ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇತ್ತೀಚೆಗೆ ಸುದ್ದಿಯಾಗಿದ್ದರು. ರಾಜೀನಾಮೆ ಕೊಟ್ಟು, ಹೇಳಿಕೆ ಕೊಟ್ಟು, ಅದು ಹಾಗಲ್ಲ.. ಹೀಗೆ ಎಂದು ಸುದ್ದಿ ಮಾಡಿದ್ದ ಮಾಧ್ಯಮಗಳದ್ದೇ ತಪ್ಪು ಎಂದು ದೂರಿದ್ದರು. ಇಂತಹ ಎಡವಟ್ಟುಗಳಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಎಂಬುದು ಶಕ್ತಿಯಿಲ್ಲದಂತಾಗಿ ಹೋಗಿದೆ ಎನ್ನುವುದನ್ನು ಬಿಜೆಪಿಯ ಕಾರ್ಯಕರ್ತರೂ ಒಪ್ಪಿಕೊಳ್ತಾರೆ. ಹೀಗಾಗಿಯೇ ಇದೀಗ ಹೊನ್ನಾಳಿಯಲ್ಲಿ ಸೋಲು ಕಂಡಿರುವ ರೇಣುಕಾಚಾರ್ಯ ರೆಬಲ್ ಆಗಿದ್ದಾರೆ. ವಿಶೇಷವೆಂದರೆ, ಇನ್ನು ಮುಂದೆ ಯಾರೂ ಬಹಿರಂಗವಾಗಿ ಮಾತನಾಡಬಾರದು. ಬಿಜೆಪಿ ವೇದಿಕೆಯಲ್ಲಿಯೇ ಇದರ ಚರ್ಚೆಯಾಗಬೆಕು. ಇಲ್ಲದೆ ಹೋದರೆ ಅಶಿಸ್ತು ಎಂದು ಪರಿಗಣಿಸುತ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ ನಂತರ.
ಬಿಜೆಪಿಯನ್ನು ಕಟ್ಟಿದವರು ಯಡಿಯೂರಪ್ಪ. ಅಂತಹವರನ್ನು ದೂರವಿಟ್ಟಿರಿ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮೊದಲಾದವರನ್ನು ಟೀಕೆ ಮಾಡುವುದು ಪಕ್ಷ ಮೆಚ್ಚುವ ಕೆಲಸವಾ? ಹಾಗೆ ಟೀಕೆ ಮಾಡಿದವರನ್ನು ಟೀಕೆ ಮಾಡುವುದು ಪಕ್ಷದ್ರೋಹವಾ ಎಂದು ಪ್ರಶ್ನಿಸಿದ್ದಾರೆ ರೇಣುಕಾಚಾರ್ಯ. ಬಿಜೆಪಿ ಪಕ್ಷವನ್ನು ಹಗಲು ರಾತ್ರಿ ಕಟ್ಟಿದ ಹಿರಿಯರಾದ ಯಡಿಯೂರಪ್ಪ, ದಿವಂಗತ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ನವರದ್ದು ಬಹುದೊಡ್ಡ ಪಾತ್ರವಿದೆ. ಅಂಥವರನ್ನು ಚುನಾವಣಾ ಸಮಯದಲ್ಲಿ ಕಡೆಗಣಿಸಿದ್ದು. ಬಿಜೆಪಿಗೆ ನಷ್ಟವಾಯಿತು ಎಂದಿದ್ದಾರೆ ರೇಣುಕಾಚಾರ್ಯ.
ನಿರಾಣಿಯವರಂತೂ ಯತ್ನಾಳ್ ಅವರಿಂದಲೇ ಎಲ್ಲವೂ ಹಾಳಾಯಿತು ಎನ್ನುತ್ತಿದ್ದಾರೆ. ಸಿಎಂ ಪೋಸ್ಟಿಗೆ ಸಾವಿರಾರು ಕೋಟಿ ಹಣ ಕೊಡಬೇಕು ಎಂಬ ಯತ್ನಾಳ್ ಹೇಳಿಕೆ, ಪಕ್ಷದ ಇಮೇಜ್`ನ್ನೇ ಹಾಳು ಮಾಡಿತು. ಅವರ ವಿರುದ್ಧ ಸಣ್ಣದೊಂದು ಕ್ರಮವೂ ಆಗಲಿಲ್ಲ ಎನ್ನುವುದು ನಿರಾಣಿ ಮಾತು.
ಅದು ನಿಜವೂ ಹೌದು. ಹೀಗಾಗಿಯೇ ಬಿಜೆಪಿಯಲ್ಲಿ ಶಿಸ್ತು ಮರೆಯಾಯಿತು. ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ಈಶ್ವರಪ್ಪ ವಿರುದ್ಧ, ಬಿಎಸ್`ವೈ, ನಿರಾಣಿ, ಶೋಬಾ ವಿರುದ್ಧ ಟೀಕೆ ಮಾಡಿದ ಯತ್ನಾಳ್ ವಿರುದ್ಧ, ಶೋಭಾ ಕರಂದ್ಲಾಜೆಯವರನ್ನು ಟೀಕಿಸಿದವರ ವಿರುದ್ಧ, ಅಡ್ಜಸ್ಟ್`ಮೆಂಟ್ ಹೇಳಿಕೆ ಕೊಟ್ಟಿದ್ದ ಸಿಪಿ ಯೋಗೀಶ್ವರ್ ವಿರುದ್ಧ, ರಾಮದಾಸ್ ವಿರುದ್ಧ ಗುಡುಗುತ್ತಿದ್ದ ಪ್ರತಾಪ್ ಸಿಂಹ ವಿರುದ್ಧ, ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಟ್ಟ ವಿ.ಸೋಮಣ್ಣ ವಿರುದ್ಧ.. ಹೀಗೆ ಬಿಜೆಪಿ ಅಧ್ಯಕ್ಷರು ತಣ್ಣಗಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳದೆ ವೀಕ್ ಆದ ಪರಿಣಾಮವೇ, ಈಗ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರೂ, ಯಾರೂ ಅವರ ಮಾತು ಕೇಳುತ್ತಿಲ್ಲ. ಯಥಾ ಅಧ್ಯಕ್ಷ.. ತಥಾ ಕಾರ್ಯಕರ್ತ.



