ರಾಮಲಲ್ಲ ಪ್ರಾಣ ಪ್ರತಿಷ್ಠಾಪನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಏನೇನೆಲ್ಲ ಟೀಕೆ ಎದುರಿಸುತ್ತಿದ್ದಾರೆ ಅನ್ನೋದನ್ನೂ ನಿಜವಾದ ರಾಮಭಕ್ತರು ನೋಡುತ್ತಿದ್ದಾರೆ. ಮೋದಿ ಅವರಷ್ಟೇ ಅಲ್ಲ, ಪ್ರಾಣ ಪ್ರತಿಷ್ಟಾಪನೆಗೆ ಹೋಗಿದ್ದ ಹಲವು ಸೆಲಬ್ರಿಟಿಗಳು ಈಗ ʻಕೆಲವರ ದೃಷ್ಟಿಯಲ್ಲಿ ವಿಲನ್ʻಗಳಾಗಿದ್ದಾರೆ. ರಜನಿಕಾಂತ್ ಕೂಡಾ ಅದಕ್ಕೆ ಹೊರತಲ್ಲ.
ಅಯೋಧ್ಯೆಯಲ್ಲಿ ಜನವರಿ ೨೨ರಂದು ನಡೆದ ಐತಿಹಾಸಿಕ ರಾಮಮಂದಿರ ಉದ್ಘಾಟನೆಗೆ ವಿಶೇಷ ಅತಿಥಿಗಳನ್ನು ಆರಿಸಿ ಆರಿಸಿ ಆಯ್ಕೆ ಮಾಡಲಾಗಿತ್ತು. ಆ ಕಾರ್ಯಕ್ರಮಕ್ಕೆ ಹೋಗಿದ್ದ ರಜನಿಕಾಂತ್ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾಗಿದ್ದರು. ಆದರೆ.. ಅದು ಯಾವ ಮಟ್ಟಿಗೆ ವಿವಾದ ಆಗಿದೆಯೆಂದರೆ.. ರಜನಿಕಾಂತ್ ಅವರೇ ಪದೇ ಪದೇ ಸ್ಪಷ್ಟನೆ ನೀಡುವಂತಾಗಿದೆ.
ವಿವಾದ ಶುರು ಮಾಡಿದ್ದು ರಜನಿಕಾಂತ್ ಅವರ ಮೆಚ್ಚಿನ ನಿರ್ದೇಶಕರೂ ಆಗಿರೋ ಪಾ.ರಂಜಿತ್. ಅಯೋಧ್ಯೆಗೆ ಹೋಗಿದ್ದು ತಪ್ಪು ಎಂದು ಮಾತನಾಡಿದ್ದರು. ರಜನಿಕಾಂತ್ ಅವರು ಶತಮಾನಗಳ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿತು ಎಂದು ಹೇಳಿದ್ದನ್ನು ಪ್ರಶ್ನೆ ಮಾಡಿದ್ದರು. ಇದರ ಹಿಂದೆ ರಾಜಕೀಯ ಇದೆ ಎಂದು ಆರೋಪಿಸಿದ್ದರು. ಪಾ ರಂಜಿತ್ ಅವರು ರಜನಿಕಾಂತ್ ಅಭಿನಯದ ಕಬಾಲಿ, ಕಾಲ ಚಿತ್ರದ ನಿರ್ದೇಶನ ಮಾಡಿದ್ದವರು. ಇದಕ್ಕೆ ಉತ್ತರ ಕೊಟ್ಟಿದ್ದ ರಜನಿಕಾಂತ್ ಇದು ನನಗೆ ಆಧ್ಯಾತ್ಮ, ರಾಜಕೀಯ ಅಲ್ಲ. ದೇವಸ್ಥಾನ ತೆರೆಯುತ್ತಿದ್ದಂತೆ ದರ್ಶನ ಪಡೆದ ಮೊದಲ ೧೫೦ ಮಂದಿಯಲ್ಲಿ ನಾನೂ ಒಬ್ಬ. ರಾಮಲಲ್ಲನ ದರ್ಶನ ಮಾಡಿದ್ದು ನನಗೆ ಸಂತೋಷ ಕೊಟ್ಟಿದೆ ಎಂದಿದ್ದರು. ಎಲ್ಲರಿಗೂ ಅವರದ್ಧೇ ಆದ ಅಭಿಪ್ರಾಯಗಳಿರ್ತವೆ. ಆದರೆ ಅದು ಎಲ್ಲ ಸಂದರ್ಭಕ್ಕೂ ಉಚಿತವಾಗಿರುವುದಿಲ್ಲ ಎಂದಿದ್ದಾರೆ.
ಅದು ಮುಗಿಯುತ್ತಿದ್ದಂತೆ ಈಗ ರಜನಿಕಾಂತ್ ಅಭಿನಯದ ಲಾಲ್ ಸಲಾಂ ಚಿತ್ರದ ಆಡಿಯೋ ರಿಲೀಸ್ ವೇಳೆ ರಜನಿಕಾಂತ್ ಮಗಳು ಐಶ್ವರ್ಯ ವಿವಾದ ಎದುರಿಸುತ್ತಿದ್ಧಾರೆ. ರಜನಿಕಾಂತ್ ಅವರನ್ನು ರಾಮಲಲ್ಲ ಪ್ರತಿಷ್ಠಾಪನೆಗೆ ಹೋಗಿದ್ದಕ್ಕೆ ಹಲವರು ಅವರನ್ನು ಸಂಘಿ ಎಂದು ಕರೆಯುತ್ತಿದ್ಧಾರೆ. ನನ್ನ ತಂದೆಯನ್ನು ಕರೆಯಬೇಡಿ, ಅವರು ಸಂಘಿ ಅಲ್ಲ ಎಂದಿದ್ದರು. ಒಂದು ವೇಳೆ ಅವರೇನಾದರೂ ಸಂಘಿ ಆಗಿದ್ದರೆ ಲಾಲ್ ಸಲಾಂ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ ಎಂದೂ ಹೇಳಿದ್ದರು.
ಐಶ್ವರ್ಯ ಅವರ ಹೇಳಿಕೆ ʻಸಂಘಿಗಳು ಎಂದರೆ ಕೆಟ್ಟ ಪದʼ ಎಂದು ಹೇಳಿದ್ಧಾರೆ ಎಂದು ಅರ್ಥೈಸಿ ವರದಿ ಮಾಡಲಾಗಿತ್ತು. ಈಗ ಅದಕ್ಕೆ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದ್ಧಾರೆ ರಜನಿಕಾಂತ್. ತಮ್ಮ ಮಗಳು ಹೇಳಿದ್ದನ್ನು ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಐಶ್ವರ್ಯಾ ಅವರು ಸಂಘಿ ಅನ್ನೋದು ಕೆಟ್ಟ ಪದ ಅನ್ನೋ ಅರ್ಥದಲ್ಲಿ ಹೇಳಲಿಲ್ಲ. ನನ್ನ ತಂದೆಯ ಬಗ್ಗೆ ಯಾಕೆ ಈ ರೀತಿ ಪ್ರಚಾರ ಮಾಡ್ತಾರೆ ಎಂದಷ್ಟೇ ಕೇಳಿದ್ಧಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ರಜನಿಕಾಂತ್ ಅವರು ಸ್ಟಾರ್ ಆಗಿ ಹಿಟ್ ಮತ್ತು ಫ್ಲಾಪ್ ಕೊಟ್ಟಾಗ ಎದುರಿಸದೇ ಇದ್ದ ಟೀಕೆಗಳನ್ನೆಲ್ಲ ರಾಮಲಲ್ಲನ ಪ್ರತಿಷ್ಠಾಪನೆಗೆ ಹೋಗಿ ಎದುರಿಸುತ್ತಿದ್ಧಾರೆ. ಒಟ್ಟಿನಲ್ಲಿ ರಜನಿಕಾಂತ್ ತಮ್ಮ ಭಕ್ತಿಯನ್ನು ತೋರಿಸಿದ್ದಕ್ಕೂ ಟೀಕೆ ಎದುರಿಸುವಂತಾಗಿದೆ.



