ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದು ಡಾ.ರಾಜ್ ಕುಮಾರ್. ಆದರೆ.. ದೇವರು ಎಂದು ಕರೆಸಿಕೊಂಡ ಅಭಿಮಾನಿ ದೇವರಿಗೆ ಮಾತ್ರ ದೊಡ್ಮನೆಯವರೇ ದೇವರು. ಈಗ ಅಭಿಮಾನಿ ದೇವರೊಬ್ಬರು ಪುನೀತ್ ರಾಜ್ ಕುಮಾರ್ ಅವರಿಗಾಗಿ ದೇವಸ್ಥಾನವನ್ನೇ ಕಟ್ಟುತ್ತಿದ್ದಾರೆ. ಇದು ನಡೆದಿರುವುದು ಹಾವೇರಿಯಲ್ಲಿ. ಹಾವೇರಿ ಜಿಲ್ಲೆಯ ಪ್ರಕಾಶ್. ದಿ. ಪುನೀತ್ ರಾಜಕುಮಾರ್ ಅವರನ್ನ ದೇವರಂತೆ ಆರಾಧಿಸುವ ಪ್ರಕಾಶ್ ಅಪ್ಪುಗಾಗಿ ದೇವಾಲಯವನ್ನೇ ನಿರ್ಮಿಸಿದ್ದಾರೆ.
ಯಲಗುಚ್ಚ ಗ್ರಾಮದವರಾದ ಪ್ರಕಾಶ. ವೃತ್ತಿಯಲ್ಲಿ ಮೇಷ್ಟ್ರು. ಅಪ್ಪು ಎಂದರೆ ಈತನಿಗೆ ಪಂಚಪ್ರಾಣ. ಜೀವನದಲ್ಲಿ ಒಮ್ಮೆಯಾದರೂ ಅಪ್ಪು ಜೊತೆಗೆ ಸಿನಿಮಾದಲ್ಲಿ ನಟಿಸಬೇಕು ಎಂದು ಕನಸು ಕಂಡಿದ್ದ ಅಭಿಮಾನಿ. ಈ ವಿಚಾರವಾಗಿ ಹಲವು ಬಾರಿ ಪುನೀತ್ ರಾಜಕುಮಾರ್ ಭೇಟಿಗೆ ತೆರಳಿದ್ದರೂ ಏನೇನೋ ಕಾರಣದಿಂದಾಗ ಸಾಧ್ಯವಾಗಿರಲಿಲ್ಲವಂತೆ. ದೂರದಿಂದಲೇ ನೋಡಿ ಧನ್ಯನಾಗಿದ್ದೆ. ಎಂದಾದರೊಂದು ದಿನ ಭೇಟಿ ಮಾಡುತ್ತೇನೆ ಎಂದುಕೊಂಡಿದ್ದೆ ಎನ್ನುವ ಪ್ರಕಾಶ್, ಅವರ ನಿಧನದ ನಂತರ ದೇವಸ್ಥಾನ ಕಟ್ಟುವ ಸಂಕಲ್ಪ ಮಾಡಿದರು.
ಸುಮಾರು ಐದು ಲಕ್ಷ ರೂಪಾಯಿ ಖರ್ಚು ಮಾಡಿ ಚಿಕ್ಕದಾದ ದೇವಸ್ಥಾನವನ್ನು ಕೊನೆಗೂ ನಿರ್ಮಾಣ ಮಾಡಿದ್ದಾರೆ. ದೇವಸ್ಥಾನಕ್ಕೆ ಅಂತಿಮ ಸ್ಪರ್ಶ ನೀಡಲಾಗ್ತಿದೆ. ಸದ್ಯ ಡಾ. ಪುನೀತ್ ರಾಜಕುಮಾರ ಪ್ರತಿಮೆ ಮಾಡಿಸಲಾಗುತ್ತಿದೆ. ಪ್ರತಿಮೆ ಪೂರ್ಣಗೊಂಡ ಬಳಿಕ ದೇವಸ್ಥಾನದೊಳಗೆ ಪ್ರತಿಷ್ಠಾಪಿಸಿ ದಿ.ಪುನೀತ್ ರಾಜ್‌ಕುಮಾರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಅವರಿಂದಲೇ ಉದ್ಘಾಟನೆ ಮಾಡಿಸುವುದು ಪ್ರಕಾಶ್ ಅವರ ಯೋಜನೆ.
ಎಲ್ಲವೂ ಅಂದುಕೊಂಡಂತೆ ಆದರೆ ಇದೇ ತಿಂಗಳಲ್ಲೇ ಪುನೀತ್ ರಾಜಕುಮಾರ ದೇವಾಲಯ ಉದ್ಘಾಟನೆಯಾಗಲಿದೆ. ದೇವಾಲಯ ನಿರ್ಮಾಣದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ನಾಡಿನಾದ್ಯಂತ ಅಪ್ಪು ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ನಮ್ಮ ಅಪ್ಪು ಯಾವತ್ತೂ ಜೀವಂತ ಎಂದಿದ್ದಾರೆ.
ಪುನೀತ್ ಅವರಿಗಾಗಿ ದೇವಸ್ಥಾನ ಕಟ್ಟುವುದು ಬೇಡ ಎಂದು ಪುನೀತ್ ಅವರ ಅಣ್ಣಂದಿರಾದ ರಾಘವೇಂದ್ರ ಹಾಗೂ ಶಿವಣ್ಣ ಇಬ್ಬರೂ ಅಭಿಮಾನಿಗಳಿಗೆ ಮನವಿ ಮಾಡ್ತಾನೇ ಇದ್ದಾರೆ. ಈ ಹಿಂದೆ ದೇವಸ್ಥಾನ ಕಟ್ಟುವ ಯೋಜನೆಯೊಂದನ್ನು ಕಡೆಯ ಹಂತದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಿಲ್ಲಿಸಿದ್ದರು. ಪುನೀತ್ ಅವರು ಮಾಡುತ್ತಿದ್ದ ಸಮಾಜ ಸೇವೆಯಂತಹ ಕೆಲಸಗಳನ್ನು ಮಾಡಿ, ಅದರಲ್ಲಿ ಅಪ್ಪು ಅವರನ್ನು ಕಾಣಿ ಎನ್ನುವುದು ರಾಘವೇಂದ್ರ ರಾಜ್ ಕುಮಾರ್ ಮನವಿ. ನಟ ರಾಘವೇಂದ್ರ ರಾಜ್ ಕುಮಾರ್ ಕೂಡಾ ಪುನೀತ್ರ ಅಗಲಿಕೆ ರಾಘಣ್ಣನನ್ನು ಕಾಡಿದ್ದು ನಾನು ನಿರುದ್ಯೋಗಿಯಾಗಿದ್ದೆ. ನೀನು ನನಗೆ ಸಮಾಜ ಸೇವೆಯ ಕೆಲಸ ಕೊಟ್ಟಿದ್ದೀಯಾ. ಸಮಾಜಸೇವೆಯಲ್ಲಿ ಮುನ್ನಡೆಯುವಂತೆ ಮಾಡಿದ್ದೀಯಾ. ಸೇವೆ ಮಾಡುವಾಗ ಕಿವುಡರಾಗಿ, ಕುರುಡರಾಗಿರಿ ಇಂತಹ ನಿನ್ನ ಆಲೋಚನೆಗಳು ಬದುಕುವ ಶಕ್ತಿ ನೀಡುತ್ತೆ. ನಿನ್ನ ಆಲೋಚನೆಗಳ ಜೊತೆ ಪ್ರೀತಿಸುತ್ತಾ ಬದುಕುತ್ತೇನೆ ಎಂದು ಹೇಳುತ್ತಾರೆ.
ಇತ್ತೀಚೆಗೆ ಅಂದರೆ ವರ್ಷಗಳ ಹಿಂದೆ ಪುನೀತ್ ಹೆಸರಲ್ಲಿ ಮಾಲೆ ಹಾಕುವ ಸಂಪ್ರದಾಯ ಆರಂಭವಾಗಿತ್ತು. ಅದನ್ನು ಆರಂಭದದಲ್ಲಿಯೇ ವಿರೋಧಿಸಿದ್ದ ರಾಘವೇಂದ್ರ ರಾಜ್ ಕುಮಾರ್, ಅದಕ್ಕೆ ತಮ್ಮ ಬೆಂಬಲ ಇಲ್ಲ. ಪುನೀತ್ ಅವರನ್ನು ದೇವರಾಗಿ ಮಾಡಬೇಡಿ. ದೇವರಂತೆ ನೋಡಬೇಡಿ. ಅವರು ಮಾಡುತ್ತಿದ್ದಂತಹ ಕೆಲಸ ಮಾಡುವ ಮೂಲಕ ದೇವರನ್ನು ಕಾಣಿ ಎಂದು ಪದೇ ಪದೇ ಮನವಿ ಮಾಡುತ್ತಲೇ ಇದ್ದಾರೆ. ಆದರೂ.. ಪ್ರಕಾಶ್ ಅವರಂತಹ ಅಭಿಮಾನಿಗಳು ಹುಟ್ಟಿಕೊಳ್ತನೇ ಇದ್ದಾರೆ.



