ನಮ್ಮನ್ನು ಕುಡುಕರು ಕುಡುಕರು ಎಂದು ಕರೆಯಬೇಡಿ. ಆ ಪದವನ್ನು ಮೊದಲು ತೆಗೆದು ಹಾಕಿ. ಇದು ಮದ್ಯಪಾನ ಪ್ರಿಯರ ಮೊದಲ ಬೇಡಿಕೆ. ಅಷ್ಟೇ ಅಲ್ಲ, ಕುಡುಕ’ ಎಂಬ ಪದ ನಿಷೇಧಿಸಿ ಮದ್ಯ ಪ್ರಿಯರು ಎಂದು ಮಾಡಬೇಕು ಹಾಗೂ ಒಬ್ಬರಿಗೆ ಒಂದು ಕ್ವಾರ್ಟರ್ ನಿಗದಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ರಾಜ್ಯ ಮದ್ಯಪಾನ ಪ್ರಿಯರ ಸಂಘದವರು. ಇವರ ಬೇಡಿಕೆ ಕೇಳಿ ಸಚಿವ ಸಂತೋಷ್ ಲಾಡ್ ಶಾಕ್ ಆಗಿದ್ದಾರೆ. ಅದಕ್ಕೆ ಕಾರಣ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಪ್ರತಿಭಟನೆ ಹಾಗೂ ಅವರ ಬೇಡಿಕೆಗಳ ಪಟ್ಟಿ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಪ್ರತಿಭಟನೆ ಗಮನಸೆಳೆದಿದೆ. ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ..’ ಎನ್ನುವ ಘೋಷವಾಕ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಡುಕರು ಅಲ್ಲಲ್ಲ.. ಮದ್ಯಪಾನ ಪ್ರಿಯರು ಸಾಕಷ್ಟು ಬೇಡಿಕೆಗಳನ್ನು ಸಂತೋಷ್ ಲಾಡ್ ಅವರ ಮುಂದೆ ಇಟ್ಟಿದ್ದಾರೆ. ಈ ಬೇಡಿಕೆಗಳನ್ನು ಆಲಿಸಿದ ಸಂತೋಷ್ ಲಾಡ್ ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಅವರ ಪ್ರಮುಖ 11 ಬೇಡಿಕೆಗಳು ಇಲ್ಲಿವೆ.
ಮದ್ಯಪಾನ ಪ್ರಿಯರ ಬೇಡಿಕೆಗಳ ಪಟ್ಟಿ ಹೀಗಿದೆ
- ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು
- ಮದ್ಯ ಮಾರಾಟದಿಂದ ಬರುವ ಆದಾಯದ ಶೇಕಡ 10 ರಷ್ಟು ಮೀಸಲಿಡಬೇಕು
- ಲಿವರ್ ಸಮಸ್ಯೆಯಿಂದ ಬಳಲುವವರಿಗೆ ಸರ್ಕಾರ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡಿಸಬೇಕು
- ‘ಕುಡುಕ’ ಎಂಬ ಪದ ನಿಷೇಧಿಸಬೇಕು. ನಮ್ಮನ್ನು ಮದ್ಯ ಪ್ರಿಯರು ಎಂದು ಗೌರವದಿಂದ ಕರೆಯುವಂತೆ ಮಾಡಬೇಕು
- ಒಬ್ಬರಿಗೆ ಒಂದು ಕ್ವಾರ್ಟರ್ ನಿಗದಿ ಮಾಡಬೇಕು
- ಬಾರ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು
- ಬಾರ್‌ಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು
- ಮದ್ಯಪ್ರಿಯರ ಭವನ ಸ್ಥಾಪಿಸಬೇಕು
- ಡಿಸೆಂಬರ್ 31 ಮದ್ಯಪಾನ ಪ್ರಿಯರ ದಿನ ಎಂದು ಘೋಷಣೆ ಮಾಡಬೇಕು
- ಮದ್ಯ ಸೇವಿಸಿ ಮೃತಪಟ್ಟರೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು
- ಮದ್ಯಪಾನ ಪ್ರಿಯರ ಕುಟುಂಬದಲ್ಲಿ ವಿವಾಹವಾದರೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು
ಮದ್ಯದ ದರ ಏರಿಕೆಗೂ ವಿರೋಧ : ಇನ್ನೊಂದೆಡೆ ಮದ್ಯದ ದರ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರಾಜ್ಯ ಮದ್ಯ ಪ್ರೇಮಿಗಳ ಯಾನೆ ಕುಡುಕರ ಸಂಘದಿಂದ ಪತ್ರ ಬರೆಯಲಾಗಿದೆ. ಬಡವರ ಬ್ರಾಂಡಿನ ಮದ್ಯದ ಸುಂಕ ಕಡಿಮೆ ಮಾಡಿ ಎಂದು ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲಾ ವರ್ಗದವರು ಅಹಾರ ಸಂಸ್ಕೃತಿಯ ಭಾಗವಾಗಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಮದುವೆ, ಹಬ್ಬ ಹರಿದಿನಗಳಲ್ಲಿ ಅರಾಧನೆ ಪದ್ದತಿಯಲ್ಲಿ, ಸಂತೋಷ ಕೂಟದಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆ ಮಾಡುತ್ತಿದ್ದಾರೆ. ಸುರಪಾನ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಇದರಿಂದ ಸರಕಾರಕ್ಕೆ ಸಾವಿರಾರು ಕೋಟಿ ಸರಕಾರಕ್ಕೆ ಅದಾಯ ಬರುತ್ತಿದೆ. ಇಷ್ಟೆಲ್ಲಾ ಅದಾಯ ಬರುತ್ತಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬಾ ದುಃಖಕರ ವಿಷಯ. ಒಬ್ಬ ಬಿಪಿಎಲ್ ಕಾರ್ಡ್ ಹೊಂದಿದವನ ಅದಾಯ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಮದ್ಯ ಪ್ರೇಮಿ ದಿನಕೂಲಿ ನೌಕರ ನಿತ್ಯ ಸರಾಸರಿ ಕ್ವಾರ್ಟರ್ ಕುಡಿದರೂ, ಅವನಿಗೆ ದಿನಕ್ಕೆ 200 ರಿಂದ 250 ರೂಪಾಯಿ ಖರ್ಚಾಗುತ್ತದೆ. ತಿಂಗಳಿಗೆ 7500, ವಾರ್ಷಿಕ 90,000 ರೂಪಾಯಿ ಬೇಕಾಗುತ್ತದೆ. ಇದರಿಂದ ಮದ್ಯಮ ವರ್ಗ ಮತ್ತು ಬಡವರಿಗೆ ಅರ್ಥಿಕವಾಗಿ ಹೊರೆಯಾಗಲಿದೆ. ಅದ್ದರಿಂದ ಮದ್ಯದ ಮೇಲಿನ ಸುಂಕ ದರ ಹೆಚ್ಚಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಎಂದು ಮುಖ್ಯಮಂತ್ರಿಗಳು, ಅಬಕಾರಿ ಇಲಾಖೆ ಸಚಿವರು, ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.



