ಎಲ್ ಆರ್ ಶಿವರಾಮೇ ಗೌಡ. ಮಾಜಿ ಸಂಸದ. ಕಾಂಟ್ರವರ್ಸಿ ಎಂದರೆ ಇವರಿಗೆ ಡಾರ್ಲಿಂಗ್ ಇದ್ದಂತೆ. ಅವರು ಯಾರನ್ನು ಯಾವಾಗ ಹೊಗಳುತ್ತಾರೋ.. ಯಾವಾಗ ಟೀಕೆ ಮಾಡ್ತಾರೋ.. ಅವರಿಗೂ ಗೊತ್ತಿರಲ್ಲ. ಅಂತಹ ಎಲ್ ಆರ್ ಶಿವರಾಮೇ ಗೌಡ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. ಆದರೆ ಈಗ ಕಾಂಗ್ರೆಸ್ ಅವರನ್ನು ಹೊರಹಾಕುವ ಬಗ್ಗೆ ಚಿಂತನೆ ನಡೆಸುತ್ತಿದೆ. ಕಾರಣ ಇಷ್ಟೇ. ಅಂಬರೀಷ್.
ಅಂಬರೀಷ್ ನಟರಾಗಿದ್ದರು. ಕಾಂಗ್ರೆಸ್‌ನಲ್ಲಿ ಶಾಸಕ, ಸಂಸದರಾಗಿದ್ದರಷ್ಟೇ ಅಲ್ಲ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಎರಡೂ ಕಡೆ ಮಂತ್ರಿಯಾಗಿದ್ದವರು. ವಿಶೇಷ ಎಂದರೆ ಕಾಂಗ್ರೆಸ್ ಲೀಡರ್ ಆಗಿದ್ದರೂ, ಎಲ್ಲ ಪಕ್ಷಗಳಲ್ಲೂ ಬೇರೆಯದೇ ರೀತಿಯಲ್ಲಿ ಪ್ರೀತಿ ವಿಶ್ವಾಸ ಹೊಂದಿದ್ದ ಅಂಬರೀಷ್.. ಒಂದರ್ಥದಲ್ಲಿ ಅಜಾತಶತ್ರು. ಮಂಡ್ಯದಲ್ಲಂತೂ ಅವರು ಅಭಿಮಾನಿಗಳ ದೇವರು. ಜನಪ್ರಿಯತೆ, ಪ್ರೀತಿ ಹೇಗಿತ್ತೆಂದರೆ ಸುಮಲತಾ ಅಂಬರೀಷ್ ಅವರನ್ನು ಮಂಡ್ಯದಲ್ಲಿ ಪಕ್ಷೇತರರಾಗಿ ಗೆಲ್ಲಿಸಿ ಕಳಿಸಿಕೊಟ್ಟಿದ್ದವರು ಮಂಡ್ಯದ ಜನ. ಅಂತಹ ಅಂಬರೀಷ್ ಬಗ್ಗೆ ಎಲ್ಆರ್ ಶಿವರಾಮೇಗೌಡ ಅಸಭ್ಯ, ಅಸಹ್ಯವಾಗಿ ಮಾತನಾಡಿರುವ ಆಡಿಯೋ ಒಂದು ವೈರಲ್ ಆಗಿದೆ.
ಶಿವರಾಮೇಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರೇ ಒತ್ತಾಯಿಸಿದ್ದಾರೆ. ಕಾರ್ಯಕರ್ತನೊಬ್ಬನೊಂದಿಗೆ ಪೋನ್ ಕರೆ ವೇಳೆ ನಡೆದಿದ್ದ ಮಾತುಕತೆ ಎನ್ನಲಾದ ಆಡಿಯೋದಲ್ಲಿ ನಟ ದಿ. ಅಂಬರೀಶ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಂಸದ ಮಾದೇಗೌಡ ಸೇರಿದಂತೆ ಹಲವು ನಾಯಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ.ಅಲ್ಲದೆ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧವೂ ನಾಲಿಗೆ ಹರಿಬಿಟ್ಟಿರುವುದು ಕಾಂಗ್ರೆಸ್ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರಿಗೆ ಪತ್ರ ಬರೆದು, ಶಿವರಾಮೇಗೌಡ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪಕ್ಷದ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ ಕಾಂಗ್ರೆಸ್ ಪಕ್ಷದ ಗೌರವಕ್ಕೆ ಧಕ್ಕೆಯಾಗಿದೆ, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ಮಧ್ಯೆ ಎಐ ತಂತ್ರಜ್ಞಾನ ಬಳಸಿ ಆಡಿಯೋವನ್ನು ಸೃಷ್ಟಿಸಲಾಗಿದೆ ಎಂದು ಶಿವರಾಮೇಗೌಡ ಹೇಳುತ್ತಿದ್ದಾರಾದರೂ, ಇದನ್ನು ಒಪ್ಪಲು ಮಂಡ್ಯದ ಕಾಂಗ್ರೆಸ್ ನಾಯಕರೇ ಸಿದ್ಧರಿಲ್ಲ. ಶಿವರಾಮೇಗೌಡ ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗಲೂ ಇದೇ ರೀತಿಯ ಆಡಿಯೋ ವಿವಾದವಾಗಿತ್ತು. ಆಗ ಕುಮಾರಸ್ವಾಮಿ ಅವರು ಶಿವರಾಮೇಗೌಡರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಬಿಜೆಪಿಯಲ್ಲೂ ಗೆಟ್ ಔಟ್ ಆಗಿರುವ ಶಿವರಾಮೇ ಗೌಡ ಅವರ ಕೊನೆಯ ನಿಲ್ದಾಣ ಕಾಂಗ್ರೆಸ್ ಆಗಿತ್ತು. ಈಗ ಕಾಂಗ್ರೆಸ್ಸಿಂದಲೂ ಆಚೆ ಹೋಗುವ ಪರಿಸ್ಥಿತಿ ಬಂದಿದೆ.



