ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯಕ್ಕೆ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರು ಮೇಲಿಂದ ಮೇಲೆ ತಪ್ಪುಗಳನ್ನು ಮಾಡಿಕೊಳ್ತಾನೇ ಇದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ದರ್ಶನ್, ಅಲ್ಲಿ ದರ್ಬಾರ್ ಮಾಡಿದ್ದಕ್ಕಾಗಿಯೇ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಇದು ದರ್ಶನ್ ಅವರಿಗೆ ಯಾವ ಮಟ್ಟಿಗೆ ತೊಡಕುಂಟು ಮಾಡಿವೆ ಎಂದರೆ, ದರ್ಶನ್ ಅವರಿಗೆ ಜಾಮೀನು ಸಿಗುವುದು ಕಷ್ಟಕರವಾಗಲಿದೆ. ಅಭಿಮಾನಿಗಳಂತೂ ಮಾತು ಕೇಳುತ್ತಿಲ್ಲ. ತಾಳ್ಮೆಯಿಂದಿರಿ ಎಂಬ ಯಾರೊಬ್ಬರ ಮಾತುಗಳೂ ಅರ್ಥವಾಗುತ್ತಿಲ್ಲ. ತಮ್ಮ ಆಟಾಟೋಪಗಳೆಲ್ಲ ತಮ್ಮ ಅಭಿಮಾನದ ನಟನಿಗೇ ತಿರುಗುಬಾಣವಾಗುತ್ತವೆ ಎಂದು ಹೇಳಿದರೂ ತಿಳಿದುಕೊಳ್ತಿಲ್ಲ. ಇನ್ನು ದರ್ಶನ್ ಕೂಡಾ ಅಷ್ಟೇ. ಹಾಗೆಯೇ ನಡೆದುಕೊಳ್ಳುತ್ತಿದ್ದು, ಇದೀಗ ವಕೀಲರೊಬ್ಬರು ದರ್ಶನ್ ಅವರಿಗೆ ನೇರವಾಗಿ ಪತ್ರ ಬರೆದು ಬುದ್ದಿವಾದ ಹೇಳಿದ್ದಾರೆ.
ಪತ್ರದಲ್ಲಿ ದರ್ಶನ್ ಅವರಿಗೆ ಬುದ್ದಿಮಾತು ಹೇಳಲಾಗಿದೆ.
ದರ್ಶನ್ ಅವರೇ..
ತಾವೀಗ ಕೊಲೆ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿದ್ದೀರ. ಈ ವೇಳೆ ಒಳ್ಳೆಯ ರೀತಿಯಲ್ಲಿ ಇರಬೇಕು. ವರ್ತಿಸಬೇಕು. ಮಾಧ್ಯಮಗಳ ಕ್ಯಾಮೆರಾ ಎದುರು ಮಧ್ಯದ ಬೆರಳು ತೋರಿಸುವ ಅಸಹ್ಯ ಸಂಜ್ಞೆ ಮಾಡುವುದು, ಟಿವಿಗಾಗಿ ಜೈಲು ಸಿಬ್ಬಂದಿ ಹಾಗೂ ಜೈಲಾಧಿಕಾರಿಗಳ ಜೊತೆಗೂ ಕಿರಿಕ್ ಮಾಡಿಕೊಳ್ಳೋದು, ಜೈಲಲ್ಲಿ ಸಣ್ಣಪುಟ್ಟ ವಿಷಯಕ್ಕೂ ಜಗಳ ಮಾಡ್ಕೊಳ್ಳೋದು.. ಹೀಗೆಲ್ಲ ಮಾಡ್ಕೋಬೇಡಿ. ಜೈಲಲ್ಲಿ ಯಾವುದೇ ರೀತಿಯಲ್ಲಿ ಕಾಂಟ್ರವರ್ಸಿ ಮಾಡ್ಕೋಬೇಡಿ. ಪದೇ ಪದೇ ಕಿರಿಕ್, ಜಗಳ ಮಾಡಿಕೊಳ್ತಾ ಇದ್ರೆ, ಅದು ಜಾಮೀನು ಅರ್ಜಿ ವಿಚಾರಣೆ ವೇಳೆ ತೊಂದರೆಯಾಗುತ್ತದೆ. ಕಾನೂನು ಹೋರಾಟಕ್ಕೆ ತೊಡಕು ಆಗುವ ಸಾಧ್ಯತೆ ಇದೆ. ಈ ರೀತಿಯ ವರ್ತನೆ, ನಡವಳಿಕೆ ನಿಮಗೇ ತೊಂದರೆಯಾಗಿ ಕಾಡಲಿದೆ ಎಂದು ಎಚ್ಚರಿಸಿದ್ದಾರೆ. ನಿಮ್ಮ ಅಭಿಮಾನಿಗಳ ವರ್ತನೆಯೂ ಕೂಡಾ ಜಾಮೀನಿಗೆ ತೊಂದರೆಯಾಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಈ ನಡುವೆ ದರ್ಶನ್ ಬಳ್ಳಾರಿ ಜೈಲಿನಲ್ಲಿಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ ವೇಳೆ ದೇವರ ಪ್ರಸಾದ ಕೊಟ್ಟಿದ್ದರು. ಡ್ರೈಫ್ರೂಟ್ಸ್, ವಿಟಮಿನ್ ಮಾತ್ರೆಗಳನ್ನೂ ಕೂಡಾ ಕೊಟ್ಟಿದ್ದರು. ಅಪರಿಚಿತ ವ್ಯಕ್ತಿಯೊಬ್ಬರು ಜೈಲಿನಲ್ಲಿರುವ ದರ್ಶನ್ ಹೆಸರಿನಲ್ಲಿ’ಹನುಮ ನಾಮ’ ಮತ್ತು ‘ಕಥೆ ಪುಸ್ತಕ’ ಪಾರ್ಸೆಲ್ ಬಂದಿದೆ. ಪುಸ್ತಕದೊಂದಿಗೆ ಚೀಟಿಯೊಂದರಲ್ಲಿ, ”ಸರ್ವ ಸಂಕಷ್ಟಕ್ಕೆ ಹನುಮಂತನೇ ಪರಿಹಾರ, ಹನುಮನ ಆಶೀರ್ವಾದ ನಿಮ್ಮ ಮೇಲಿದೆ, ಪುಸ್ತಕ ಓದಿರಿ… ಸಂಕಟ ಬಂದಾಗ ಹನುಮನಾಮ ಸ್ಮರಣೆ ಮಾಡಿ ಒಳ್ಳೆಯದಾಗುತ್ತದೆ,” ಎಂದು ಬರೆಯಲಾಗಿದೆ.
ಆದರೆ ಜೈಲಿನಲ್ಲಿ ವಿಟಮಿನ್ ಮಾತ್ರೆಗಳನ್ನುನೀಡಲು ಜೈಲಾಧಿಕಾರಿಗಳು ನಿರಾಕರಿಸಿದ್ದಾರೆ. ವೈದ್ಯರ ಪರಿಶೀಲನೆ ಬಳಿಕ, ಅವರ ಸೂಚನೆ ಮೇರೆಗೆ ಮಾತ್ರೆಗಳನ್ನು ನೀಡುವುದಾಗಿ ದರ್ಶನ್ ಅವರಿಗೆ ಜೈಲಿನ ಸಿಬ್ಬಂದಿ ತಿಳಿಸಿದ್ದಾರೆ. ಮತ್ತೊಂದೆಡೆ, ಕೊಲೆ ಆರೋಪಿ ನಟ ದರ್ಶನ್ ಹಾಗೂ ಕುಖ್ಯಾತ ರೌಡಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ಕಲ್ಪಿಸಿದ ಪ್ರಕರಣದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ರಾಜ್ಯ ಸರಕಾರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ವಿವಿಧ ಕಾರಾಗೃಹಗಳ ಜೈಲರ್‌ಗಳು, ಮುಖ್ಯ ವೀಕ್ಷಕರು, ವೀಕ್ಷಕರು, ವಾರ್ಡರ್‌ಗಳು ಸೇರಿದಂತೆ 43 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಒದಗಿಸಿದ ಆರೋಪದ ಹಿನ್ನೆಲೆ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಟಿವಿಗಾಗಿ ವಾರದಿಂದ ಜೈಲಾಧಿಕಾರಿಗಳಿಗೆ ನಿತ್ಯ ಪ್ರಶ್ನೆ ಮಾಡುತ್ತಿದ್ದು, ಟಿವಿ ದುರಸ್ತಿ ಹಿನ್ನೆಲೆ ಸೆಲ್‌ಗೆ ಅಳವಡಿಸಲು ಜೈಲಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಆದರೆ ಟಿವಿ ಸರಿ ಇಲ್ಲ ಎಂದಾಕ್ಷಣ ಅಬ್ಬರಿಸಿ ಬೊಬ್ಬಿರಿಯುತ್ತಿರುವ ದರ್ಶನ್ ಅವರ ವರ್ತನೆ, ಅವರ ಜಾಮೀನಿಗೆ ತೊಂದರೆಯಾಗಲಿದೆ. ಅಲ್ಲದೆ ಪದೇ ಪದೇ ಪೊಲೀಸರು ದರ್ಶನ್ ಅವರು ತಮ್ಮ ಅಭಿಮಾನಿಗಳ ಮೂಲಕ ಸಾಕ್ಷಿಗಳನ್ನು ಬೆದರಿಸುತ್ತಿದ್ದಾರೆ ಎಂಬ ಮಾತು ಹೇಳುತ್ತಿರುವುದು ಹಾಗೂ ದರ್ಶನ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ವಿರುದ್ಧ ಧ್ವನಿ ಎತ್ತಿದವರ ಮಾನ ಹರಾಜು ಹಾಕುತ್ತಿರುವುದು ಎಲ್ಲವೂ ಜಾಮೀನು ಅರ್ಜಿ ವಿಚಾರಣೆ ವೇಳೆ ಲೆಕ್ಕಕ್ಕೆ ಬರಲಿದೆ.



