ದರ್ಶನ್, ತೂಗುದೀಪ ಶ್ರೀನಿವಾಸ್ ಅವರ ಮಗ. ಸ್ಟಾರ್ ನಟ. ವಿನೋದ್ ರಾಜ್, ನಟಿ ದಿ.ಲೀಲಾವತಿ ಅವರ ಮಗ. ಲೀಲಾವತಿ ಅವರನ್ನು ಕೊನೆಯ ದಿನಗಳಲ್ಲಿದ್ದಾಗ ದರ್ಶನ್ ಆಗಾಗ್ಗೆ ಹೋಗಿ ಭೇಟಿ ಮಾಡುತ್ತಿದ್ದರು. ಆರೋಗ್ಯ ವಿಚಾರಿಸುತ್ತಿದ್ದರು. ಹಾಗೆ ಬಂದಾಗಲೆಲ್ಲ ನಟಿ ಲೀಲಾವತಿ ʻಯಾವುದೇ ಕಾರಣಕ್ಕೂ ದರ್ಶನ್ʻನ ಬಿಟ್ಟುಕೊಡಬೇಡ. ಅದು ಕಷ್ಟಪಟ್ಟು ಬೆಳೆದು ಬಂದ ಜೀವʼ ಎಂದು ಮಗನಿಗೆ ಹೇಳುತ್ತಿದ್ದರಂತೆ.
ಕೊಲೆ ಕೇಸಿನಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು, ದರ್ಶನ್ ಅವರ ಪತ್ನಿ, ತಮ್ಮನ ಜೊತೆ ಭೇಟಿ ಮಾಡಿ ಬಂದ ಬಳಿಕ ವಿನೋದ್ ರಾಜ್ ಈ ಮಾತು ಹೇಳಿದ್ಧಾರೆ.
ಜೈಲಿನಲ್ಲಿ ಭೇಟಿ ಮಾಡಿದಾಗ..
ಏನ್ ಪರಿಸ್ಥಿತಿ ಆಗೋಯ್ತಲ್ಲಾ ಅಪ್ಪಾಜಿ
ಅಂದೆ..
ಅದಕ್ಕೆ ದರ್ಶನ್ ಏನ್ ಮಾಡೋಕ್ ಆಗುತ್ತಣ್ಣಾ.. ಅಂದ್ರು.. ಪಾಪ… ಏನು ಆಗಬೇಕು ಅನ್ನೋದು ಕಾಲಕ್ಕೆ, ವಿಧಿಗೆ ಮಾತ್ರ ಗೊತ್ತಿರುತ್ತದೆ.. ಹೀಗೆ ನೋವಿನಲ್ಲೇ ಹೇಳ್ತಾ ಹೋಗ್ತಾರೆ ವಿನೋದ್ ರಾಜ್.
ನಟ ವಿನೋದ್ ರಾಜ್ ಮತ್ತ ದರ್ಶನ್ ನಡುವಿನ ಬಾಂಧವ್ಯ ಹೊಸದೇನಲ್ಲ. ಲೀಲಾವತಿ ಅವರ ಕಡೆಯ ದಿನಗಳಲ್ಲಿ ದರ್ಶನ್, ವಿನೋದ್ ಅವರಿಗೆ ಧೈರ್ಯ ತುಂಬಿದ್ದರು. ದರ್ಶನ್ ಅವರ ಬಗ್ಗೆ ಈ ಹಿಂದೆ ಟೀಕೆ ಬಂದಾಗಲೂ ವಿನೋದ್ ಅವರ ಪರ ನಿಂತಿದ್ದರು. ಅಂತಹ ವಿನೋದ್ ರಾಜ್ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ಧಾರೆ.
‘’ನಾವು 5 ಜನ ಹೋಗಿದ್ವಿ. ಹೆಚ್ಚೇನೂ ಮಾತಾಡೋಕೆ ಆಗಲಿಲ್ಲ. ಕಷ್ಟ ಸುಖ ಮಾತನಾಡಿದ್ವಿ ಅಷ್ಟೇ. ವಿಜಯಲಕ್ಷ್ಮೀ ಅವರಿಗೂ ಏನೂ ಗೊತ್ತಾಗುತ್ತಿಲ್ಲ. ವಕೀಲರು ಮಾತನಾಡಿದರು ಅಷ್ಟೇ. ಜೈಲಿನ ನಿಯಮಗಳು ಕಟ್ಟುನಿಟ್ಟಾಗಿವೆ. ಇಷ್ಟು ಕಹಿಯಾಗಿ, ಅವರನ್ನ ನಾನು ಈ ಸ್ಥಿತಿಯಲ್ಲಿ ನೋಡಬೇಕಿತ್ತಾ ಅನಿಸ್ತಾಯಿದೆ. ನನ್ನ ಕಣ್ಣುಗಳನ್ನೇ ನಾನು ನಂಬೋಕೆ ಆಗಲಿಲ್ಲ. ಆದರೂ ನಂಬಬೇಕಾದ ಅನಿವಾರ್ಯತೆ ಆಗೋಯ್ತು. ಕಣ್ಣೀರು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಎಲ್ಲಾ ಅಭಿಮಾನಿಗಳು ಸಹ ಕಣ್ಣೀರು ಹಾಕುತ್ತಿದ್ದಾರೆ. ಇದು ಬಹಳ ನೋವಿನ ಸಂಗತಿ. ಒಳ್ಳೆಯ ತೀರ್ಪು ಬಂದು ದರ್ಶನ್ ಅವರು ಇದರಿಂದ ಹೊರಬರಲಿ. ಅವರ ಸಂಸಾರ ಹಾಗೂ ಅಭಿಮಾನಿಗಳ ಜೊತೆಗೆ ಸೇರಿಕೊಳ್ಳಲಿ. ತಲೆಯೆತ್ತಿ ನಡೆಯುವಂತಹ ದರ್ಶನ್ ಆಗಲಿ.. ಎಲ್ಲರಿಗೂ ದರ್ಶನ ಕೊಡಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ’’ ಎಂದಿದ್ದಾರೆ ವಿನೋದ್ ರಾಜ್.
ವಿನೋದ್ ರಾಜ್ ಅವರ ಜೊತೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ ಕೂಡಾ ಜೈಲಿಗೆ ಹೋಗಿದ್ದರು. ಜೊತೆಗೆ ವಕೀಲರೂ ಇದ್ದರು.
ಭೇಟಿ ನಂತರ ತಾಯಿ ಲೀಲಾವತಿ ಹೇಳಿದ್ದ ಮಾತನ್ನು ನೆನಪಿಸಿಕೊಂಡ ವಿನೋದ್ ರಾಜ್ ‘ಯಾವುದೇ ಕಾರಣಕ್ಕೂ ಅವ್ರನ್ನು ಬಿಟ್ಕೊಡ್ಬೇಡ. ತುಂಬ ಕಷ್ಟಪಟ್ಟು ಬೆಳೆದ ಜೀವ ಅದುʼ ಎಂದಿದ್ದರಂತೆ ಲೀಲಾವತಿ.
ಆದರೆ ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಎಂಬ ಮಾತನ್ನೇನು ಬಿಡದ ವಿನೋದ್ ರಾಜ್ ಎಲ್ಲರಿಗೂ ನ್ಯಾಯ ಸಿಗಲಿ ಎಂದು ಹೇಳಿದ್ಧಾರೆ.



