ರಾಜ್ಯದಲ್ಲೀಗ ʻಸಿಎಂ ಅಧಿಕಾರ ಹಸ್ತಾಂತರʼದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಉಳಿಸಿಕೊಳ್ಳೋಕೆ ಸಿದ್ದು ಟೀಂನವರು.. ಪಡೆದುಕೊಳ್ಳೋಕೆ ಡಿಕೆ ಟೀಮಿನವರು ಪ್ರಯತ್ನ ಮಾಡ್ತಾನೇ ಇದ್ದಾರೆ. ವಾಸ್ತವವಾಗಿ ಹೇಳಬೇಕೆಂದರೆ ಡಿಕೆ ಟೀಂನಲ್ಲಿ ಮೂರ್ನಾಲ್ಕು ಮಂದಿ ಬಿಟ್ಟರೆ.. ಸಂಖ್ಯಾಬಲ ಕಡಿಮೆ. ಆದರೆ.. ಸಿದ್ದು ಟೀಂ ಹಾಗಲ್ಲ. ನಂಬರ್ ಸ್ವಲ್ಪ ಜಾಸ್ತಿಯೇ ಇದೆ. ಜೊತೆಗೆ ಹಲವು ಜಾತಿ/ಸಮುದಾಯಗಳ ನಾಯಕರು ಸಿದ್ದು ಬೆನ್ನಿಗೆ ನಿಂತಿದ್ದಾರೆ. ಇವರೆಲ್ಲರೂ ದೆಹಲಿಗೆ ಹೋಗಲು ರೆಡಿಯಾಗುತ್ತಿರುವಾಗಲೇ.. ದೆಹಲಿಗೆ ಬರಬೇಡಿ ಎಂಬ ಕ್ಲಿಯರ್ ಸಿಗ್ನಲ್ ಕೊಟ್ಟಿದ್ದಾರೆ ರಾಹುಲ್ ಗಾಂಧಿ.
ಸಿಎಂ ಸೀಟಿನ ಜೊತೆ ಜೊತೆಗೆ ಈ ತಿಂಗಳ ಅಂತ್ಯದಲ್ಲಿ ಸಂಪುಟಕ್ಕೆ ಸರ್ಜರಿಯಾಗಲಿದೆ ಎಂಬ ಸುದ್ದಿಯೂ ಇದೆ. ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿರುವ ನಡುವೆಯೇ.. ದಿಲ್ಲಿಗೆ ಹೊರಟು ನಿಂತಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಬಿಹಾರ ಚುನಾವಣೆ ಇರುವುದರಿಂದ ಯಾರೂ ದಿಲ್ಲಿಗೆ ಬರುವ ಅಗತ್ಯ ಇಲ್ಲ ಎಂಬ ಸ್ಪಷ್ಟ ಸಂದೇಶ ಬಂದಿದೆ. ಎಐಸಿಸಿ ಕೇಂದ್ರ ಕಚೇರಿ ‘ಇಂದಿರಾ ಭವನ’ದ ಡೋರ್, ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಕ್ಲೋಸ್ ಆಗಿದೆ.
ರಾಹುಲ್ ಗಾಂಧಿ ಬಿಹಾರ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ , ರಣದೀಪ್ ಸಿಂಗ್ ಸುರ್ಜೇವಾಲಾ ಆದಿಯಾಗಿ ಹೈಕಮಾಂಡ್‌ನ ಪ್ರಮುಖರೆಲ್ಲ ಬಿಹಾರ ಚುನಾವಣೆ ಕೆಲಸದಲ್ಲಿಯೇ ಬ್ಯುಸಿ ಇದ್ದಾರೆ. ಬಿಹಾರ ಚುನಾವಣೆ ಬಳಿಕವೇ ಕರ್ನಾಟಕದ ವಿಚಾರ ಕೈಗೆತ್ತಿಕೊಳ್ಳೋದು ಅನ್ನೋದು ದೆಹಲಿ ಕಾಂಗ್ರೆಸ್ ವಾದ.
ಹಿರಿಯ ಸಚಿವರು, ಶಾಸಕರು ದಿಲ್ಲಿಯತ್ತ ಹೆಜ್ಜೆ ಹಾಕಿದ್ದರು. ಬಿಹಾರ ಚುನಾವಣೆ ಮೊದಲ ಹಂತದ ಪ್ರಚಾರ ಆರಂಭಕ್ಕೂ ಮುನ್ನವೇ ಕೆಲವರು ದಿಲ್ಲಿಗೆ ತೆರಳಿ ಹೈಕಮಾಂಡ್ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದರು. ಈಗ ಪುನಃ ದಿಲ್ಲಿಗೆ ಹೋಗಲು ಮುಂದಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಕೆಸಿ ವೇಣುಗೋಪಾಲ್ ಅವರೇ, ಯಾರೂ ದಿಲ್ಲಿಗೆ ಬರುವ ಅಗತ್ಯವಿಲ್ಲ. ಒಂದು ವೇಳೆ ಯಾರಾದರೂ ದಿಲ್ಲಿಗೆ ಬಂದರೆ ಭೇಟಿಗೆ ಅವಕಾಶವೂ ಸಿಗುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ. ವೇಣುಗೋಪಾಲ್ ಅವರಿಂದ ಈ ಮಾತು ಹೇಳಿಸಿರುವುದು ಖುದ್ದು ರಾಹುಲ್ ಗಾಂಧಿಯವರೇ ಎನ್ನುವುದು ವಿಶೇಷ.
ನವೆಂಬರ್ 19ರಂದು ರಾಹುಲ್ ಗಾಂಧಿ ಬೆಂಗಳೂರಿಗೆ :
ನ.19 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಅವರ ಬಳಿ ನ.19 ಮತ್ತು 20ಕ್ಕೆ ಸಮಯ ಕೊಡಿ ಎಂದು ಕೇಳಿದ್ದಾರಂತೆ ಲಕ್ಷ್ಮೀ ಹೆಬ್ಬಾಳ್ಕರ್. ಎರಡರಲ್ಲಿ ಒಂದು ದಿನ ಬಂದೇ ಬರುತ್ತೇನೆ ಎಂದು ಭರವಸೆ ಕೊಟ್ಟಿದ್ದಾರಂತೆ ರಾಹುಲ್ ಗಾಂಧಿ.
ಅಂಗನವಾಡಿಗಳನ್ನು ಪ್ರಥಮ ಬಾರಿಗೆ ಮೈಸೂರಲ್ಲಿ ಆರಂಭ ಮಾಡಿದ್ದೇ ಇಂದಿರಾ ಗಾಂಧಿ. ಎಲ್ಲಾ ಬಡ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಕೊಡಬೇಕು ಎಂದು ಆರಂಭಿಸಿದ್ದ ಯೋಜನೆಗೆ ಐವತ್ತು ವರ್ಷ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್.



