ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮಗುರುಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 04-12-2023ರಂದು ಹುಬ್ಬಳ್ಳಿಯಲ್ಲಿ ನಡೆದ ಅವಲಾದ ಗೌಸ ಎ ಆಜಮ್ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಹಲವರು ವೇದಿಕೆ ಹಂಚಿಕೊಂಡಿದ್ದರು. ಅಂತಹವರಲ್ಲಿ ಒಬ್ಬರು ಸೈಯ್ಯದ್ ತನ್ವೀರ್ ಹಾಶ್ಮಿ. ಇದೇ ವೇದಿಕೆಯಲ್ಲಿ ವಿವಿಧ ದರ್ಗಾದ ಪೀಠಾಧೀಶರು, ಸಿಎಂ ಸಿದ್ದರಾಮಯ್ಯ, ಸಚಿವ ಎಚ್ ಕೆ ಪಾಟೀಲ್ ಹಾಗೂ ಇತರೆ ಮಂತ್ರಿಗಳು ಶಾಸಕರು ಉಪಸ್ಥಿತರಿದ್ದರು. ಶಾಸಕ ಹಿಂಡಸಗೇರಿ ಅವರೇ ಈ ಕಾರ್ಯಕ್ರಮದ ಆಯೋಜಕರು. ಇದೀಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೈಯ್ಯದ್ ತನ್ವೀರ್ ಹಾಶ್ಮಿ ಐಸಿಸ್ ಪರ ಇದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರೋಪ ಮಾಡಿರುವುದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಐಸಿಸ್ ಭಯೋತ್ಪಾದಕರ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ತನ್ವಿರ್ ಪೀರಾ ಎಂಬ ಮುಸ್ಲಿಂ ಮೌಲ್ವಿ ಯೆಮೆನ್, ಸೌದಿ ಹಾಗು ಮಧ್ಯ ಪ್ರಾಚ್ಯ ದೇಶಗಳ ಪ್ರವಾಸಗಳ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿರುವ ಚಿತ್ರಗಳು ಇಲ್ಲಿವೆ.’ ಎಂದು ಒಂದು ಟ್ವೀಟ್ ಮಾಡಿದ್ದಾರೆ ಬಸನಗೌಡ ಪಾಟೀಲ ಯತ್ನಾಳ್. ಅಷ್ಟಕ್ಕೇ ಸುಮ್ಮನಾಗಿಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದು ದೂರು ಕೊಟ್ಟಿದ್ದಾರೆ.
ತನ್ವೀರ್ ಹಾಶ್ಮಿ ವಿದೇಶಗಳಿಂದ ಹಣ ತರುವವನು ಹಾಗೂ ಇಲ್ಲಿನ ಮಾಹಿತಿಯನ್ನು ಅಲ್ಲಿಗೆ ನೀಡುವವನು ಎನ್ನುವುದು ಯತ್ನಾಳ್ ಆರೋಪ. ತನ್ವೀರ್ ಅವರು ಐಸಿಸ್ ಜೊತೆ ಪ್ರೀತಿ ಇಟ್ಟುಕೊಂಡಿದ್ದಾರೆ ಎನ್ನುವುದೇ ಗಂಭೀರ ಆರೋಪ. ಆದರೆ ಈ ಕುರಿತು ಯತ್ನಾಳ್ ಅವರು ನೀಡಿರುವ ದಾಖಲೆಗಳು ತನ್ವೀರ್ ಹಾಶ್ಮಿ ಅವರು ಐಸಿಸ್ ಜೊತೆ ನಂಟು ಹೊಂದಿದ್ಧಾರೆ ಎಂದು ಹೇಳುವುದಕ್ಕೆ ಪೂರಕವಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ. ಏಕೆಂದರೆ ತನ್ವೀರ್ ಹಾಶ್ಮಿಯವರೇ ಹೇಳುವ ಪ್ರಕಾರ ಯತ್ನಾಳ್ ತೋರಿಸಿರುವ ಫೋಟೋಗಳು ಅವರದ್ದೇ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಇದ್ದಂತಹ ಫೋಟೋಗಳು.
ನಾನಷ್ಟೇ ಅಲ್ಲ ನನ್ನ ಭಕ್ತರು, ಶಿಷ್ಯರು ಐಸಿಸ್ ಜೋತೆ ನಂಟಿದೆಯೆಂದು ಸಾಬೀತು ಪಡಿಸಿದರೆ ನಾನು ದೇಶ ತ್ಯಾಗ ಮಾಡುತ್ತೇನೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಖಂಡಿಸುವ ಸಮ್ಮೇಳನದಲ್ಲಿ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದೇನೆ. ನನ್ನದೇ ಆಫಿಶಿಯಲ್ ಫೇಸ್ ಬುಕ್ ಅಕೌಂಟನಲ್ಲಿರೋ ಫೋಟೋಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಹತ್ತು ಹನ್ನೆರಡು ವರ್ಷ ಹಿಂದೆ ಇರಾಕ್ ದೇಶದ ಅಂತರಾಷ್ಟ್ರೀಯ ಪ್ರಸಿದ್ದ ಮಹಾನ್ ಸೂಫಿ ಮಹೆಬೂಬ ಎ ಸುಭಾನಿ ಗೌಸ ಎ ಆಜಮ ಅವರ ದರ್ಶನಕ್ಕೆ ಹೋದಾಗಿನ ಪೋಟೋಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಆ ಫೋಟೋದಲ್ಲಿರುವ ಅಲ್ಲಿನ ದರ್ಗಾದ ಖಾಲೀದ ಜಿಲಾನಿ ಅವರ ಫೋಟೋ. ಮತ್ತೊಂದು ಫೋಟೋದಲ್ಲಿ ಖಾಲೀದ ಜಿಲಾನಿಯವರ ಅಂಗರಕ್ಷಕ ನನ್ನನ್ನು ಅವರ ಪೀಠಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಫೋಟೋ ಎಂದಿದ್ದಾರೆ. ಅಷ್ಟೇ ಅಲ್ಲ ಯತ್ನಾಳ್ ಅವರು ಒಂದು ವಾರದೊಳಗೆ ಐಸಿಸ್ ಉಗ್ರರ ಜೊತೆಗೆ ನನ್ನ ನಂಟಿದೆ ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಬೇಕು.ಇಲ್ಲದಿದ್ದರೆ ಶಾಸಕರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕೆಂದು ಸವಾಲು ಹಾಕಿದ್ದಾರೆ. ಯತ್ನಾಳ್ ಆರೋಪಕ್ಕೆ ಸಚಿವ ಎಚ್.ಕೆ.ಪಾಟೀಲ್, ಹಿಂಡಸಗೇರಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಖಂಡಿಸಿದ್ಧಾರೆ.
ತನ್ವೀರ್ ಹಾಶ್ಮೀ ಯಾರು?
ತನ್ವೀರ್ ಹಾಶ್ಮೀ ವಿಜಯಪುರ ಜಿಲ್ಲೆಯವರೇ. ತನ್ವೀರ್ ಹಾಶ್ಮಿ ವಿರುದ್ಧ ಭಯೋತ್ಪಾದನೆಗೆ ಬೆಂಬಲ ನೀಡಿದಂತಹ ಪ್ರಕರಣಗಳೇನೂ ಇಲ್ಲ. ಆದರೆ ವಿವಾದಾತ್ಮಕ, ಕೋಮು ದ್ವೇಷ ಪ್ರಚೋದಿಸಿರುವ ಹೇಳಿಕೆಗಳಂತೂ ಇವೆ. ೨೦೧೮ರಲ್ಲಿ ಇದೇ ತನ್ವೀರ್ ಹಾಶ್ಮಿ ಬಕ್ರೀದ್ ಹಬ್ಬಕ್ಕೆ ಗೋಹತ್ಯೆ ಮಾಡುತ್ತೇವೆ, ಇದನ್ನು ತಡೆಯಲು ಯತ್ನಿಸಿದರೆ ತಡೆಯಲು ಯತ್ನಿಸುವ ಸೈತಾನರನ್ನೂ ಖುರ್ಬಾನಿ ಮಾಡುತ್ತೇವೆ ಎಂದಿದ್ದರು. ಆಗ ಸಚಿವರಾಗಿದ್ದ ಶಿವಾನಂದ ಪಾಟೀಲ್ ಅವರಿದ್ದ ವೇದಿಕೆಯಲ್ಲೆ ಇಂತಹದ್ದೊಂದು ಎಚ್ಚರಿಕೆ ಕೊಟ್ಟಿದ್ದರು. ಆಗ ತನ್ವೀರ್ ಹಾಶ್ಮಿ ವಿರುದ್ಧ ಹಿಂದೂ ಸಂಘಟನೆಗಳಷ್ಟೇ ಅಲ್ಲ, ಮುಸ್ಲಿಂ ಸಮುದಾಯದ ಮುಖಂಡರಾದ ಜಾವೇದ್ ಅಖ್ತರ್ ಅಂತಹವರೇ ಕಿಡಿ ಕಾರಿದ್ದರು. ಜಾತ್ಯತೀತತೆ ಎಂದರೆ ಮುಸ್ಲಿಂ ಮೂಲಭೂತವಾದಿಗಳ ಬಗ್ಗೆ ಮೌನವಾಗಿರುವುದಲ್ಲ, ಈತನ ವಿರುದ್ಧ ಕೇಸು ದಾಖಲಿಸಿ ಎಂದು ಆಗ್ರಹಿಸಿದ್ದರು.
ಇಂತಹ ಹೇಳಿಕೆಗಳಿವೆಯಾದರೂ, ಭಯೋತ್ಪಾದಕರಿಗೆ ಬೆಂಬಲ ನೀಡುವ ಪ್ರಕರಣಗಳಂತೂ ಸದ್ಯಕ್ಕೆ ಇಲ್ಲ. ಸಾಕ್ಷಿಗಳಿದ್ದರೆ ಯತ್ನಾಳ್ ಅವರೇ ಅದನ್ನು ಕೊಡಬೇಕಿದೆ.



