ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆ. ಇಂತಾದ್ದೊಂದು ಮಾತಿಗೆ ಚಾಲನೆ ನೀಡಿರುವುದು ಬೇರೆ ಇನ್ಯಾರೋ ಅಲ್ಲ, ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷದ ಪೂರೈಕೆ ಹಿನ್ನೆಲೆ ಕೆಪಿಸಿಸಿ ಘಟಕದಲ್ಲಿ ಮಾತನಾಡುತ್ತಿದ್ದ ಡಿಕೆ ಶಿವಕುಮಾರ್ ನಾನು ಸದ್ಯ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಇನ್ನು ಎಷ್ಟು ದಿನ ಇರ್ತೇನೆ ಅನ್ನೋದು ಗೊತ್ತಿಲ್ಲ ಎಂಬ ಮಾತು ಹೇಳಿದ್ದೇ ಇಷ್ಟೆಲ್ಲ ಚರ್ಚೆಗೆ ಕಾರಣ. ಅಷ್ಟೇ ಅಲ್ಲ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ. ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಅದು ಮುಖ್ಯ ಎಂದಿದ್ಧಾರೆ. ಆ ಮೂಲಕ ತನ್ನ ಅವಧಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದೆ ಎಂದು ಹೇಳಿದ್ಧಾರೆ.
ಹಾಗಾದರೆ.. ಇದ್ದಕ್ಕಿದ್ದಂತೆ ಈ ಮಾತು ಹೇಳುವುದಕ್ಕೆ ಏನು ಕಾರಣ ಎಂದು ನೋಡಿದರೆ.. ಅದು ಮರೆತು ಹೋಗುತ್ತಿರುವ ಮಾತನ್ನು ಚಾಲ್ತಿಯಲ್ಲಿಡುವ ಪ್ರಯತ್ನ ಎಂಬ ಮಾತು ಕೇಳಿ ಬರುತ್ತದೆ. ಅಂದರೆ.. ಅರ್ಥ ಏನು? ಕೇವಲ ಮಾತಿನಲ್ಲಷ್ಟೇ ಅಲ್ಲ, ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಇದ್ದಕ್ಕಿದ್ದಂತೆ ಡಿನ್ನರ್ ಪಾರ್ಟಿ ಆಯೋಜಿಸಿರುವುದೂ ಕೂಡಾ ಕುತೂಹಲ ಹುಟ್ಟಿಸಿದೆ. ಬುಧವಾರ ರಾತ್ರಿ ಸಚಿವರಿಗಾಗಿ ಆಯೋಜಿಸಿದ್ದ ಔತಣ ಕೂಟ ಹಾಗೂ ಅದಕ್ಕೆ ಮುನ್ನ ನಾನು ಇನ್ನೆಷ್ಟು ದಿನ ಕೆಪಿಸಿಸಿ ಅಧ್ಯಕ್ಷನಾಗಿ ಇರುತ್ತೇನೋ ಗೊತ್ತಿಲ್ಲ ಎಂಬ ಹೇಳಿಕೆಯೇ ಇದಕ್ಕೆಲ್ಲ ಕಾರಣ.
ಪಕ್ಷದ ನಂಬಲರ್ಹ ಮೂಲಗಳ ಪ್ರಕಾರ ಕನಿಷ್ಠ ಈ ವರ್ಷಾಂತ್ಯದವರೆಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಸಾಧ್ಯ. ಅದರಲ್ಲೂ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ಪ್ಲಾನ್ ಮಾಡಿರುವ ಈ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವುದು ಸಾಧ್ಯವಿಲ್ಲ. ಹೀಗಿದ್ದರೂ.. ಡಿ.ಕೆ. ಶಿವಕುಮಾರ್ ಅವರೇ ಇಂತಹದೊಂದು ಹೇಳಿಕೆ ನೀಡಿದ್ದು ಏಕೆ ಎಂಬ ಪ್ರಶ್ನೆಗೆ ಡಿಕೆ ದಡ್ಡರಂತೂ ಅಲ್ಲ ಎಂಬ ಉತ್ತರ ಸಿಗುತ್ತಿದೆ.
ಲೋಕಸಭಾ ಚುನಾವಣೆ ಪೂರ್ಣಗೊಳ್ಳುವವರೆಗೂ ನೀವೇ ಕೆಪಿಸಿಸಿ ಅಧ್ಯಕ್ಷ ಹುದ್ದೆ ನಿರ್ವಹಿಸಿ ಎಂಬ ಸೂಚನೆಯಂತೆ ಈಗ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬಂದೂ ನಾಲ್ಕು ವರ್ಷ ಆಗಿದೆ. ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ದಿ ಹಾಗೂ ಜಲಸಂಪನ್ಮೂಲ ಖಾತೆಯಂತಹ ಪ್ರಮುಖ ಖಾತೆಗಳಿವೆ. ಈಗ ತಾವು ಕೆಪಿಸಿಸಿ ಅಧ್ಯಕ್ಷ ಹುದ್ದೆ ಹೊಣೆಗಾರಿಕೆಯನ್ನು ಬೇರೆಯವರಿಗೆ ಬಿಟ್ಟುಕೊಡಲು ಸಿದ್ಧ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ ಡಿಕೆ. ವಾಸ್ತವವಾಗಿ ಅದರ ಹಿಂದಿರೋದು ಮರೆತು ಹೋಗಿರುವ ಮಾತನ್ನು ಮತ್ತೆ ನೆನಪಿಸಿವು ಪ್ರಯತ್ನ ಅಷ್ಟೆ ಎಂಬ ಮಾತುಗಳಿವೆ.
ಮರೆತು ಹೋಗಿರುವ ಆ ಮಾತು ಏನು?
ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ಹೇಳಿಕೆ ನೀಡುವ ಮೂಲಕ ಶಿವಕುಮಾರ್ ಸದ್ಯಕ್ಕೆ ನೇಪಥ್ಯಕ್ಕೆ ಸರಿದಿರುವ ಅಧಿಕಾರ ಹಂಚಿಕೆ ಸೂತ್ರದ ವಿಚಾರವನ್ನು ಜೀವಂತವಾಗಿಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ನ ಹಿರಿಯ ನಾಯಕರು. ಹೈಕಮಾಂಡ್ ಮಟ್ಟದಲ್ಲಿ ನಡೆದಿತ್ತು ಎನ್ನಲಾಗುವ ತಲಾ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸೂತ್ರದಂತೆ ತಮ್ಮ ಶ್ರಮಕ್ಕೆ ಅರ್ಹ ಕೂಲಿ ದೊರೆಯಬೇಕು. ಅದನ್ನು ನೆನಪಿಸುವ ಸಲುವಾಗಿಯೇ ಈ ಮಾತು ಹೇಳಿದ್ಧಾರೆ ಅನ್ನೋದು ಕಾಂಗ್ರೆಸ್ ಹಿರಿಯ ತಲೆಗಳ ವ್ಯಾಖ್ಯಾನ.
ಅಲ್ಲಿಗೆ ಈ ಹೇಳಿಕೆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಸಿಎಂ ಸಿದ್ದರಾಮಯ್ಯನವರಿಗೂ ಸಂದೇಶ ರವಾನಿಸಿದ್ದಾರೆ ಡಿಕೆ ಶಿವಕುಮಾರ್. ಅವರ ಸಿಎಂ ಆಗುವ ಕನಸು ಈಡೇರುತ್ತದಾ..?



