ಕನ್ನಡದ ಮೊದಲ ಜಾಹೀರಾತು ಮಾಡೆಲ್ ಯಾರು ಎಂದರೆ ಡಾ.ರಾಜ್ ಕುಮಾರ್ ಎನ್ನಬಹುದು. ಕೆಎಂಎಫ್ ಕಾರ್ಯಕ್ರಮವೊಂದರ ಉದ್ಘಾಟನೆಗೆ ಹೋಗಿದ್ದ ಫೋಟೋವನ್ನು ಕೆಎಂಎಫ್ʻನವರು ಜಾಹೀರಾತಿನಂತೆ ಬಳಸಿಕೊಂಡದ್ದರು. ರೈತರಿಗೆ ಲಾಭವಾಗುತ್ತದೆ ಎಂದಾದರೆ ಒಳ್ಳೆಯದು. ಅದಕ್ಕೆಲ್ಲ ಹಣ ಏಕೆ? ಫೋಟೋ ಬಳಸಿಕೊಳ್ಳೋದಕ್ಕೂ ದುಡ್ಡು ಕೊಡ್ತೀರಾ.. ಛೇಛೆ ಎಂದಿದ್ದ ರಾಜ್ ಉಚಿತವಾಗಿಯೇ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಅದಾದ ಮೇಲೆ ಶಿವಣ್ಣ, ಪುನೀತ್ ಕೂಡಾ ರೈತ ಸ್ನೇಹಿ ಕಾರ್ಯಕ್ರಮಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದವರೇ. ನಟ ದರ್ಶನ್ ಕೂಡಾ ಕೃಷಿ ಮತ್ತು ಅರಣ್ಯ ಇಲಾಖೆಗೆ ರಾಯಭಾರಿಯಾಗಿದ್ಧಾರೆ.
ಈಗ ಅದೇ ಹಾದಿಯಲ್ಲಿ ಸಾಗಿರುವ ಡಾಲಿ ಧನಂಜಯ ಲಿಡ್ಕರ್ ರಾಯಭಾರಿಯಾಗಿದ್ಧಾರೆ. ಒಬ್ಬೊಬ್ಬರು ಒಂದೊಂದು ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್. ಚಿನ್ನದಂಗಡಿ, ಕಾರು, ಸಿಮೆಂಟ್, ಕಬ್ಬಿಣ, ಸ್ಟೀಲ್, ಕೂಲ್ ಡ್ರಿಂಕ್ಸ್, ಎನರ್ಜಿ ಡ್ರಿಂಕ್ಸ್, ಚಪ್ಪಲಿ, ಹಾಲು, ಕಾಡು, ಬಟ್ಟೆ, ಅಡುಗೆ ಎಣ್ಣೆ.. ಹೀಗೆ ಹಲವು ನಟ ನಟಿಯರು ಹಲವು ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಆದರೆ ಡಾಲಿ ಧನಂಜಯ ಲಿಡ್ ಕರ್ ರಾಯಭಾರಿಯಾಗಿ ವಿಭಿನ್ನ ಹೆಜ್ಜೆ ಇಟ್ಟಿದ್ಧಾರೆ.
ಚರ್ಮ ಕುಶಲಕರ್ಮಿಗಳ ಕುಟುಂಬಕ್ಕೆ ಡಾಲಿ ಸಾಥ್ ಕೊಟ್ಟಿರುವುದು ವಿಶೇಷ. ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ಕ್ಕೆ ಇದೇ ಮೊದಲ ಬಾರಿಗೆ ರಾಯಭಾರಿಯಾಗಿ ಡಾಲಿ ಧನಂಜಯ ಅವರನ್ನ ಆಯ್ಕೆ ಮಾಡಲಾಗಿದೆ.
ನಟ, ನಿರ್ಮಾಪ, ಸಾಹಿತಿಯಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಲಿಡ್ ಕರ್ ರಾಯಭಾರಿಯಾಗುವುದರ ಮೂಲಕ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುತ್ತಿದ್ದಾರೆ.
ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಅವರನ್ನು ರಾಯಾಭಾರಿಯಾಗಿ ನೇಮಕ ಮಾಡಿದೆ. ಈಗಾಗಲೇ ಡಾಲಿ ಜೊತೆ ಮಾತುಕತೆಯಾಗಿದ್ದು ಧನಂಜಯ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ, ಧನಂಜಯ್ ಅವರು ರಾಯಭಾರಿಯಾಗಿದ್ದು ತುಂಬಾ ಖುಷಿ ಇದೆ. ಅವರು ಸ್ಯಾಂಡಲ್‌ವುಡ್‌ನ ಮುಂಚೂಣಿ ನಟ. ಎಲ್ಲಾ ವರ್ಗದ ಜನರಿಗೆ ತಲುಪುವ ಕಲಾವಿದ. ಹಾಗಾಗಿ ಅವರನ್ನ ಆಯ್ಕೆ ಮಾಡಿದ್ದೇವೆ ಸಚಿವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಆದಷ್ಟು ಬೇಗ ಜಾಹೀರಾತಿನ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ ಧನಂಜಯ ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಧನಂಜಯ್ ತಮ್ಮದೇ ಡಾಲಿ ಸಂಸ್ಥೆ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾ ರಿಲೀಸ್ ಮಾಡಿ ಸಕ್ಸಸ್ ಕಂಡಿದ್ದಾರೆ.



