ಜೆಡಿಎಸ್ ರಾಜ್ಯಧ್ಯಕ್ಷ ಬದಲಾವಣೆ ವಿಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಈ ವಿಚಾರವಾಗಿ ನಾನು ಆಕಾಂಕ್ಷಿಯಲ್ಲ ಎಂದು ಮಾಧ್ಯಮಗಳ ಎದುರು ಹೇಳುತ್ತಿರುವ ನಿಖಿಲ್ ಕುಮಾರಸ್ವಾಮಿ, ಇದೀಗ ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ. ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಪುನರುಚ್ಛರಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಗ್ಯಾರಂಟಿ ಹಣವನ್ನು ಕಟಾ ಕಟ್ ಹಾಕುತ್ತೇವೆ ಹೇಳಿದ್ದರು. ಆದರೆ, ಅವರು ಹೇಳಿದಂತೆ ಜನರಿಗೆ ಹಣ ಜಮೆ ಮಾಡುತ್ತಿಲ್ಲ. ನುಡಿದಂತೆ ನಡೆಯುತ್ತಿಲ್ಲ. ಯಾವ ದಿನ ಗೃಹ ಲಕ್ಷ್ಮಿ ಹಣವನ್ನು ಜಮಾ ಮಾಡುತ್ತಾರೆ ಎಂದು ಹೇಳಲಿ. ಆಗದಿದ್ದರೆ ನಾವೇ ಕ್ಯಾಲೆಂಡರ್ ತೆಗೆದುಕೊಂಡು ಹೋಗುತ್ತೇವೆ. ದಿನಾಂಕವನ್ನು ಮಾರ್ಕ್ ಮಾಡಿ ಕೊಡಲಿ ಎಂದು ಹೇಳಿದ್ದಾರೆ.
ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಆಗದ ಕಾರಣಕ್ಕೆ ಮಹಿಳೆಯರು ಗೊಂದಲಕ್ಕೆ ತುತ್ತಾಗಿದ್ದಾರೆ. ಮನಸ್ಸಿಗೆ ಬಂದ ಹಾಗೆ ಸರಕಾರ ಹಣವನ್ನು ಜಮೆ ಮಾಡುತ್ತಿದೆ. ಚುನಾವಣೆಗಳು ಬಂದಾಗ ಮೂರ್ನಾಲ್ಕು ತಿಂಗಳ ಹಣವನ್ನು ಒಮ್ಮೆಲೇ ಜಮೆ ಮಾಡುತ್ತಾರೆ. ಗ್ಯಾರಂಟಿ ಮೂಲಕ ಕಾಂಗ್ರೆಸ್ ಸರಕಾರ ಜನರನ್ನು ಧಿಕ್ಕು ತಪ್ಪಿಸುತ್ತಿದ್ದು, ಇದರ ವಿಧಾನಮಂಡಲದ ಒಳಗೆ, ಹೊರಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
18 ಜೆಡಿಎಸ್ ಶಾಸಕರ ಪೈಕಿ ಯಾರೂ ಪಕ್ಷ ತೊರೆದು ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳಿರುವ ನಿಖಿಲ್ ಆಡಳಿತ ಕಾಂಗ್ರೆಸ್ ಅಧಿಕಾರಕ್ಕೆ ಬಂದ 2 ವರ್ಷದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅಭಿವೃದ್ಧಿ ಕಾರ್ಯಕ್ಕೆ ಇಷ್ಟು ಹಣ ಸಾಕೆ? ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ ಶಾಸಕರೇಕೆ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ? ಹೆಚ್.ಡಿ.ದೇವೇಗೌಡರ ಕುಟುಂಬದೊಂದಿದೆ ನಂಟು ಹೊಂದಿರುವ ಶಾಸಕರನ್ನು ಕಾಂಗ್ರೆಸ್ ಹೇಗೆ ಸೆಳೆಯುತ್ತದೆ? ಎಂದು ಪ್ರಶ್ನಿಸಿದ್ದಾರೆ.
‘ಸ್ಥಳೀಯ ನಾಯಕರ ಸಲಹೆಯಂತೆ ಸ್ಥಳೀಯ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಲ್ಲದೇ ಸ್ಥಳೀಯ ಚುನಾವಣೆಯಲ್ಲಿಮೈತ್ರಿ ಬಗ್ಗೆ ಎರಡೂ ಪಕ್ಷದ ನಾಯಕರು ಚರ್ಚಿಸುತ್ತಾರೆ. ಯಾವುದೇ ಗೊಂದಲವಾಗದಂತೆ ನಿರ್ಧಾರ ಕೈಗೊಳ್ಳುತ್ತಾರೆ. ಇದಲ್ಲದೇ ಮಾರ್ಚ್ 14ರ ಒಳಗೆ ಡಿಜಿಟಲ್ ಮೂಲಕ ಪಕ್ಷದ ಸದಸ್ಯತ್ವ ನೋಂದಣಿ ಆರಂಭಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
‘ನಮ್ಮ ಕಾರ್ಯಕರ್ತರಿಗೆ ನ್ಯಾಯ ಒದಗಿಸಬೇಕು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಪಕ್ಷದಲ್ಲಿ ಕೆಲವೊಂದು ಬದಲಾವಣೆ ಆಗಬೇಕಿದೆ. ಆ ಬಗ್ಗೆ ಗಮನ ಹರಿಸಿದ್ದೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು ತಳಮಟ್ಟದಿಂದ ಪಕ್ಷವನ್ನು ಕಾರ್ಯಕರ್ತರು ಕಟ್ಟಿ ಬೆಳೆಸಿದ್ದಾರೆ. ರಾಜ್ಯ ಸರಕಾರದ ವೈಫಲ್ಯದಿಂದ ಮುಂದಿನ ದಿನಗಳಲ್ಲಿಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಆಗ ಪಕ್ಷದ ಎಲ್ಲಕಾರ್ಯಕರ್ತರಿಗೆ ಅಧಿಕಾರ ಕೊಡಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ತಂದೆ, ತಾತ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನಿರ್ವಹಣೆ ಮಾಡಬೇಕೆಂಬ ಒತ್ತಡ ಬರುತ್ತಿದೆ. ಆದರೆ, ಪಕ್ಷದಲ್ಲಿ ಹಲವು ಹಿರಿಯ ನಾಯಕರು ಇದ್ದಾರೆ. ಹಾಗಾಗಿ, ಸದ್ಯಕ್ಕೆ ರಾಜ್ಯಾಧ್ಯಕ್ಷ ಪಟ್ಟ ನನಗೆ ಅಪ್ರಸ್ತುತ ಎನಿಸಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.



