ನಟ ದರ್ಶನ್ (Acotr darshan) ಅವರಿಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು. ಇತ್ತೀಚೆಗಷ್ಟೇ ಹುಲಿ ಉಗುರು (TIGER CLAW RING) ವಿವಾದದಲ್ಲಿ ಸಿಲುಕಿಕೊಂಡಿದ್ದ ನಟ ದರ್ಶನ್, ಇದೀಗ ಮನೆಯಲ್ಲಿ ಸಾಕಿದ್ದ ನಾಯಿಗಳಿಂದ ಹಾಗೂ ನಾಯಿಗಳನ್ನು ನೋಡಿಕೊಳ್ಳುವವರಿಂದ ವಿವಾದಕ್ಕೆ ಸಿಲುಕಿದ್ದಾರೆ. ನಟ ದರ್ಶನ್ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ನಾಯಿಗಳನ್ನು ಬಿಟ್ಟು ಕಚ್ಚಿಸಿದ ಆರೋಪದ ಮೇಲೆ ದೂರು ದಾಖಲಾಗಿದೆ. ದೂರು ಕೊಟ್ಟಿರುವ ಮಹಿಳೆ ಅಮಿತಾ ಜಿಂದಾಲ್. ಅಮಿತಾ ಅವರಿಗೆ ದರ್ಶನ್ ಅವರ ಮನೆಯ ನಾಯಿ ಕಚ್ಚಿದ ಪ್ರಕರಣಕ್ಕೆ ಎಫ್‌ಐಆರ್ ದಾಖಲಾಗಿದ್ದು, ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ಧಾರೆ.
ಏನಿದು ಘಟನೆ?
ಅ.28ರಂದು ಆರ್ ಆರ್ ನಗರದ (RR nagar hospital) ಖಾಸಗಿ ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಅಮಿತಾ ಜಿಂದಾಲ್ (amitha jindal) ಪಾಲ್ಗೊಂಡಿದ್ದರು. ದರ್ಶನ್ ಮನೆ ಇರುವುದು ಅದೇ ಆಸ್ಪತ್ರೆ ಸಮೀಪ. ದರ್ಶನ್ ಅವರ ಮನೆ ಪಕ್ಕದಲ್ಲಿಯೇ ಇರುವ ಖಾಲಿ ಜಾಗದಲ್ಲಿ ಕಾರು ಪಾರ್ಕ್ ಮಾಡಿದ್ದ ಅಮಿತಾ, ಕಾರು ತೆಗೆಯಲು ಹೋದಾಗ ಅಲ್ಲಿ ದರ್ಶನ್ ಅವರ ಮನೆಯ ನಾಯಿಗಳು ಅಲ್ಲಿಯೇ ಇದ್ದವು. ಒಂದು ನಾಯಿಯನ್ನು ಕಟ್ಟಿ ಹಾಕಿದ್ದರೆ, ಇನ್ನೊಂದು ನಾಯಿಯನ್ನು ಕಟ್ಟಿ ಹಾಕಿರಲಿಲ್ಲ. ಕಟ್ಟಿ ಹಾಕಿದ್ದ ನಾಯಿಯೂ ಕಾರು ತೆಗೆಯುವ ಜಾಗಕ್ಕೆ ಹತ್ತಿರದಲ್ಲಿತ್ತು. ಆಗ ಅಮಿತಾ ಅವರು ನಾಯಿಯನ್ನು ಕಟ್ಟಿ ಹಾಕಿ, ಕಾರು ತೆಗೆದುಕೊಳ್ಳುತ್ತೇನೆ ಎಂದರ್ ದರ್ಶನ್ ಅವರ ಮನೆ ಕೆಲಸಗಾರರು ನಾಯಿಯನ್ನು ಹಿಡಿದುಕೊಳ್ಳಲಿಲ್ಲ ಎಂಬುದು ಆರೋಪ. ನಾಯಿಗಳು ಅಮಿತಾ ಅವರನ್ನು ಬೀಳಿಸಿ ಗಾಯಗೊಳಿಸಿದವು. ಹೊಟ್ಟೆ, ಎದೆ ಭಾಗದಲ್ಲೆಲ್ಲ ಕಚ್ಚಿದವು. ಇದೆಲ್ಲವೂ ಅಮಿತಾ ಜಿಂದಾಲ್ ದೂರಿನಲ್ಲಿದೆ.
ಅಮಿತಾ ಜಿಂದಾಲ್ ಹೇಳೋದೇನು?
ಕಾರು ನಿಲುಗಡೆ ವಿಚಾರಕ್ಕೆ ಗಲಾಟೆ ಮಾಡುವಾಗ ಕೈಯಲ್ಲಿ ನಾಯಿಗಳನ್ನು ಹಿಡಿದುಕೊಂಡಿದ್ದರು. ಈ ವೇಳೆ ಒಂದು ನಾಯಿ ನನ್ನ ಮೇಲೆ ಅಟ್ಯಾಕ್ ಮಾಡಲು ಮುಂದಾಯ್ತು. ಈ ವೇಳೆ ನಾಯಿಯನ್ನು ಹಿಡಿದುಕೊಳ್ಳಿ ಎಂದು ಮನವಿ ಮಾಡಿದೆನು. ಆದರೂ, ನೀನ್ಯಾಕೆ ಇಲ್ಲಿ ನಿನ್ನ ಕಾರನ್ನು ಪಾರ್ಕ್ ಮಾಡಿದೆ ಅಂತ ಗಲಾಟೆ ಮಾಡಿದರು. ನಾನು ಕಾರನ್ನು ತೆಗೆದುಕೊಳ್ಳಲು ಮುಂದಾದಾಗ ನನ್ನ ಮೇಲೆ ದಾಳಿ ಮಾಡುವಂತೆ ನಾಯಿಗೆ ಸೂಚನೆ ನೀಡಿ ಛೂ ಬಿಟ್ಟರು. ಮಾಲೀಕನ ಸೂಚನೆ ಮೇರೆಗೆ ನಾಯಿ ಬಂದು ದಾಳಿ ಮಾಡಿ, ಹೊಟ್ಟೆ ಹಾಗೂ ಇತರೆ ಭಾಗಕ್ಕೆಲ್ಲಾ ಕಚ್ಚಿತು ಎಂದು ಅಳಲು ತೋಡಿಕೊಂಡರು. ನನಗೆ ನಾಯಿ ಕಚ್ಚುವ ವೇಳೆ ನನ್ನ ಸ್ನೇಹಿತೆಯ ಮಗ ಕೂಡ ಜೊತೆಗಿದ್ದನು. ನನಗೆ ನಾಯಿ ಕಚ್ಚುವಾಗ ಸ್ನೇಹಿತೆಯ ಮಗ ನನ್ನನ್ನು ರಕ್ಷಣೆ ಮಾಡಲು ಮುಂದಾದರೂ, ದರ್ಶನ್ ಮನೆಯ ಸಿಬ್ಬಂದಿ ನಾಯಿ ಅಟ್ಯಾಕ್ ಮಾಡಲು ಬಿಟ್ಟು ಸುಮ್ಮನೆ ನಿಂತಿದ್ದರು. ಕೊನೆಗೆ, ಮಾನವೀಯತೆಯಿಂದಲೂ ಅವರು ನಮ್ಮನ್ನು ಆಸ್ಪತ್ರೆಗೆ ಸೇರಿಸಲಿಲ್ಲ. ಈ ಘಟನೆಯಿಂದ ನಾನು ಗಾಬರಿ ಆಗಿ ಬಿಟ್ಟೆನು. ಕ್ಷಣಮಾತ್ರದಲ್ಲಿ ನನ್ನ ಮೇಲೆ ನಾಯಿಗಳು ದಾಳಿ ಮಾಡಿ ಘಾಸಿಗೊಳಿಸಿತ್ತು. ಅಲ್ಲಿಂದ ಸೀದಾ ನಾನು ಆರ್.ಆರ್. ನಗರ ಪೊಲೀಸ್ ಠಾಣೆಗೆ ಹೋಗಿ ದೂರನ್ನು ಕೊಟ್ಟೆನು. ಆಗ ಪೊಲೀಸರು ಇಮಿಡಿಯೆಟ್ ಆಗಿ ದೂರನ್ನು ಸ್ವೀಕರಿಸಿದರು
ನಟ ದರ್ಶನ್ ಮನೆಯಲ್ಲಿ ಇರಲಿಲ್ಲ : ಘಟನೆ ನಡೆದ ವೇಳೆ ದರ್ಶನ್ ಗುಜರಾತಿನಲ್ಲಿದ್ದರು (Darshan in gujarath) ಎನ್ನಲಾಗಿದ್ದು, ಮಂಗಳವಾರ ರಾತ್ರಿ ಮನೆಗೆ ವಾಪಸ್ ಆಗಿದ್ಧಾರೆ. ಕಾಟೇರ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಭಾಗವಹಿಸುವ ಸಲುವಾಗಿ ದರ್ಶನ್ ಗುಜರಾತಿಗೆ ತೆರಳಿದ್ದರು ಎನ್ನಲಾಗಿದೆ. ಆದರೆ ದರ್ಶನ್ ಅವರ ಮನೆಯಲ್ಲಿ ಸಾಕಿದ್ದ ನಾಯಿಗಳು ಎಂಬ ಕಾರಣಕ್ಕೆ ದರ್ಶನ್ ಕೂಡಾ ಪ್ರಕರಣದಲ್ಲಿ ಆರೋಪಿಯೇ. ಹೀಗಾಗಿ ದರ್ಶನ್ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಸುಪರ್ದಿಯಲ್ಲಿರುವ ಪ್ರಾಣಿಗಳನ್ನು ನೋಡಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪ ಸಂಬಂಧ (Ipc sectin 289) ಅನ್ವಯ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.



