ಇತ್ತೀಚೆಗೆ ಹಲವು ದೇವಸ್ಥಾನಗಳಲ್ಲಿ ಗರ್ಭಗುಡಿಗೆ ಹೋಗಿ ಪೂಜೆ ಮಾಡಿಸುವ ಸಂಪ್ರದಾಯ ಇದೆ. ಅದು ಭಕ್ತರ ಶ್ರೀಮಂತಿಕೆ, ಅಧಿಕಾರ, ಜನಪ್ರಿಯತೆಯನ್ನು ಆಧರಿಸಿದೆ. ಅರ್ಚಕರೂ ಪೂಜೆ ಮಾಡಿಸುವವರ ಮನಿ ಪವರ್, ಅಧಿಕಾರ, ಸೆಲಬ್ರಿಟಿಗಳು ಎಂಬುದನ್ನು ನೋಡಿ, ಅಂತಹವರನ್ನು ಗರ್ಭಗುಡಿಯೊಳಕ್ಕೂ ಕರೆತಂದು ಬಿಡುತ್ತಾರೆ. ಅವರಿಂದಲೇ ಪೂಜೆ ಮಾಡಿಸುತ್ತಾರೆ. ಆದರೆ.. ಹೀಗೆ ಮಾಡುವುದು ಅಥವಾ ಮಾಡಿಸುವುದು ಎರಡೂ ಕೂಡಾ ಅಪಚಾರವೇ. ಏಕೆಂದರೆ, ಧರ್ಮಶಾಸ್ತ್ರದಲ್ಲಿ ಗರ್ಭಗುಡಿಯೊಳಗೆ ಮಾಡುವ ಪೂಜೆಗಳ ಕುರಿತೂ ನಿಯಮಗಳಿವೆ.
ಗರ್ಭಗುಡಿ ಬಾಗಿಲಿಗೆ ಹೋಗಬಹುದು..!
ಸಾಮಾನ್ಯ ದೇವಾಲಯಗಳಲ್ಲಿ ಗರ್ಭಗುಡಿಯು ತನ್ನದೇ ಆದ ಪ್ರಾಕಾರ, ಆಲಯ ದೇವತೆಗಳು ಮತ್ತು ಪರಿವಾರ ದೇವತೆಗಳನ್ನು ಹೊಂದಿರುತ್ತದೆ. ಶ್ರೀಮಂತಿಕೆ, ಅಧಿಕಾರ ಅಥವಾ ವಿವಿಐಪಿ ಸ್ಥಾನಮಾನ ಇದ್ದರೂ ಸಹ, ಅರ್ಚಕರು ಕರೆದರೆ ಗರ್ಭಗುಡಿಯ ಹೊಸ್ತಿಲಿನವರೆಗೂ ಹೋಗುವುದು ಶುಭಕರ. ಇದರಿಂದ ಇಷ್ಟಾರ್ಥಗಳು ಈಡೇರಬಹುದು. ಆದರೆ, ಗರ್ಭಗುಡಿಯ ಒಳಗಡೆ ಪ್ರವೇಶಿಸುವ ಅಧಿಕಾರ ಇರುವುದು ಅರ್ಚಕರಿಗೆ ಮಾತ್ರ. ಕಾರಣ ಇಷ್ಟೇ, ಅರ್ಚಕರು ಅಥವಾ ಪುರೋಹಿತರು ಪ್ರತಿದಿನ ಶುಚಿತ್ವದಿಂದ, ಸಂಕಲ್ಪಗಳನ್ನು ಮಾಡಿ, ಮಂತ್ರಗಳ ಮೂಲಕ ಭಗವಂತನನ್ನು ಆವಾಹನೆ ಮಾಡಿರುತ್ತಾರೆ. ಅಲ್ಲಿ ದೈವಿಕ ಶಕ್ತಿ ಮತ್ತು ಲಹರಿಗಳು ಇರುತ್ತವೆ.
ಜ್ಯೋತಿರ್ಲಿಂಗಗಳ ಪದ್ಧತಿ ಬೇರೆ..!
ಯಾವುದೇ ದೇವಸ್ಥಾನದಲ್ಲಿ ದೇವರನ್ನು ನೇರವಾಗಿ ಮುಟ್ಟುವ ಹಕ್ಕು ಅಥವಾ ಶಕ್ತಿ ಸಾಮಾನ್ಯ ಭಕ್ತರಿಗೆ ಇರುವುದಿಲ್ಲ. ಜ್ಯೋತಿರ್ಲಿಂಗಗಳು ಮಾತ್ರ ಇದಕ್ಕೆ ಹೊರತಾಗಿವೆ. ಜ್ಯೋತಿರ್ಲಿಂಗಗಳಲ್ಲಿ ಪ್ರಾಚೀನ ಕಾಲದಿಂದಲೂ ಭಕ್ತರಿಗೆ ತಮ್ಮ ಕೈಯಾರೆ ದೇವರಿಗೆ ಅಭಿಷೇಕ ಮಾಡಲು ಅವಕಾಶವಿದೆ. ಇದಕ್ಕೆ ಯಾವುದೇ ಪ್ರಾಕಾರ, ಕಿರುದಾದ ಗುಡಿ ಅಥವಾ ಗರ್ಭಗುಡಿಯ ಕಟ್ಟುನಿಟ್ಟಾದ ನಿಯಮಗಳು ಅನ್ವಯಿಸುವುದಿಲ್ಲ.
ಉಗ್ರ ದೇವತೆಗಳ ಬಗ್ಗೆ ಎಚ್ಚರ ಇರಲಿ
ಉಗ್ರ ದೇವತೆಗಳು, ಶಿವಲಿಂಗಗಳು, ನಾಗ ಕಲ್ಲುಗಳು, ನಾಗ ಬನಗಳು, ಶ್ರೀ ಚಕ್ರಗಳು, ಭೂಗರ್ಭ ಚಕ್ರಗಳು ಮುಂತಾದವನ್ನು ಸಾಮಾನ್ಯರು ಸ್ಪರ್ಶಿಸಬಾರದು. ಶುದ್ಧ ಮನಸ್ಸಿನಿಂದ ಮನೆಯ ದೇವರ ಮನೆಯಲ್ಲಿ ದೇವರನ್ನು ಮುಟ್ಟಬಹುದೇ ಹೊರತು, ದೇವಾಲಯದ ಗರ್ಭಗುಡಿ ಪ್ರವೇಶಿಸುವುದು ಒಳ್ಳೆಯದಲ್ಲ. ಮೂರ್ತಿ ಸೃಷ್ಟಿ, ಪ್ರತಿಷ್ಠಾಪನೆ, ಮತ್ತು ಪ್ರಭಾವಳಿಗೆ ತನ್ನದೇ ಆದ ನಿಯಮ ಮತ್ತು ವಿಧಿ ವಿಧಾನಗಳಿರುತ್ತವೆ.
ಅರ್ಚಕರ ಪರಿಸ್ಥಿತಿ ವಿಭಿನ್ನ
ಇನ್ನು ಹಲವು ದೇವಸ್ಥಾನಗಳಲ್ಲಿ ಬೇರೆ ದೇವಸ್ಥಾನಗಳ ಅರ್ಚಕರು ಹೋದರೂ, ಅದೆಷ್ಟೇ ಪರಿಚಯ, ಸಂಬಂಧ, ಬಾಂಧವ್ಯ ಇದ್ದರೂ ಗರ್ಭಗುಡಿ ಪ್ರವೇಶ ಮಾಡುವುದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಏಕೆಂದರೆ ಅವರಿಗೆ ದೇವರ ಪೂಜೆಯ ವಿಧಿ ವಿಧಾನಗಳು ಗೊತ್ತಿರುತ್ತವೆ. ಅನುಸರಿಸಬೇಕಾದ ನೀತಿ, ನಿಯಮಗಳ ಬಗ್ಗೆ ಅರಿವೂ ಇರುತ್ತದೆ. ಅಂತಹ ನೀತಿ ನಿಯಮಗಳನ್ನು ಪಾಲನೆ ಮಾಡಿದ್ದರೆ ಮಾತ್ರ, ಅಂತಹವರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡುತ್ತಾರೆ.
ಭಕ್ತರಲ್ಲಿ ಸಾಮಾನ್ಯವಾಗಿ ಅರ್ಥ, ಅರ್ಥಾರ್ಥಿ, ಜ್ಞಾನಿ, ಜಿಜ್ಞಾಸು ಎಂಬ ನಾಲ್ಕು ವಿಧಗಳಿರುತ್ತವೆ. ಹಣ ಇದೆ, ಅಧಿಕಾರ ಇದೆ, ಶ್ರೀಮಂತಿಕೆ ಇದೆ, ಜನಪ್ರಿಯತೆ ಇದೆ.. ಎಂಬೆಲ್ಲ ಕಾರಣಗಳಿಗೆ ಗರ್ಭಗುಡಿ ಪ್ರವೇಶ ಮಾಡುವುದು ತಪ್ಪು. ಆದರೆ, ನಿಯಮಾನುಸಾರ ವ್ರತ, ನಿಷ್ಠೆ ಪಾಲಿಸುತ್ತಿದ್ದರೆ ತಪ್ಪೇನೂ ಅಲ್ಲ. ವ್ರತ, ನಿಷ್ಠೆ, ನಿಯಮ ಪಾಲಿಸುವವರಿಗೆ ಜಾತಿ ಅಡ್ಡಿ ಬರುವುದಿಲ್ಲ. ದೇವರು ಜಾತಿಯನ್ನಂತೂ ನೋಡುವುದೇ ಇಲ್ಲ. ವ್ರತ, ನಿಯಮ ನಿಷ್ಠೆ ಪಾಲಿಸದೇ ಹೋದರೆ.. ವೈದಿಕ ಬ್ರಾಹ್ಮಣರಾದರೂ, ಜಂಗಮರಾದರೂ.. ಯಾವ ಜಾತಿಯವರಾದರೂ ಅಷ್ಟೇ. ದೋಷ ತಪ್ಪಿದ್ದಲ್ಲ.



