇವಲ ತನ್ನ ರಾಜಕೀಯ ಹಾಗೂ ಪ್ರಚಾರಕ್ಕೋಸ್ಕರ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಟೀಕೆ ನಡೆಸುತ್ತಿರುತ್ತಾರೆ. ಜೊತೆಗೆ ರಾಹುಲ್ ಗಾಂಧಿ ಅವರ ಬಗ್ಗೆ ಈಗಾಗಲೆ ಅನೇಕ ಬಾರಿ ಇಂತಹ ಟೀಕೆಗಳನ್ನು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ತಮಗೆ ದೂರನ್ನು ಸಲ್ಲಿಸಿದ್ದೇವೆ. ಆದರೂ ಸಹ ಪೊಲೀಸ್ ಇಲಾಖೆ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ವೈಯಕ್ತಿಕವಾಗಿ ರಾಹುಲ್‌ಗಾಂಧಿರವರ ವಿರುದ್ಧ ನಿಂದನೆ ಹಾಗೂ ಟೀಕೆಯನ್ನು ಮಾಡುತ್ತಿದ್ದಾರೆ. ಇದು ಕಾನೂನು ಸುವ್ಯವಸ್ಥೆಗೆ ವಿರುದ್ಧವಾದ ಹೇಳಿಕೆ ಆಗಿರುವುದರಿಂದ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತೀವ್ರ ನೋವು ತರುವಂತಹ ಹೇಳಿಕೆ ನೀಡಿರುವ ಇವರ ವಿರುದ್ಧ ತುರ್ತಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದ ನಿಯೋಗ ಮನವಿ ಮಾಡಿದೆ.



