ಮಾಸ್ಟರ್ ಡಿಗ್ರಿ ಮುಗಿದ ಮೇಲೆ ಹಲವರು ಎಂಫಿಲ್ ಮಾಡ್ತಾರೆ. ಆದರೆ ಈ ಮಾಸ್ಟರ್ ಆಫ್ ಫಿಲಾಸಫಿಗೆ ಅರ್ಥವೇ ಇಲ್ಲ. ಅರ್ಹತೆಯೂ ಅಲ್ಲ. ಮಾನ್ಯತೆಯೂ ಇಲ್ಲ ಎಂಬ ವಿಷಯ ಈಗ ಬಹಿರಂಗವಾಗಿದೆ. ಅಂದಹಾಗೆ ಯುಜಿಸಿ ( ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಥವಾ ಯುನಿವರ್ಸಿಟಿ ಗ್ರ್ಯಾಂಟ್ ಕಮೀಷನ್ ) ಎಂಫಿಲ್ ರದ್ದು ಮಾಡಿ 2022ರಲ್ಲೇ ಆದೇಶ ಹೊರಡಿಸಿದೆ. ಆದರೂ ಕೆಲವು ಕಡೆ ಅರ್ಜಿ ಆಹ್ವಾನಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಕಟಣೆ ಹೊರಡಿಸಿದೆ.
ಕೆಲವು ವಿಶ್ವವಿದ್ಯಾಲಯಗಳು ಎಂಫಿಲ್ (ಮಾಸ್ಟರ್ ಆಫ್ ಫಿಲಾಸಫಿ) ಅಡ್ಮಿಷನ್‌ಗೆ ಅರ್ಜಿ ಆಹ್ವಾನಿಸುತ್ತಿವೆ. ಇದು ಯುಜಿಸಿ ಗಮನಕ್ಕೆ ಬಂದಿದೆ. ಹೀಗಾಗಿ ಎಂಫಿಲ್ ಪದವಿ ʻಮಾನ್ಯತೆ ಪಡೆದ ಪದವಿಯಲ್ಲʼ ಎನ್ನುವುದನ್ನು ಮತ್ತೊಮ್ಮೆ ಎಲ್ಲಾ ವಿಶ್ವವಿದ್ಯಾಲಯಗಳ ಗಮನಕ್ಕೆ ತರುತ್ತಿದ್ದೇವೆ ಎಂದು ಯುಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಯುಜಿಸಿ (ಪಿಎಚ್‌ಡಿ ಪದವಿ ಪ್ರಶಸ್ತಿಗಾಗಿ ಕನಿಷ್ಠ ಮಾನದಂಡಗಳು ಮತ್ತು ಕಾರ್ಯವಿಧಾನಗಳು) ನಿಯಮಗಳು, 2022 ರ ನಿಯಮಾವಳಿ ಸಂಖ್ಯೆ 14, ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಎಂಫಿಲ್ ಕಾರ್ಯಕ್ರಮವನ್ನು ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ” ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.
2023-24ರ ಶೈಕ್ಷಣಿಕ ವರ್ಷಕ್ಕೆ ಅಂತಹ ಯಾವುದೇ ಎಂಫಿಲ್‌ಗೆ ಅಡ್ಮೀಷನ್‌ಅನ್ನು ನಿಲ್ಲಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯೋಗವು ವಿಶ್ವವಿದ್ಯಾಲಯಗಳನ್ನು ಕೇಳಿದೆ. ಯಾವುದೇ ಎಂಫಿಲ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ವಿಶ್ವವಿದ್ಯಾನಿಲಯಗಳಿಂದ ಮಾಸ್ಟರ್ ಆಫ್ ಫಿಲಾಸಫಿ (ಎಂಫಿಲ್) ಕೋರ್ಸ್‌ಗಳನ್ನು ಮಾಡಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಈ ಎಚ್ಚರಿಕೆ ನೀಡಲಾಗಿದೆ. ಯುಜಿಸಿ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಕೆಲವು ವಿವಿಗಳು ಈಗಲೂ ಕೂಡ ಎಂಫಿಲ್ ಕೋರ್ಸ್ ನೀಡುತ್ತಿವೆ. ಹಾಗೂ ಅರ್ಜಿ ಆಹ್ವಾನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ.
ಯುಜಿಸಿ ಈ ಹಿಂದೆಯೇ ಎಂಫಿಲ್ ಪದವಿಯನ್ನು ಕಾನೂನುಬಾಹಿರ ಎಂದು ಘೋಷಿಸಿದ್ದು, ಎಂಫಿಲ್ ಕಾರ್ಯಕ್ರಮಗಳನ್ನು ನೀಡದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇದಲ್ಲದೆ, 2023-24ರ ಶೈಕ್ಷಣಿಕ ವರ್ಷಕ್ಕೆ ಎಂಫಿಲ್ ಕಾರ್ಯಕ್ರಮಕ್ಕೆ ಪ್ರವೇಶವನ್ನು ಸ್ಥಗಿತಗೊಳಿಸುವಂತೆ ವಿಶ್ವವಿದ್ಯಾಲಯಗಳಿಗೆ ನಿರ್ದೇಶನವನ್ನೂ ನೀಡಿತ್ತು.
ಅಂದಹಾಗೆ ಈಗಾಗಲೇ ಎಂಫಿಲ್ ಪಡೆದಿರುವವರು ಆತಂಕಗೊಳ್ಳಬೇಕಿಲ್ಲ. ಅದಕ್ಕೆ ಮಾನ್ಯತೆ ಇದೆ. ಆದರೆ ಈ ನೋಟಿಸ್ ಬಂದ ಮೇಲೂ ಎಂಫಿಲ್ ಮಾಡಿದವರಿಗೆ, ಯುಜಿಸಿ ನಿಷೇಧ ಹೇರಿದ ಮೇಲೆ ಎಂಫಿಲ್ ಮಾಡಿದ ಪದವೀಧರರಿಗೆ ಮಾನ್ಯತೆ ಇರುವುದಿಲ್ಲ.



