ದೊಡ್ಮನೆಯಲ್ಲಿ ಹೀರೋಗಳ ಪುಟ್ಟ ಸೈನ್ಯವೇ ಇದೆ. ಡಾ.ರಾಜ್ ಅವರು ಈಗಿಲ್ಲ. ಪುನೀತ್ ಕೂಡಾ ಈಲ್ಲ. ಶಿವಣ್ಣ ಇದ್ದಾರೆ. ರಾಘವೇಂದ್ರ ರಾಜಕುಮಾರ್ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿನಯ್ ಈಗಿನ್ನೂ ಹೀರೋ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಯುವ ಇನ್ನೂ ಎಂಟ್ರಿ ಆಗ್ಬೇಕಿದೆ. ಆದರೆ.. ದೊಡ್ಮನೆಯ ಗತ್ತು ಮಾತ್ರ ಹಾಗೆಯೇ ಇದೆ. ಆ ಗತ್ತಿಗೆ ಕಾರಣ ವಿನಯವಂತಿಕೆ, ಸೌಜನ್ಯ, ನಡವಳಿಕೆ ಎನ್ನುವುದು ಅಚ್ಚರಿಯಾದರೂ ಸತ್ಯ. ಈ ಮಾತನ್ನು ಈಗ ಉಮಾಪತಿ ಶ್ರೀನಿವಾಸ್ ಗೌಡ ಅವರೂ ಹೇಳಿದ್ಧಾರೆ.
ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ವಾಗ್ಯುದ್ಧ ಭಾಗ ೨ ಮುಂದುವರೆಯುತ್ತಿದ್ದು, ಆ ವಿಷಯದಲ್ಲಿ ದೊಡ್ಮನೆಯ ವಿಷಯ ಪ್ರಸ್ತಾಪ ವಾಗಿದೆ. ದರ್ಶನ್ ವಿರುದ್ಧ ಮತ್ತೆರಡು ಕೇಸ್, ಪ್ರತಿಭಟನೆ, ಫಿಲ್ಮ್ ಚೇಂಬರ್ ಬುದ್ಧಿವಾದದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ದರ್ಶನ್ ಕುರಿತು ಮಾತನಾಡಿದ್ಧಾರೆ. ಕಾಟೇರ ಟೈಟಲ್ ವಿಚಾರವಾಗಿ ಉಮಾಪತಿ ಅವರಿಗೆ ದರ್ಶನ್ ತಗಡು ಎಂದಿದ್ದ, ‘ಗುಮ್ಮುಸ್ಕೊಳ್ತೀಯಾ’ ಎಂಬ ಪದ ಬಳಸಿದ್ದ ದರ್ಶನ್ ಅವರ ಕುರಿತು ದೇಹ ತೂಕ ಇದ್ದರೆ ಸಾಲದು, ಮಾತಿನಲ್ಲೂ ತೂಕ ಇರಬೇಕು ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದ ಉಮಾಪತಿ, ಡಿಸಿಎಂ ಜೊತೆ ದರ್ಶನ್ ವಿಷಯ ಮಾತನಾಡೋಕೆ ಬಂದಿರಲಿಲ್ಲ ಎಂದರಷ್ಟೇ ಅಲ್ಲ, ಬುದ್ಧಿ ಹೇಳುವ ಹಾಗಿದ್ದರೆ ಸಾಹೇಬ್ರು ಹೇಳ್ತಾರೆ. ಇಲ್ಲದಿದ್ದರೆ ಸಾಹೇಬರು ಏನೂ ಕೇಳೋಕೆ ಹೋಗಲ್ಲ ಎಂದಿದ್ಧಾರೆ.
ಸಮಸ್ಯೆಗಳು ಎಲ್ಲಾ ಕಡೆ ಬರುತ್ತವೆ. ಅದನ್ನ ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ಹೆಸರಿರುವ ವ್ಯಕ್ತಿ ತೂಕವಾಗಿ ನಡೆದುಕೊಳ್ಳಬೇಕಾಗುತ್ತದೆ. ನಾನು ತಪ್ಪು ಮಾಡಿದ್ದರೂ ತಪ್ಪೇ. ಬೇರೆಯವರು ತಪ್ಪು ಮಾಡಿದ್ದರೂ ತಪ್ಪೇ. ನಾವೆಲ್ಲಾ ಸಿನಿಮಾ ಮುಖಾಂತರ ಮೆಸೇಜ್ ಕೊಡಬೇಕು. ಈ ತರಹದ ಕಾಂಟ್ರವರ್ಸಿಯಿಂದ ಮೆಸೇಜ್ ಕೊಡುವಂಥದ್ದು ಏನೂ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಡಾ.ರಾಜ್ ಪೋಸ್ಟ್ ಹಾಕಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಉಮಾಪತಿ ಅದು ಸತ್ಯ ಅಲ್ವಾ..? ಈ ಚಿತ್ರರಂಗ ಡಾ.ರಾಜ್ ಬೆಳೆಸಿದ ಆಲದಮರ. ಎಲ್ಲರೂ ಹೇಳ್ತಾರೆ ದೊಡ್ಮನೆಗೊಂದು ಸಿನಿಮಾ ಮಾಡಿ, ಅದರ ತೂಕವೇ ಬೇರೆ ಅಂತ. ಆ ತೂಕ ನಮಗೀಗ ಗೊತ್ತಾಗುತ್ತಿದೆ ಎಂದು ಹೇಳಿದ್ಧಾರೆ.
ಡಾ.ರಾಜ್ ಸಹಕಲಾವಿದರಿಗೆ ಗೌರವ ಕೊಡುತ್ತಿದ್ದವರು. ನಿರ್ದೇಶಕರನ್ನಂತೂ ಗುರುಗಳ ಸ್ಥಾನದಲ್ಲೇ ಇಟ್ಟು ನೋಡುತ್ತಿದ್ದರು. ಆರಂಭದ ದಿನಗಳನ್ನು ಹೊರತುಪಡಿಸಿದರೆ, ಡಾ.ರಾಜ್ ಅವರ ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕರೆಲ್ಲ ಬಹುತೇಕ ಅವರಿಗಿಂತ ಕಡಿಮೆ ವಯಸ್ಸಿನವರು. ಚಿಕ್ಕವರು. ಎಷ್ಟೋ ನಿರ್ದೇಶಕರಿಗೆ ರಾಜ್ ಅವರ ಅನುಭವದಷ್ಟು ವಯಸ್ಸಾಗಿರಲಿಲ್ಲ. ನಿರ್ಮಾಪಕರಲ್ಲೂ ಅಷ್ಟೆ. ಆದರೆ, ರಾಜ್ ಕುಮಾರ್ ಎಲ್ಲಿಯೂ ನಿರ್ದೇಶಕರು ಮತ್ತು ನಿರ್ಮಾಪಕರ ಬಗ್ಗೆ ಏಕವಚನವನ್ನೂ ಬಳಸಲಿಲ್ಲ. ಸಿನಿಮಾ ಗೆದ್ದಾಗ ತಮಗಿಂತ ಹೆಚ್ಚು ನಿರ್ದೇಶಕರನ್ನು ಕೊಂಡಾಡಿದ್ದರು. ಅದೇ ಸಂಸ್ಕೃತಿ ದೊಡ್ಮನೆಯ ಎಲ್ಲರಲ್ಲೂ ಇದೆ. ಬಹುಶಃ ಉಮಾಪತಿ ಅವರಿಗೆ ಈಗ ಆಗಿರುವ ಅನುಭವ ಈ ಪಾಠ ಕಲಿಸಿದ್ದಿರಬೇಕು.



