ಚಪ್ಪಲಿ, ಶೂ, ಬೆಲ್ಟ್.. ಲಿಡ್ʻಕರ್ ಕಂಪೆನಿಯ ಕ್ವಾಲಿಟಿ ಬಗ್ಗೆ ಎರಡು ಮಾತಿಲ್ಲ. ಗುಣಮಟ್ಟ ಇದ್ದರೂ ಮಾರ್ಕೆಟಿಂಗ್ ಕೊರತೆ ಇತ್ತು. ಹೀಗಾಗಿ ಬಾಟಾ ಸೇರಿದಂತೆ ವಿವಿಧ ಚರ್ಮೋತ್ಪನ್ನಗಳ ಬ್ರಾಂಡ್ʻಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದವು. ಚರ್ಮೋತ್ಪನ್ನಗಳ ಮಾರಾಟದಲ್ಲಿ ದೊಡ್ಡ ಹೆಸರು ಇದ್ದರೂ ಮಾರ್ಕೆಟಿಂಗ್ ಇರಲಿಲ್ಲ. ಇದು ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ಉದ್ದಿಮೆ. ಕೆಲವು ವರ್ಷಗಳಿಂದ ನಷ್ಟದಲ್ಲಿದೆ. ಇದೀಗ ಆ ಲಿಡ್ʻಕರ್ ಉದ್ಯಮಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಡಾಲಿ ಧನಂಜಯ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ.
ನಾಡಿನ ಖ್ಯಾತ ನಟ ಡಾಲಿ ಧನಂಜಯ ಅವರನ್ನು ಲಿಡ್ಕರ್ ರಾಯಭಾರಿಯಾಗಿ ಆಯ್ಕೆ ಮಾಡಿದ್ದೀವಿ. ಅವರು ಉಚಿತವಾಗಿ ರಾಯಭಾರಿ ಕೆಲಸ ಮಾಡುತ್ತಿದ್ದಾರೆ. ಇವರು ಸಾಮಾಜಿಕ ಕಳಕಳಿ ಹೊಂದಿರುವ ನಟನಾಗಿದ್ದು, ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅರ್ಥಪೂರ್ಣವಾಗಿದೆ. ಇದರಿಂದ ಚರ್ಮ ಉದ್ಯಮಕ್ಕೆ ಉತ್ತೇಜನ ಆಗುತ್ತದೆ ಎಂದು ಹೇಳಿರುವ ಸಿದ್ದರಾಮಯ್ಯ, ಧನಂಜಯ ಅವರಿಗೆ ಲಿಡ್ಕರ್ ಸಂಸ್ಥೆಯಿಂದ ವಿಶೇಷವಾಗಿ ತಯಾರಿಸಿದ್ದ ಲಿಡ್ಕರ್ ಬ್ರ್ಯಾಂಡ್ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು. ಡಾಲಿ ಧನಂಜಯ್ ಹೊಸ ಚಪ್ಪಲಿಯನ್ನು ಧರಿಸಿ ಅಲ್ಲಿನ ಕುಶಲಕರ್ಮಿಗಳ ಜತೆ ಮಾತನಾಡಿ ಖುಷಿಪಟ್ಟರು.
ನಾನು ಮೊದಲ ಬಾರಿಗೆ ಒಂದು ಸಂಸ್ಥೆಗೆ ರಾಯಭಾರಿ ಆಗುತ್ತಿದ್ದೇನೆ. ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ ಅವರು ರಾಜ್ಯದಲ್ಲಿ ಚರ್ಮೋದ್ಯಮ ನಂಬಿಕೊಂಡು 50 ಸಾವಿರ ಕುಟುಂಬಗಳಿವೆ. ನಮ್ಮ ನಾಡಿನಲ್ಲಿ ಕಲ್ಯಾಣಮ್ಮ ಮತ್ತು ಹರಳಯ್ಯರಂತಹ ಸಾವಿರಾರು ಜನ ಕುಶಲ ಕರ್ಮಿಗಳಿದ್ದಾರೆ. ನಮ್ಮದೇ ಆದ ಬ್ರ್ಯಾಂಡ್‌ಗೆ ನಾವು ಬೆಂಬಲಿಸಬೇಕು ಎನ್ನುವ ಉದ್ದೇಶದಿಂದಲೇ ಇದನ್ನು ಒಪ್ಪಿಕೊಂಡಿದ್ದೇನೆ. ಮೇಕ್ ಇನ್ ಇಂಡಿಯಾ ಹೇಗಿದೆಯೋ ಹಾಗೆ ʻಮೇಕ್ ಇನ್ ಕರ್ನಾಟಕʼ ಆಗಬೇಕು ಎಂದು ಹೇಳಿದ್ದಾರೆ ಡಾಲಿ ಧನಂಜಯ.
ಸ್ಯಾಂಡಲ್‌ವುಡ್ ನಲ್ಲಿ ನಟನಾಗಿ ನಿರ್ಮಾಪಕನಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಟಾರ್. ನಟನೆ, ನಿರ್ಮಾಣದ ಜೊತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಚರ್ಮ ಕುಶಲಕರ್ಮಿಗಳ ಕುಟುಂಬದ ನೆರವಿಗೆನಿಂತಿದ್ದಾರೆ.
ಅಲ್ಲದೆ ಈ ಹಿಂದೆ ಡಾ.ರಾಜ್ ಕುಮಾರ್, ಶಿವ ರಾಜ್ʻಕುಮಾರ್, ಪುನೀತ್ ರಾಜ್ ಕುಮಾರರಂತೆಯೇ ಉಚಿತವಾಗಿ ಜಾಹೀರಾತು ಮಾಡುವ ಮೂಲಕ ಕರ್ನಾಟಕದ ಚರ್ಮ ಕುಶಲಕರ್ಮಿಗಳಿಗೆ ನೆರವಾಗುತ್ತಿದ್ಧಾರೆ.
ಲಿಡ್ಕರ್ ರಾಯಭಾರಿಯಾಗಲು ಧನಂಜಯ ಅವರು ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದಿಲ್ಲ. ಉಚಿತವಾಗಿ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುವ ಮೂಲಕ ಧನಂಜಯ್ ಮಾದರಿಯಾಗಿದ್ದಾರೆ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 67ನೇ ಪುಣ್ಯ ಸ್ಮರಣೆ ದಿನವೇ ಈ ಕಾರ್ಯಕ್ರಮ ಹಮ್ಮಿಕೊಂಡು ವಿಶೇಷ ಗೌರವ ಅರ್ಪಿಸಿದ್ದಾರೆ.



