ದೇವೇಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಇರಬೇಕಿತ್ತು. ಸ್ವತಃ ದೇವೇಗೌಡರಿಗೂ ನನ್ನನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ತೆಗೆಯುವ ಅಧಿಕಾರ ಇಲ್ಲ. ಮೊದಲು ನನಗೆ ನೋಟಿಸ್ ಕೊಡಬೇಕಿತ್ತು. ಕಾರ್ಯಕಾರಿ ಸಮಿತಿಯಲ್ಲಿ ಮೂರನೇ ಎರಡರಷ್ಟು ಸದಸ್ಯರ ಅನುಮತಿ ಪಡೆದು ನೋಟಿಸ್ ಕೊಡಬೇಕಿತ್ತು. ಇದನ್ನು ಇಲ್ಲಿಗೇ ಬಿಡಲ್ಲ, ಕೋರ್ಟಿಗೆ ಹೋಗ್ತೇನೆ. ಚುನಾವಣಾ ಆಯೋಗಕ್ಕೆ ಹೋಗ್ತೇನೆ. ಇದರ ವಿರುದ್ಧ ತಡೆ ತರುತ್ತೇನೆ.. ಹೀಗೆಲ್ಲ ಗುಡುಗಿದ್ದಾರೆ ಸಿಎಂ ಇಬ್ರಾಹಿಂ. ಅವರೀಗ ಜೆಡಿಎಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷರು.
ನಮ್ಮದೇ ವೊರಿಜಿನಲ್ ಜೆಡಿಎಸ್ ಎಂದಿದ್ದ ಇಬ್ರಾಹಿಂ, ಬಿಜೆಪಿ ಜೆಡಿಎಸ್ ಮೈತ್ರಿಯನ್ನ ಬಹಿರಂಗವಾಘಿ ವಿರೋಧಿಸಿದ್ದು, ಕುಮಾರಸ್ವಾಮಿ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡುವ ಸುಳಿವು ಕೊಟ್ಟಿದ್ದರು. ಅದಾದ ಮೇಲೆ ರಾಜಕೀಯ ದಾಳ ಉಳಿಸಿದ ದೇವೇಗೌಡರು, ಇಡೀ ಜೆಡಿಎಸ್ ರಾಜ್ಯ ಘಟಕವನ್ನೇ ವಿಸರ್ಜನೆ ಮಾಡಿದರು. ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿಲ್ಲ. ಕುಮಾರಸ್ವಾಮಿ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರೊಬ್ಬರನ್ನು ವಜಾಗೊಳಿಸಿದರೆ ಮುಸ್ಲಿಂ ಸಮುದಾಯದ ಅಸಮಾಧಾನ ಎದುರಿಸಬೇಕಾಗಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಇಡೀ ರಾಜ್ಯ ಘಟಕವನ್ನೇ ವಿಸರ್ಜನೆ ಮಾಡುವ ನಡೆ ಅನುಸರಿಸಲಾಗಿದೆ. ಬೆನ್ನಲ್ಲೇ ಹಂಗಾಮಿ ರಾಜ್ಯಾಧ್ಯಕ್ಷರನ್ನಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನೇಮಿಸಲಾಯಿತು.
ಕೆಲಹೊತ್ತಿನ ಬಳಿಕ ದೇವೇಗೌಡರು, ”ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನ ಮತ್ತು ನಿಯಮಗಳ ಅಡಿಯಲ್ಲಿ, ಅಂದರೆ ಆರ್ಟಿಕಲ್ 10ರ ಪ್ರಕಾರ , ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ಆ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳನ್ನು ಸುಲಲಿತವಾಗಿ ಮುಂದುವರೆಸಿಕೊಂಡು ಹೋಗಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು (ಹಂಗಾಮಿ) ಅಧ್ಯಕ್ಷರನ್ನಾಗಿ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ’ ಎಂದು ಲಿಖಿತ ಆದೇಶ ಹೊರಡಿಸಿ ಬಂಡಾಯವನ್ನು ಶಮನಗೊಳಿಸಿದರು.
ಅದಾದ ಮೇಲೆ ಸಿಎಂ ಇಬ್ರಾಹಿಂ ಈ ಮಾತು ಹೇಳಿದ್ದು. ನನ್ನ ಹೋರಾಟ ಶುರುವಾಗಿದೆ. ಅವರ ನೊಟೀಸ್ ನನ್ನ ಕೈಗೆ ಬರಲಿ ಮೊದಲು ಆಮೇಲೆ ಮಾತಾಡುತ್ತೇನೆ. ಒರಿಜಿನಲ್ ಜೆಡಿಎಸ್ ನಮ್ಮದೇ. ಅವರಿಗೆ ಅಧಿಕಾರ ಇದೆ ಮೀಟಿಂಗ್ ಕರ್ದು ನನ್ ಮೇಲೆ ಅವಿಶ್ವಾಸ ನಿರ್ಣಯ ಮಾಡ್ಬೇಕಿತ್ತು. ದೇವೆಗೌಡರಿಗೆ ಒಂದು ಮಾತು ಹೇಳೋಕಿಷ್ಟಪಡ್ತಿನಿ. ಇವತ್ತು ನಿಮ್ಮ ಮಗನ ಸಲುವಾಗಿ ಬೇರೆಯವರ ಮಕ್ಕಳನ್ನು ಬಲಿ ಕೊಡ್ತಾ ಇದೀರಿ. ನಿಮಗೆ ಪುತ್ರವ್ಯಾಮೋಹ ಇದೆ ಅಂತಾಯ್ತು. ನನಗೆ ಈ ನಿರ್ಣಯ ಖುಷಿ ಕೊಟ್ಟಿದೆ. ಇದರ ವಿರುದ್ದ ಕೋರ್ಟ್ ನಲ್ಲಿ ಸ್ಟೇ ಕೊಡ್ತೀನಿ. ಒಂದು ರೀತಿ ನನ್ನ ಹೋರಾಟ ಈಗ ಶುರು ಆಗಿದೆ ಎಂದಿದ್ದಾರೆ.
ಗೌಡ್ರೇ ನಿಮ್ಮನ್ನು ತಂದೆ ಸಮಾನ ಅಂದ್ಕೊಂಡಿದ್ದೆ. ಇದೇನಾ ಮಗನಿಗೆ ಕೊಡೋ ಪ್ರೀತಿ, ಗೌರವ? ನಾನು ಆರು ವರ್ಷ ಎಂಎಲ್ಸಿ ಸ್ಥಾನ ಬಿಟ್ಟು ನಿಮ್ ಜೊತೆ ಬಂದ್ನಲ್ರೀ? ನಾನು ಕಾನೂನು ಹೋರಾಟ ಮಾಡ್ತೀನಿ. ದೇವರು ಮತ್ತು ಜನ ನನ್ ಜೊತೆಗಿದ್ದಾರೆ. ಹೇಳದೇ ಕೇಳದೆ ವಿಸರ್ಜನೆ ಮಾಡಿದ್ದು ತಪ್ಪು. 100% ಜೆಡಿಎಸ್ ಕುಟುಂಬದ ಪಕ್ಷ ಅಂತ ಪ್ರೂವ್ ಆಯ್ತು. ನನ್ನ ಮುಂದಿನ ನಡೆ ಜನತಾದಳ. ಜನತಾದಳ ನಮ್ಮದೇ. ನನ್ನ ಮುಂದಿನ ನಡೆ ಜನತಾ ದಳ. ಜನತಾ ದಳವನ್ನು ವಿಸರ್ಜನೆ ಮಾಡಕ್ಕೇ ಆಗಲ್ಲ. ಇದನ್ನು ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡ್ತೇನೆ ಎಂದಿದ್ದಾರೆ.
. ನಾನು ಸಿದ್ದರಾಮಯ್ಯ ಅವರನ್ನು ಬೈತಿಲ್ಲ ಅಂತ ದೇವೇಗೌಡರಿಗೆ ಬೇಸರ ಇದೆ. ಸುಮ್ಮಸುಮ್ಮನೆ ನಾನ್ಯಾಕೆ ಸಿದ್ದರಾಮಯ್ಯರನ್ನು ಬೈಯಲಿ? ಸಿದ್ದರಾಮಯ್ಯ ಜತೆ ಯಾವುದೇ ವೈಷಮ್ಯ ಇಲ್ಲ. ಅವರು ಅವರ ಪಾಡಿಗೆ ಅಧಿಕಾರ ಮಾಡ್ತಿದ್ದಾರೆ. ನನಗೆ ಕಾಂಗ್ರೆಸ್ ಬಿಟ್ಟಿದ್ದು ತಪ್ಪು ಅನಿಸಿಲ್ಲ. ಮುಂದೆ ಕಾಂಗ್ರೆಸ್ ಆಹ್ವಾನಿಸಿದ್ರೆ ಘರ್ ವಾಪ್ಸಿ ಆಗುವ ಎಂದಿರುವ ಇಬ್ರಾಹಿಂ, ಕಾಂಗ್ರೆಸ್ ಸೇರುವ ಸುಳಿವನ್ನೂ ಕೊಟ್ಟಿದ್ದಾರೆ. ಅವರು ಕರೆಯಬೇಕಷ್ಟೆ.



