ಕತ್ತೆಗಳು ಸಾರ್.. ಲಕ್ಷ ಲಕ್ಷದ ಕತ್ತೆಗಳು : ಡಾಂಕಿ ಬಿಸಿನೆಸ್ ಡಿಮ್ಯಾಂಡ್. ತಿಂಗಳಿಗೆ ೬೦ ಸಾವಿರ ಫಿಕ್ಸ್..!
ಅತ್ತೆಗೊಂದು ಕಾಲ.. ಕತ್ತೆಗೊಂದು ಕಾಲ.. ಎಂಬ ಗಾದೆಯೇ ಸುಳ್ಳಾಗುವ ಕಾಲ ಬಂದಿದೆ. ಕತ್ತೆಗಳಿಗೂ ಡಿಮ್ಯಾಂಡ್ ಬಂದಿದೆ. ಕತ್ತೆಗಳು ಸಾರ್.. ಕತ್ತೆಗಳು.. ಎಂದು ಕಾಮಿಡಿ ಮಾಡುವಂತಿಲ್ಲ. ಕತ್ತೆಗಳನ್ನು ಗೌರವಪೂರ್ವಕವಾಗಿಯೇ ಸರ್.. ಎಂದು ಕರೆಯಬೇಕು. ಹೌದು, ಮೀಸೆ ಹೊತ್ತ ಗಂಡಸಿಗಷ್ಟೇ ಡಿಮ್ಯಾಂಡ್ ಅಲ್ಲ.. ಕತ್ತೆಗಳಿಗೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ.
ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ಬುದ್ಧಿ ಚುರುಕಾಗುತ್ತೆ ಎನ್ನುವ ನಂಬಿಕೆ ಗೊತ್ತೇ ಇದೆ. ಆ ನಂಬಿಕೆಯೇ ಈ ಕತ್ತೆಗಳಿಗೆ ಡಿಮ್ಯಾಂಡ್ ಬರೋಕೆ ಕಾರಣ. ತಿಂಗಳಿಗೆ 60 ರಿಂದ 70 ಸಾವಿರ ಲಾಭ ಪಡೆಯಬಹುದಾದ ಅವಕಾಶ ಯಾರು ತಾನೇ ಮಿಸ್ ಮಾಡ್ಕೋತಾರೆ.. ಹೇಳಿ..?
ಜನ್ನಿ ಮಿಲ್ಕ್ ಎಂಬ ಕಂಪನಿ 3 ಲಕ್ಷ ಕೊಟ್ಟರೆ ಮೂರು ಕತ್ತೆಗಳು ಮತ್ತು ಮೂರು ಕತ್ತೆ ಮರಿ ಕೊಡ್ತಿದೆ. ಜನ್ನಿ ಮಿಲ್ಕ್ ಕಂಪನಿಯ ರಾಜ್ಯದ ಏಕೈಕ ಕಚೇರಿ ಹೊಸಪೇಟೆಯಲ್ಲಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮೂಲ ಕಚೇರಿ ಹೊಂದಿದೆ. ಈ ಕಂಪನಿ 500 ರೂ. ಬಾಂಡ್ ಮೇಲೆ ಅಗ್ರಿಮೆಂಟ್ ಮಾಡಿಸಿಕೊಂಡು 3 ಲಕ್ಷಕ್ಕೆ ಮೂರು ಕತ್ತೆಗಳು 3 ಮರಿ ಕತ್ತೆಗಳು ಕೊಡ್ತಿದೆ. ಒಂದು ಕತ್ತೆ ಒಂದು ದಿನಕ್ಕೆ ಎರಡು ಲೀಟರ್ ಹಾಲು ಕೊಡುತ್ತಿದೆ. ಒಂದು ಲೀಟರ್ ಕತ್ತೆ ಹಾಲಿನ ಬೆಲೆ 2736 ರೂ. ಒಂದು ಕತ್ತೆ ದಿನಕ್ಕೆ ಎರಡು ಲೀಟರ್ ಹಾಲು ಕೊಡುತ್ತದೆ. ತಿಂಗಳಿಗೆ 60-70 ಸಾವಿರ ರೂಪಾಯಿ ಲಾಭ ಬರುತ್ತಿದೆ. ಇದು ಕತ್ತೆಗಳ ಫಾರ್ಮ್ ನಡೆಸುತ್ತಿರುವ ರೈತರ ಮಾತು.
ಮೂರು ಕತ್ತೆಗಳು, ಮೂರು ಕತ್ತೆ ಮರಿಗಳು ಸೇರಿ ಒಂದು ಯೂನಿಟ್ ಅಂತೆ. ಇದ್ರಂತೆ 20 ಯುನಿಟ್ ಈಗಾಗಲೇ ಮಾರಾಟವಾಗಿವೆ. ಸದ್ಯ ಕತ್ತೆ ಹಾಲಿನ ಲಾಭ ನೋಡಿ, ರೈತರು ಕತ್ತೆಗಳ ಖರೀದಿ ಭರಾಟೆಗೆ ಮುಂದಾಗಿದ್ದಾರೆ. ರಾಜಸ್ಥಾನ ಮತ್ತು ಹೊರ ರಾಜ್ಯಗಳಿಂದ ಕತ್ತೆಗಳನ್ನು ತಂದು ಮಾರುವವರೂ ಹೆಚ್ಚಾಗಿದ್ದಾರೆ.
ಮತ್ತೊಂದೆಡೆ ಈ ಬಗ್ಗೆ ಕೆಲ ರೈತರು ಇದರ ಬಗ್ಗೆ ನಮಗೆ ಅನುಮಾನ ಇದೆ ಅಂತ ಹೇಳಿದ್ದಾರೆ. ಹಾಗೂ ಇನ್ನೂ ಕೆಲವರು ಇದು ನಮಗೆ ಲಾಭವಿದೆ ಎಂದಿದ್ದಾರೆ. ಇನ್ನೂಕತ್ತೆಗಳ ಖರೀದಿಗೆ ರೈತರು ಮುಗಿ ಬೀಳುತ್ತಿದ್ದಂತೆ ನಾವು ಶೀಘ್ರದಲ್ಲೇ ಸೋಪಿನ ಫ್ಯಾಕ್ಟರಿ ಲಾಂಚ್ ಮಾಡುತ್ತೇವೆ ಎಂದು ಜಿನ್ನಿ ಮಿಲ್ಕ್ ಮ್ಯಾನೇಜರ್ ಹೇಳಿದ್ದಾರೆ.
ಜನ್ನಿ ಮಿಲ್ಕ್ ಕಂಪನಿ ಯಾವುದೇ ಪರವಾನಿಗೆ ಪಡೆದಿಲ್ಲ. ಟ್ರೇಡ್ ಲೈಸನ್ಸ್ ಪಡೆದಿಲ್ಲಾ, ನಾವು ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲು ತಿಳಿಸಿದ್ದೇವೆ. ಎಲ್ಲಾ ಮಾಹಿತಿ ಕೇಳಿದ್ದೇವೆ. ನಾವು ಮಾಹಿತಿ ಕೊಡ್ತಿವಿ ಅಂತ ಹೇಳಿದ್ದಾರೆ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ವಿಜಯನಗರ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಕತ್ತೆಗಳ ಸಾಕಾಣಿಕೆ ಮತ್ತು ಹಾಲು ಮಾರಾಟ ಮಾಡುವುದರ ಬಗ್ಗೆ ಹಳ್ಳಿಗಳಲ್ಲಿ ರೈತರಿಗೆ ಮಾಹಿತಿ ಇಲ್ಲ. ಅಂತಹವರನ್ನು ಮನವೊಲಿಸುತ್ತಿರುವ ಕಂಪೆನಿ ಒಂದು ಕತ್ತೆಗೆ ಲಕ್ಷದಂತೆ, 3 ಕತ್ತೆಗಳಿಗೆ 3 ಲಕ್ಷಗಳನ್ನು ದುಡ್ಡು ಕಟ್ಟಿಸಿಕೊಂಡು ಮೂರು ಕತ್ತೆಗಳನ್ನು ಕೊಡುತ್ತಾರೆ. ಜೊತೆಗೆ ಮೂರು ಕತ್ತೆ ಮರಿಗಳನ್ನೂ ಕೊಡ್ತಾರೆ. ಆಧರೆ ಮಾರುಕಟ್ಟೆಯಲ್ಲಿ ಈ ಕತ್ತೆಗಳ ಬೆಲೆ 20-30 ಸಾವಿರ ಅಷ್ಟೆ. ಆದರೆ ಒಂದು ಕತ್ತೆಯಿಂದ ೫೦-೬೦ ಸಾವಿರ ಲಾಭ ಮಾಡಬಹುದು ಎಂಬ ಆಸೆ ಹೊತ್ತ ರೈತರು, ಇವುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಬಳ್ಳಾರಿ, ಹೊಸಪೇಟೆ ಜಿಲ್ಲಾಧಿಕಾರಿಗಳಿಗೆ ಮನವಿ : 11/09/2024 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ರೈತ ಸಂಘದ ಪ್ರತಿನಿಧಿಗಳು ಮನವಿಯನ್ನು ಸಲ್ಲಿಸಿ, ಕೆಲವು ಕಂಪನಿಗಳು ಕತ್ತೆಯ ಹಾಲನ್ನು ಹೆಚ್ಚಿನ ದರಕ್ಕೆ ಖರೀದಿ ಮಾಡುವುದಾಗಿ ಭರವಸೆಯನ್ನು ನೀಡಿ 3 ಲಕ್ಷಕ್ಕೆ 3 ಕತ್ತೆಗಳನ್ನು ಮಾರಾಟ ಮಾಡಿ ರೈತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದಾಗಿ ರೈತರು ಆರ್ಥಿಕವಾಗಿ ನಷ್ಟ ಉಂಟು ಮಾಡಿಕೊಳ್ಳುತ್ತಿದ್ದು ರೈತರಿಗೆ ಇದರಿಂದಾಗಿ ಆರ್ಥಿಕವಾಗಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಿರುತ್ತಾರೆ. ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ, 10ನೇ ವಾರ್ಡ್, ಹಂಪಿರೋಡ್, ಗೊಲ್ಲರಹಳ್ಳಿ ಏರಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬಿಲ್ಡಿಂಗ್ ಪಕ್ಕದಲ್ಲಿ, ಹೊಸದಾಗಿ ಜೆನ್ನಿಮಿಲ್ಕ್ ಕಂಪನಿ ಆಫೀಸ್ ಮಾಡಿಕೊಂಡಿದ್ದಾರೆ. ಈ ಕಂಪೆನಿ ಕುರಿತು ಸೂಕ್ತವಾಗಿ ಪರಿಶೀಲನೆ ಮಾಡಿ, ಮಾರ್ಗದರ್ಶನ ನೀಡಿ. ರೈತರಿಗೆ ಮೋಸವಾಗುತ್ತಿದ್ದರೆ ತಪ್ಪಿಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ.



